ಬೆಂಗಳೂರು:ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೆಬ್ಬೆಟ್ಟು,ಆರ್ಥಿಕ ಜ್ಞಾನ ಇಲ್ಲದವರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹೇಳಿದ್ದಕ್ಕೆ ಅವರು ಸಹಿ ಹಾಕ್ತಾರೆ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯೆಸ್ ಬ್ಯಾಂಕ್ ದಿವಾಳಿಗೆ ಯುಪಿಎ ಸರ್ಕಾರ ಕಾರಣವಲ್ಲ. ಯುಪಿಎ ಸರ್ಕಾರ ಎಷ್ಟು ಸಾಲ ಕೊಟ್ಟಿತ್ತು, ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟು ಸಾಲ ಕೊಟ್ಟಿದೆ ಎಂಬುದರ ಬಗೆಗಿನ ಮಾಹಿತಿಯನ್ನ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ನೀಡಿದ್ದಾರೆ. 6 ವರ್ಷಗಳಿಂದ ಮೋದಿ ಸರ್ಕಾರ ಏನು ಮಾಡ್ತಿತ್ತು?. ಆರ್ಥಿಕ ಹಿಂಜರಿತಕ್ಕೆ ಬಿಜೆಪಿ ಹಾಗೂ ಕೇಂದ್ರ ಸರ್ಕಾರವೇ ಕಾರಣ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಯಡಿಯೂರಪ್ಪ ಆಡಳಿತ ವೈಖರಿ ಸರಿಯಿಲ್ಲ:ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆದ ಶೇ.10ರಷ್ಟು ಕೆಲಸ ಕೂಡ ಈಗ ಆಗ್ತಿಲ್ಲ. ಯಡಿಯೂರಪ್ಪ ಸೂಪರ್ ಸಿಎಂ, ಅವರದ್ದು ಕಿಚನ್ ಕ್ಯಾಬಿನೆಟ್ ಇದೆ. ಅವರೆಲ್ಲ ಯಾವ ರೀತಿ ಸಲಹೆ ಕೊಡ್ತಿದ್ದಾರೋ ಏನೋ.. ಬರೀ ಕಮಿಷನ್ ಹೊಡೆಯೋದೆ ಕೆಲಸ ಆಗ್ಹೋಗಿದೆ. ಬಜೆಟ್ನಲ್ಲಿ ಎಲ್ಲಿಂದ ದುಡ್ಡು ತರ್ತಾರೆ ಇವರು. ಸಿಎಂ ಯಡಿಯೂರಪ್ಪ ಈಗ ವಿಪಕ್ಷ ಸ್ಥಾನದಲ್ಲಿಲ್ಲ. ಬಾಯಿಗೆ ಬಂದಂತೆ ನಿರ್ಧಾರ ತೆಗೆದುಕೊಳ್ಳೋಕಾಗಲ್ಲ ಎಂದರು.
ದೇಶಕ್ಕೆ ಕಾಂಗ್ರೆಸ್‌ನ ಅಗತ್ಯ ಬಹಳ ಇದೆ:ಕೆಪಿಸಿಸಿ ನಾಯಕತ್ವ ಕುರಿತು ಪ್ರತಿಕ್ರಿಯಿಸಿರುವ ಗುಂಡೂರಾವ್, ಆದಷ್ಟು ಬೇಗ ತೀರ್ಮಾನ ಆಗಬೇಕಿದೆ. ಹೈಕಮಾಂಡ್ ನಿರ್ಧಾರ ಪಕ್ಷದ ಸಂಘಟನೆಗೆ ಸೂಕ್ತವಾಗಿರಬೇಕು. ಕೇಂದ್ರ, ರಾಜ್ಯ ಸರ್ಕಾರದ ಬಹಳಷ್ಟು ಸಂಗತಿಗಳು, ಸಮಸ್ಯೆಗಳಿವೆ. ಅವುಗಳ ವಿರುದ್ಧ ನಾವು ಪಕ್ಷದ ವತಿಯಿಂದ ಹೋರಾಡಬೇಕಾಗುತ್ತದೆ. ಹೀಗಾಗಿ ಈ ಅನಿಶ್ಚಿತತೆ ಆದಷ್ಟು ಬೇಗ ಬಗೆಹರಿಯಬೇಕಿದೆ. ನಾನು ನನ್ನನ್ನೇ ಮುಂದುವರೆಸಿ ಅಂತ ಕೇಳಿಕೊಳ್ಳಲು ಹೋಗಿರಲಿಲ್ಲ, ಕೇಳಲೂ ಇಲ್ಲ. ಎಲ್ಲ ಅಭಿಪ್ರಾಯ ಸಂಗ್ರಹಿಸಿದ್ದೀರಿ, ತೀರ್ಮಾನ ತೆಗೆದುಕೊಳ್ಳಿ ಅಂತ ಕೇಳಿಕೊಂಡಿದ್ದೇನೆ.
ಒಂದು ನಿರ್ಧಾರ ತೆಗೆದುಕೊಂಡರೆ ಅದನ್ನು ಎಲ್ಲರೂ ಫಾಲೋ ಮಾಡ್ತಾರೆ. ನನ್ನ ನೈತಿಕ ಜವಾಬ್ದಾರಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಾನೇ ಮುಂದುವರಿಯುವ ಪ್ರಶ್ನೆಯೇ ಬರುವುದಿಲ್ಲ. ನಾನೇ ಮುಂದುವರಿಯಬೇಕು ಅನ್ನೋ ಲಾಬಿ ಕೂಡ ಮಾಡೋದಿಲ್ಲ. ಏನೋ ಒಂದು ತೀರ್ಮಾನ ಶೀಘ್ರವೇ ಆಗಲಿದೆ. ದೇಶಕ್ಕೆ ಕಾಂಗ್ರೆಸ್‌ನ ಅಗತ್ಯ ಬಹಳ ಇದೆ. ಜನರ ಪರ ನಾವು ನಿಲ್ಲಬೇಕು, ಹೋರಾಡಬೇಕು ಎಂದರು.