ಕರ್ನಾಟಕ

karnataka

By

Published : Sep 9, 2020, 4:48 PM IST

ETV Bharat / state

ಕೋವಿಡ್ -19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ ಮಾಡಿದ ಡಿಸಿಎಂ..ಇವುಗಳ ವಿಶೇಷತೆ ಗೋತ್ತಾ..?

ಈ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕದ ಅನ್ವೇಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ ನವೋದ್ಯಮಗಳನ್ನು ಅಭಿನಂದಿಸಿದರು.

ಕೋವಿಡ್ -19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ
ಕೋವಿಡ್ -19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ

ಬೆಂಗಳೂರು: ಕೋವಿಡ್ -19 ಪಿಡುಗು ನಿಯಂತ್ರಿಸಲು ನೆರವಾಗುವ ಹಾಗೂ ಸೋಂಕು ಸಂಕಷ್ಟದ ಸಂದರ್ಭದಲ್ಲಿ ಕರ್ನಾಟಕದ ಅನ್ವೇಷಣಾ ಸಾಮರ್ಥ್ಯ ಪ್ರತಿಬಿಂಬಿಸುವ 22 ಉತ್ಪನ್ನಗಳನ್ನು ಐಟಿ/ ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದು ವಿಧಾನಸೌಧದಲ್ಲಿ ಲೋಕಾರ್ಪಣೆಗೊಳಿಸಿದರು.

ಇಲಾಖೆಯ ಕರ್ನಾಟಕ ಅವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆಯ (KITS) ಆಶ್ರಯದಲ್ಲಿ ಬೆಂಗಳೂರು ಬಯೋ ಇನ್ನೊವೇಷನ್ ಸೆಂಟರ್ (ಬಿಬಿಸಿ- ಬೆಂಗಳೂರು ಜೈವಿಕ ಆವಿಷ್ಕಾರ ಕೇಂದ್ರ) ಮೇಲ್ವಿಚಾರಣೆಯಡಿ 6 ಉತ್ಪನ್ನಗಳು ಅಭಿವೃದ್ಧಿಗೊಂಡಿದ್ದರೆ, ಕೆಐಟಿಎಸ್ ನ ಕರ್ನಾಟಕ ನವೋದ್ಯಮ ಕೋಶದ (ಕರ್ನಾಟಕ ಸ್ಟಾರ್ಟ್ ಅಪ್ ಸೆಲ್) ಮೇಲ್ವಿಚಾರಣೆಯಡಿ 16 ಉತ್ಪನ್ನಗಳು ಅಭಿವೃದ್ಧಿಗೊಂಡಿವೆ.

ಕೋವಿಡ್ -19 ನಿಯಂತ್ರಕ ಉಪಕರಣಗಳ ಲೋಕಾರ್ಪಣೆ

ಈ ಉತ್ಪನ್ನಗಳು ಬೆಂಗಳೂರಿನ ಮತ್ತು ಕರ್ನಾಟಕದ ಅನ್ವೇಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿತೋರಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ ಅವರು, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ ನವೋದ್ಯಮಗಳನ್ನು ಅಭಿನಂದಿಸಿದರು.

ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಬಿಸಿ ಛೇರ್ ಮ್ಯಾನ್ ಡಾ.ಇ.ವಿ.ರಮಣ ರೆಡ್ಡಿ, ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದವರನ್ನು ಮುಂದಿನ ಹಂತದಲ್ಲಿ ಕರ್ನಾಟಕ ನವೋದ್ಯಮ ಕೋಶ ಹಾಗೂ ಬಿಬಿಸಿ ಮೂಲಕ ಸೂಕ್ತ ವ್ಯಾಪಾರ ಪಾಲುದಾರರೊಂದಿಗೆ ಸಂಪರ್ಕಿಸಲಾಗುವುದು ಎಂದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ್ತಿ ಮತ್ತು ರಾಷ್ಟ್ರೀಯ ವಿಜ್ಞಾನ ಹಾಗೂ ತಂತ್ರಜ್ಞಾನ ಉದ್ಯಮಶೀಲತಾ ಅಭಿವೃದ್ಧಿ ಆಯೋಗದ (NSTEDB) ಮುಖ್ಯಸ್ಥೆ ಡಾ.ಅನಿತಾ ಗುಪ್ತಾ, ಬಿಬಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್, ರಾಜ್ಯದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಸಿ.ಎನ್. ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.

