ಬೆಂಗಳೂರು: "ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯವನ್ನು ವೀಕ್ಷಿಸಲು ಜ.22ರಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ರಜೆ ಘೋಷಿಸಬೇಕು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ನಗರದ ಅರಮನೆ ಮೈದಾನದಲ್ಲಿ ಇಂದು ನಡೆದ ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, "ಅನೇಕ ರಾಜ್ಯಗಳು 22ರಂದು ರಜೆ ಘೋಷಿಸಿವೆ. ಕೇಂದ್ರ ಸರ್ಕಾರವೂ ಅರ್ಧ ದಿನ ರಜೆ ಘೋಷಿಸಿದೆ. ರಾಜ್ಯ ಸರ್ಕಾರವೂ ರಜೆ ಪ್ರಕಟಿಸಬೇಕು. ಆ ಮೂಲಕ ಹಿಂದೂಗಳು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡಿ" ಎಂದರು.
"ವಾಲ್ಮೀಕಿ ಸಮಾಜ ಮತ್ತು ಬಿಜೆಪಿ ನಡುವೆ ಅವಿನಾಭಾವ ಸಂಬಂಧವಿದೆ. ಬಿಜೆಪಿ ಮತ್ತು ಎಸ್‍ಟಿ ಸಮಾಜದ ನಡುವೆ ಒಂದು ಅವಿನಾಭಾವ ಸಂಬಂಧ ಹಿಂದಿನಿಂದಲೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಎಸ್‍ಟಿ ಸಮುದಾಯಗಳ ಪಾತ್ರ ದೊಡ್ಡ ಮಟ್ಟದಲ್ಲಿತ್ತು. ಹಿರಿಯರಾದ ಶ್ರೀರಾಮುಲು ಅವರು ಎಲ್ಲ ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ಯಡಿಯೂರಪ್ಪನವರು ಮಾಡಿದ ಅಭಿವೃದ್ಧಿ ಕಾರ್ಯದ ಹಿಂದೆ ವಾಲ್ಮೀಕಿ ಸಮುದಾಯದ ಶಾಸಕರ ತ್ಯಾಗ ಮತ್ತು ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ನುಡಿದರು.
ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಮಟ್ಟದ ಸಮಾವೇಶ ಉದ್ಘಾಟನೆ "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರದ ಅತ್ಯುನ್ನತ ಹುದ್ದೆ ರಾಷ್ಟ್ರಪತಿಗಳ ಸ್ಥಾನಕ್ಕೆ ಎಸ್‍ಟಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದ್ದಾರೆ. ಪ್ರಧಾನಿ ಎಸ್‍ಟಿ ಸಮುದಾಯದ ಬಗ್ಗೆ ಇಟ್ಟ ಕಳಕಳಿಯನ್ನು ಇದು ಸೂಚಿಸುತ್ತದೆ. ಬಿಜೆಪಿ, ಎಸ್‍ಟಿ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ರಾಜ್ಯದಲ್ಲಿ ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ನಿರಂತರ ಹೋರಾಟ ನಡೆದಿತ್ತು. ಮೀಸಲಾತಿ ಪ್ರಮಾಣ ಹೆಚ್ಚಿಸಿದ ಕೀರ್ತಿ ಬಿಜೆಪಿ, ಬಸವರಾಜ ಬೊಮ್ಮಾಯಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ" ಎಂದರು.
"ಕಾಂಗ್ರೆಸ್ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಕೇವಲ ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ, ಬಿಜೆಪಿ ಹಾಗಲ್ಲ. ವಾಲ್ಮೀಕಿ ಜಯಂತಿಗೆ ರಜೆ ಘೋಷಿಸಿದ್ದು ಯಡಿಯೂರಪ್ಪ ಅವರ ಸರ್ಕಾರ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ಇಡೀ ದೇಶದಲ್ಲಿ ಎಸ್‍ಟಿ ಸಮುದಾಯದ ಉನ್ನತಿಗೆ ಕಾರಣರಾದ ಭಗವಾನ್ ಬಿರ್ಸಾ ಮುಂಡ ಅವರ ಜನ್ಮದಿನವನ್ನು ನವೆಂಬರ್ 15ರಂದು ರಾಷ್ಟ್ರೀಯ ಜನಜಾತಿಯ ದಿನವೆಂದು ಆಚರಿಸಲು ತಿಳಿಸಿದ್ದಾರೆ. ಅವರ ಅಪೇಕ್ಷೆಯಂತೆ ಈ ಆಚರಣೆ ನಡೆದಿದೆ" ಎಂದು ತಿಳಿಸಿದರು.
"ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 28ರಲ್ಲಿ 28 ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಕಾಂಗ್ರೆಸ್ ಪಕ್ಷವು ಚುನಾವಣಾ ಗಿಮಿಕ್ ಮಾಡುತ್ತಿದೆ. ಗ್ಯಾರಂಟಿಗಳನ್ನು ಅದಕ್ಕಾಗಿಯೇ ಘೋಷಿಸಿದೆ. ಅದು ಫಲಾನುಭವಿಗಳನ್ನು ಸರಿಯಾಗಿ ತಲುಪುತ್ತಿಲ್ಲ. ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡಲು ಶ್ರಮಿಸುತ್ತಿದೆ. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳೋಣ. ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದ ಸರ್ಕಾರಗಳ ಯೋಜನೆಗಳ ಕುರಿತು ಜನರಿಗೆ ತಿಳಿಸಬೇಕು. ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳೆಲ್ಲರ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡಬೇಕು" ಎಂದು ಮನವಿ ಮಾಡಿದರು.
"ಕೋಟ್ಯಂತರ ಹಿಂದೂಗಳು ಇವತ್ತು ಶ್ರೀರಾಮ ಮಂದಿರದ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆಯನ್ನು ಎದುರು ನೋಡುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಭು ಶ್ರೀರಾಮನ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಶ್ರೀರಾಮಚಂದ್ರ ಇದ್ದಾನೋ ಇಲ್ಲವೋ ಎಂಬಂತೆ ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆ. ಪ್ರಭು ಶ್ರೀರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನಿಸುವ ಕಾಂಗ್ರೆಸ್ ಪಕ್ಷದವರು ಮಹರ್ಷಿ ವಾಲ್ಮೀಕಿಯವರ ರಾಮಾಯಣಕ್ಕೆ ಗೌರವ ಕೊಡುವುದಿಲ್ಲವೇ" ಎಂದು ಪ್ರಶ್ನಿಸಿದರು.
"ಮುಂದಿನ ಲೋಕಸಭಾ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್ ಪಕ್ಷದ ಬೋಗಸ್ ಗ್ಯಾರಂಟಿಗಿಂತ ನರೇಂದ್ರ ಮೋದಿಯವರ ಗ್ಯಾರಂಟಿಯೇ ಶ್ರೇಷ್ಠ ಎಂದು ಸಾಬೀತುಪಡಿಸಿ. ಇದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಮೂಲಕ ಸಾಬೀತಾಗಿದೆ. ಅದನ್ನು ಪುನರಾವರ್ತನೆ ಮಾಡಬೇಕಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಯಡಿಯೂರಪ್ಪ