ಬೆಂಗಳೂರು: ಲೋಕೋಪಯೋಗಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 7699 ಕೋಟಿ ರೂ. ಅನುದಾನವನ್ನು ನಿಗದಿಪಡಿಸಲಾಗಿದ್ದು, ಅಗತ್ಯವಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಸೂಚಿಸಿದ್ದಾರೆ.
ವಿಕಾಸ ಸೌಧದಲ್ಲಿ ಇಂದು ಸಂಜೆ ನಡೆದ ವಲಯ ಮತ್ತು ಘಟಕವಾರು ಪ್ರಗತಿ ಪರಿಶೀಲನೆಯ ಅಧ್ಯಕ್ಷತೆ ವಹಿಸಿ ಇಲಾಖೆಯ ಮ್ಯಾನೇಜ್ಮೆಂಟ್ ಇನ್ ಫರ್ಮೆಂಟೇಶನ್ ಸಿಸ್ಟಮ್ 2019 ಪುಸಕ್ತ ಬಿಡುಗಡೆ ಮಾಡಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ರಸ್ತೆಗಳ ಅಭಿವೃದ್ಧಿಗಾಗಿ ಮತ್ತು ನಿರ್ವಹಣೆಗಾಗಿ 'ವಾರ್ಷಿಕ ಯೋಜನೆ' ತಯಾರಿಸಿದ್ದು, ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸುವಾಗ ಈ ರಸ್ತೆಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದು ಹೇಳಿದರು.
ರಸ್ತೆ ಮತ್ತು ಕಟ್ಟಡಗಳ ನಿರ್ವಹಣೆಗಾಗಿ ಈಗಾಗಲೇ 652.00 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಈ ಮೊತ್ತದಲ್ಲಿ ಮುಂಗಾರು ಪೂರ್ವ ರಸ್ತೆ ನಿರ್ವಹಣೆಯನ್ನು ಹಾಗೂ ಕಟ್ಟಡಗಳ ವಾರ್ಷಿಕ ನಿರ್ವಹಣೆಯನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆರ್‌ಐಡಿಎಫ್-25ರ ಯೋಜನೆಯಡಿ 718 ಕೋಟಿ ರೂ. ಮೊತ್ತದಲ್ಲಿ 3243 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಕಾಮಗಾರಿಗಳಿಗೆ ಶೀಘ್ರವಾಗಿ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಪ್ರಾರಂಭಿಸಿ ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಲ್ಲಿ ಇಲಾಖೆಯ ಅನುದಾನದಲ್ಲಿ ಈ ಸಾಲಿನಲ್ಲಿ 22 ರಾಣೆ ಚೆನ್ನಮ್ಮ/ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಕೀರ್ಣ ಕಾಮಗಾರಿಗಳನ್ನು ಹಾಗೂ 80 ಎಸ್‌ಸಿ ಎಸ್‌ಟಿ ಮಕ್ಕಳ ವಸತಿ ನಿಲಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ನಿವೇಶನಗಳನ್ನು ಒದಗಿಸಿದ್ದು, ಈ ನಿವೇಶನಕ್ಕೆ ಅನುಗುಣವಾಗಿ ಕಟ್ಟಡಗಳ ವಿನ್ಯಾಸವನ್ನು ಕೈಗೊಂಡು ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಎಲ್ಲಾ ವಸತಿ ನಿಲಯಗಳ ಆವರಣಗಳಲ್ಲಿ ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ತಿಳಿಸಿದರು.