ಎಂಒಯು : ಇದೇ ಸಂದರ್ಭದಲ್ಲಿ ಮುಂಬೈನ ಐಐಟಿ-ಎಸ್ ಐಎನ್ ಇ ಮತ್ತು ಬಿಬಿಸಿ ನಡುವೆ ಪರಸ್ಪರ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಉತ್ಪನ್ನ ಆಯ್ಕೆ ಹೇಗೆ? : ಕರ್ನಾಟಕ ನವೋದ್ಯಮ ಕೋಶವು ‘ಕೋವಿಡ್-19 ಚಾಲೆಂಜ್’ ಶೀರ್ಷಿಕೆಯಡಿ ಅನ್ವೇಷಣಾಕಾರದಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಇದಕ್ಕೆ 3 ಹಂತಗಳಲ್ಲಿ 356 ಅರ್ಜಿಗಳು ಬಂದಿದ್ದವು. ಉದ್ಯಮ ಸಂಘಟನೆಗಳು ನಿರ್ದೇಶನ ಮಾಡಿದ ಸ್ವತಂತ್ರ ಜ್ಯೂರಿಯು ಕ್ರಮಬದ್ಧ ಮೌಲ್ಯಮಾಪನ ನಡೆಸಿದೆ. ವಿನೂತನತೆ, ಸಂಶೋಧನೆಯ ಕಾಲಮಿತಿ, ತಯಾರಿಕಾ ಸಾಮರ್ಥ್ಯ, ತಂಡದ ಶಕ್ತಿ, ಪ್ರಮಾಣಪತ್ರ ಮತ್ತು ಅನುಪಾಲನೆಗಳು ಇತ್ಯಾದಿಗಳನ್ನು ಆಧರಿಸಿ ಈ 16 ಉತ್ಪನ್ನಗಳನ್ನು ಆಯ್ಕೆ ಮಾಡಲಾಗಿದೆ.

ಲೋಕಾರ್ಪಣೆಗೊಂಡ ಉತ್ಪನ್ನಗಳ ಕುರಿತು ಕಿರು ಮಾಹಿತಿ:

ನ್ಯೂಕ್ಲಿಯೋಡಿಎಕ್ಸ್ ಆರ್ ಟಿ : ಕೋವಿಡ್ 19 ಪತ್ತೆ ಹಚ್ಚಲು RT PCR ನಲ್ಲಿ ಬಳಸುವ ಆರ್ ಎನ್ ಎ ಐಸೋಲೇಷನ್ ವಿಧಾನ ಇದಾಗಿದೆ. ಇದು ಸರಳ ಹಾಗೂ ತಗುಲುವ ವೆಚ್ಚ ಕಡಿಮೆ.

ಕೋವಿಡ್​ಎಕ್ಸ್ ಎಂಪ್ಲೆಕ್ಸ್ 3R ಮತ್ತು 4R : ವಂಶವಾಹಿನಿಗಳನ್ನು ಬಳಸಿ ಕೋವಿಡ್ -19 ವೈರಸ್ ಪತ್ತೆಹಚ್ಚುವ ಇನ್-ವಿಟ್ರೋ RT PCR ಗುಣಾತ್ಮಕ ಪರೀಕ್ಷೆ ವಿಧಾನ ಇದಾಗಿದೆ. ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಇದರ ಉತ್ಪಾದನೆಗೆ ಐಸಿಎಂಆರ್ ಅನುಮೋದನೆ ನೀಡಿದೆ.

ಡಾ.ತಾಪಮಾನ್ : ದೇಹದ ಉಷ್ಣತೆಯನ್ನು ಅಳೆದು ಕೋವಿಡ್-19 ದೃಢಪಡಿಸುವ ಉಪಕರಣ ಇದಾಗಿದೆ. ಪ್ರಮುಖ ವ್ಯತ್ಯಾಸವೇನೆಂದರೆ, ಇದು ಈಗಿರುವ ಇದೇ ರೀತಿಯ ಬೇರೆ ಉತ್ಪನ್ನಗಳಂತೆ ವಿಕಿರಣವನ್ನು ಹೊರಸೂಸುವುದಿಲ್ಲ, ಹೀಗಾಗಿ, ಬಳಕೆದಾರ ಸ್ನೇಹಿಯಾದ ಇದನ್ನು ಸಂಪೂರ್ಣ ದೇಶೀಯವಾಗಿ ರೂಪಿಸಿರುವುದು ಮತ್ತೊಂದು ಹೆಮ್ಮೆ ಎಂಬುದು ಇದನ್ನು ಅಭಿವೃದ್ಧಿಪಡಿಸಿದ ಡಾ.ಲತಾ ದಾಮ್ಲೆ ಅವರ ವಿವರಣೆ.

