ಬೆಂಗಳೂರು: ಬೆಳಗಾವಿ ಮಹಾನಗರ ಪಾಲಿಕೆಗೆ ಆಯ್ಕೆಯಾದ ನೂತನ ಕಾರ್ಪೊರೇಟರ್ಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯದ ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಪಕ್ಷ ಸಂಘಟಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೂಚಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಬೆಳಗಾವಿ ಮಹಾನಗರಪಾಲಿಕೆಯ ಬಿಜೆಪಿಯ ನೂತನ ಕಾರ್ಪೊರೇಟರ್ ಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಕ್ಷವು ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು.
ಮುಂದಿನ ತಿಂಗಳು ಪಕ್ಷದ ಜಿಲ್ಲಾ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಭವಿಷ್ಯದಲ್ಲಿ ಬರಲಿದೆ. ಅದರಲ್ಲಿ ಉತ್ತಮ ಫಲಿತಾಂಶ ಬರಲು ಶ್ರಮಿಸುವಂತೆ ಕರೆ ನೀಡಿದರು.
ಬೆಳಗಾವಿ ಅಭಿವೃದ್ಧಿಗೆ ಮ್ಯಾಪ್ :ಈ ಬಾರಿ ಅಂದರೆ 25 ವರ್ಷದ ಬಳಿಕ ಪಕ್ಷದ ಚಿಹ್ನೆ ಮೇಲೆ ಸ್ಫರ್ಧಿಸುವ ಅವಕಾಶ ನೀಡಲಾಗಿತ್ತು. ಎರಡಂಕಿ ಗೆಲ್ಲಲು ಸಾಧ್ಯವಿಲ್ಲದ ಸ್ಥಳದಲ್ಲಿ ನಾವು ಗೆದ್ದಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರದ ಕೆಲಸದಿಂದ 35 ಸೀಟುಗಳನ್ನ ಗೆದ್ದಿದ್ದೇವೆ ಎಂದು ಶಾಸಕ ಅಭಯ್ ಪಾಟೀಲ್ ಹೆಮ್ಮೆ ವ್ಯಕ್ತಪಡಿಸಿದರು.
ಬೆಳಗಾವಿ ನಗರ ಹೇಗೆ ಅಭಿವೃದ್ಧಿ ಆಗಬೇಕು ಅಂತಾ ಮ್ಯಾಪ್ ತಯಾರಿ ಮಾಡಿದ್ದೇವೆ. ಸಿಎಂ ಗಮನಕ್ಕೆ ಎಲ್ಲವನ್ನೂ ತಂದಿದ್ದೇವೆ. ಬೆಳಗಾವಿ ಮಹಾನಗರ ಪಾಲಿಕೆ ಇತರೆ ಎಲ್ಲಾ ಪಾಲಿಕೆ ಚುನಾವಣೆಗಿಂತ ವಿಶೇಷ. ಬೆಳಗಾವಿ ಜನತೆಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಮೇಯರ್ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಅಭಯ್ ಪಾಟೀಲ್, ಅಧಿವೇಶನ ಮುಗಿದ ಬಳಿಕ ಅಧಿಸೂಚನೆ ಆಗಬೇಕಿದೆ. ಮೇಯರ್ ಯಾರು ಆಗಬೇಕು ಅನ್ನೋ ಬಗ್ಗೆ ಇನ್ನೂ ಚರ್ಚೆ ಆಗುತ್ತಿದೆ. ಈ ಬಗ್ಗೆ ನಿರ್ಧಾರ ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಳಗಾವಿ ಭಾಷಾ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು,ಎಲ್ಲಾ ಭಾಷಿಕರೂ ಕೂಡ ಮತ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಕನ್ನಡ ಧ್ವಜ ಹಾರಾಟ ಮಾಡೋದಕ್ಕೆ ಎಂಇಎಸ್ ಕ್ಯಾತೆ ಮಾಡುವುದು ಸಹಜ. ಎಲ್ಲಾ ಪಕ್ಷದವರನ್ನೂ ಒಟ್ಟಾಗಿ ತೆಗೆದುಕೊಂಡು ಅಭಿವೃದ್ಧಿ ಮಾಡಲು ನಿರ್ಧಾರಿಸಿದ್ದೇವೆ. ವಿವಾದ ರಹಿತ ಆಡಳಿತ ನಡೆಸಲು ನಿರ್ಧಾರ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲದೆ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.