ಬೆಂಗಳೂರು: ಸಿಬ್ಬಂದಿ ಕೊರತೆ ಹಿನ್ನೆಲೆ ಪೊಲೀಸರ ಜೊತೆಗೂಡಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಮುಂದಾಗುವಂತೆ ನಗರದ ಜನತೆಗೆ ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಮನವಿ ಮಾಡಿದ್ದಾರೆ.
ನಗರದಲ್ಲಿ ಹಲವು ಪೊಲೀಸರಿಗೆ ಕೊರೊನಾ ಸೋಂಕು ತಗಲಿರುವ ಹಿನ್ನೆಲೆ ಸಿಬ್ಬಂದಿ ಕೊರತೆ ಎದುರಾಗಿದೆ. ಹೀಗಾಗಿ ಪೊಲೀಸರ ಜೊತೆಗೂಡಿ ಸ್ವಯಂ ಸೇವಕರಾಗಿ ಕೆಲಸ ಮಾಡಲು ಕೈ ಜೋಡಿಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಗರದ ಜನತೆಗೆ ಆಹ್ವಾನ ನೀಡಿದ್ದಾರೆ. ಆಯುಕ್ತರ ಮನವಿಗೆ ಸ್ಪಂದಿಸುವಂತೆ ಡಿಸಿಪಿ ರೋಹಿಣಿ ಕಟೋಚ್ ವಿನಂತಿಸಿಕೊಂಡಿದ್ದಾರೆ.
ದಕ್ಷಿಣ ವಿಭಾಗ ಡಿಸಿಪಿ ಡಾ. ರೋಹಿಣಿ ಕಟೋಚ್ ಒಂದು ವಾರದ ಲಾಕ್ ಡೌನ್ ಅವಧಿಯಲ್ಲಿ ಸಿಬ್ಬಂದಿ ಕೊರತೆಗೆ ಪರಿಹಾರ ಕಂಡುಕೊಳ್ಳಲು ನಗರದ ಜನತೆ ಪೊಲೀಸರ ಜೊತೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿ ವೈದ್ಯರು, ವಿದ್ಯಾರ್ಥಿಗಳು, ಟೆಕ್ಕಿಗಳು, ಇಂಜಿನಿಯರ್ಗಳು ಸೇರಿದಂತೆ ಸುಮಾರು 8 ಸಾವಿರ ಮಂದಿ ಪೊಲೀಸರೊಂದಿಗೆ ಕೈಜೋಡಿಸಿದ್ದರು. ಸದ್ಯ ಲಾಕ್ ಡೌನ್ ಮುಕ್ತಾಯಗೊಂಡಿದೆ. ಆದರೆ, ಇನ್ನು ಮುಂದೆಯೂ ಕೂಡ ಸಹಕಾರ ಮುಂದುವರೆಸುವಂತೆ ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು ನಗರದ ಜನತೆಗೆ ಕರೆ ನೀಡುವ ಮೊದಲೇ ಡಿಸಿಪಿ ಡಾ. ರೋಹಿಣಿ ಕಟೋಚ್, ತನ್ನ ಕಾರ್ಯಕ್ಷೇತ್ರವಾದ ದಕ್ಷಿಣ ವಿಭಾಗದಲ್ಲಿ ಕಮ್ಯುನಿಟಿ ಪೊಲೀಸಿಂಗ್ನ್ನು ಪರಿಚಯಿಸಿದ್ದರು. ಸ್ವಯಂ ಸೇವಕರಿಗೆ ಪೊಲೀಸರ ಜೊತೆಗೂಡಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟು, ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಸ್ವಯಂ ಸೇವಕರು ಪೊಲೀಸರ ಜೊತೆಗೂಡಿ ಭಾನುವಾರದ ಲಾಕ್ ಡೌನ್ ವೇಳೆ ಕಾರ್ಯ ನಿರ್ವಹಿಸುತ್ತಾರೆ. ಅಲ್ಲದೆ, ಮಾಸ್ಕ್ ಹಾಕದವರಿಗೆ ತಿಳಿ ಹೇಳುವುದು, ನಾಕಬಂದಿ, ನೈಟ್ ಬೀಟ್ ಈ ರೀತಿಯ ಹಲವು ಕೆಲಸಗಳನ್ನು ಮಾಡುತ್ತಾರೆ.