ಎಸ್ಎಎಫ್ಎಇ ಬಯೋಸೆಕ್ಯುರಿಟಿ ಸಲ್ಯೂಷನ್ಸ್: ಸ್ವಯಂಚಾಲಿತವಾಗಿ ದೇಹದ ಉಷ್ಣತೆ, ರಕ್ತದಲ್ಲಿನ ಆಮ್ಲಜನಕ ಮಟ್ಟಗಳನ್ನು ಅಳೆಯಬಲ್ಲದು. ಸ್ವಯಂಚಾಲಿತ ಹ್ಯಾಂಡ್ ವಾಷ್ ಸಾಧ್ಯವಾಗಿಸುತ್ತದೆ. ದೇಹವನ್ನು, ಬಟ್ಟೆಗಳನ್ನು ಮತ್ತು ಸಾಮಾನು ಸರಂಜಾಮುಗಳನ್ನು ಸಂಪೂರ್ಣ ಸೋಂಕು ಮುಕ್ತಗೊಳಿಸುತ್ತದೆ. ಜೊತೆಗೆ ಇದನ್ನು ಅಳವಡಿಸಿದ ಜಾಗದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಸೋಂಕಿಗೆ ಒಳಗಾದವರನ್ನೂ ಪತ್ತೆ ಮಾಡುತ್ತದೆ. ಸಂಫೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕ ನವೋದ್ಯಮ ಕೋಶದ ಉತ್ಪನ್ನಗಳು:

ಕ್ವೋಂಚ್ (Qonch): ಸ್ಮಾರ್ಟ್ ಐಡಿ ಕಾರ್ಡ್ ಹೋಲ್ಡರ್ ಹೊಂದಿದ ಐಒಟಿ ಪ್ಲ್ಯಾಟ್ ಫಾರ್ಮ್ ಇದಾಗಿದೆ. ವ್ಯಾಪಾರೋದ್ದಿಮೆಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಹೆಚ್ಚಿನ ವಿಶ್ವಾಸದೊಂದಿಗೆ ಪುನಃ ಆರಂಭಿಸಲು ಇದು ಸಹಕಾರಿ. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದಕ್ಕೂ ಸಹಕರಿಸುತ್ತದೆ. ಜೊತೆಗೆ ಹಾಜರಾತಿ, ಜಿಯೋ-ಫೆನ್ಸಿಂಗ್ ಇತ್ಯಾದಿಗೆ ಕೂಡ ಬಳಸಬಹುದು.

AMPWORK ಪ್ಲ್ಯಾಟ್ ಫಾರ್ಮ್:ಸರ್ಕಾರಕ್ಕೆ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು, ಮೇಲ್ವಿಚಾರಣೆ ಮಾಡಲು ಹಾಗೂ ಅವಲೋಕಿಸುವ ನಿಟ್ಟಿನಲ್ಲಿ ವ್ಯಾಪಾರೋದ್ದಿಮೆಗಳು, ಆಡಳಿತ ವರ್ಗ, ಜನರು ಮತ್ತು ಆರೋಗ್ಯ ಸೇವಾ ವಲಯದಲ್ಲಿರುವವರು ಒಟ್ಟಿಗೆ ಸೇರಿ ಕೆಲಸ ಮಾಡಲು ಅನುವು ಮಾಡಿಕೊಡುವ ವೇದಿಕೆ ಇದಾಗಿದೆ.

ರೆಸ್ಪಿರ್ ಏಯ್ಡ್ (RespirAID): ರೋಗಿಗಳ ಉಸಿರಾಟಕ್ಕೆ ನೆರವಾಗುವಂತಹ ಸ್ವಯಂಚಾಲಿತ ಉಪಕರಣ. ಇದು ಸುರಕ್ಷಿತ, ವಿಶ್ವಾಸಾರ್ಹ, ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಲು ಸುಲಭ ಹಾಗೂ ದರ ಕೂಡ ಕಡಿಮೆ. ತುರ್ತು ನಿಗಾ ವೇಳೆ, ರೋಗಿಗಳನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಕರೆದುಕೊಂಡು ಹೋಗುವಾಗ ಹಾಗೂ ಶಸ್ತ್ರಚಿಕಿತ್ಸೆ ನಂತರದ ಅರಿವಳಿಕೆ ಸಂದರ್ಭಗಳಲ್ಲಿ ಬಳಸಬಹುದು.

ಇಎಂವಿಲಿಯೋ (Emvlio): ಲಸಿಕೆಗಳು, ರಕ್ತ, ಸೆರಂ ಇತ್ಯಾದಿಯನ್ನು ಕರಾರುವಾಕ್ಕಾದ ಉಷ್ಣತೆಯಲ್ಲಿ ಸಾಗಿಸಲು ಅನುವು ಮಾಡಿಕೊಡುವ ವೈದ್ಯಕೀಯ ದರ್ಜೆಯ ರೆಫ್ರಿಜರೇಟರ್ ವ್ಯವಸ್ಥೆ ಇದಾಗಿದೆ. ದೋಷಪೂರಿತ ನೆಗೆಟಿವ್ ಫಲಿತಾಂಶ ತಡೆಗಟ್ಟುತ್ತದೆ. ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಬಳಸಲಾಗುತ್ತಿದೆ.

ಪಿಕ್ಸುಯೇಟ್: ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ತಪಾಸಣೆಗೆ ನಿಲ್ಲುವಂತೆ ಮಾಡುವ ಅನಿವಾರ್ಯತೆಯನ್ನು ನಿವಾರಿಸುತ್ತದೆ. ಯಾವುದೇ ವ್ಯಕ್ತಿಯು ಹಾದು ಹೋಗುತ್ತಿರುವಾಗ 3-5 ಮೀಟರ್ ಸುರಕ್ಷಿತ ಅಂತರದಿಂದಲೇ ದೇಹದ ಉಷ್ಣತೆಯನ್ನು ಕೃತಕ ಬುದ್ಧಿಮತ್ತೆ ಆಧರಿಸಿ ಅಳೆಯುತ್ತದೆ. ಪ್ರತಿಯೊಬ್ಬರ ತಾಪಮಾನವನ್ನು ದಾಖಲಿಸುತ್ತದೆ. ಜೊತೆಗೆ, ಹೆಚ್ಚು ಉಷ್ಣತೆ ಇರುವವರು ಒಳಬಂದಾಗ ಎಚ್ಚರಿಕೆ ಕೊಡುತ್ತದೆ.

AskDocಕೋವಿಡ್-19 ರೋಗ ಪ್ರಸರಣ ಹಾಗೂ ಸೋಂಕು ನಿಯಂತ್ರಣ ಕುರಿತ ಪ್ರಶ್ನೆಗಳಿಗೆ ಬಹು ಭಾಷೆಯಲ್ಲಿ ಧ್ವನಿ ಹಾಗೂ ಪಠ್ಯದ ಮೂಲಕ ಉತ್ತರಿಸುವ ಡಾಕ್ಟರ್ ವಿಡಿಯೊಬಾಟ್ ಇದಾಗಿದೆ.

ಡೋಜೀ: ಹಾಸಿಗೆಯ ತಳಭಾಗದಲ್ಲಿ ಇಡಬಹುದಾದ ತೆಳ್ಳನೆಯ ಸೆನ್ಸಾರ್ ಷೀಟ್ ಇದಾಗಿರುತ್ತದೆ. ರೋಗಿಯ ಹೃದಯ ಬಡಿತ, ಉಸಿರಾಟ, ಆಮ್ಲಜನಕ ಮಟ್ಟ ಮತ್ತಿತರ ಅಂಶಗಳ ಮಾಪನ ಮಾಡಿ ಸಂಬಂಧಿಸಿದ ವೈದ್ಯರಿಗೆ ತಕ್ಷಣವೇ ರವಾನಿಸುತ್ತದೆ. ವೈರ್ ಬಳಕೆ ಇಲ್ಲದೇ ರೋಗಿಗಳ ಮೇಲೆ ಸತತ ನಿಗಾ ಇಡಬಹುದು. ನರ್ಸ್ ಗಳು ಕೂಡ ರೋಗಿಯ ಬಳಿಗೇ ಬಂದು ಮಾಪನ ಮಾಡುವ ಅಗತ್ಯ ಇರುವುದಿಲ್ಲ. ಈಗಾಗಲೇ 20ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕೋವಿಡ್ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ. ಮನೆಯಲ್ಲೇ ಇರುವ ರೋಗಿಗಳ ಮೇಲ್ವಿಚಾರಣೆಗೂ ಅನುಕೂಲಕರ. ಈಗಾಗಲೇ 47 ಪ್ರಕರಣಗಳಲ್ಲಿ ಇದು ಜೀವರಕ್ಷಕ ಎಂಬುದು ದೃಢಪಟ್ಟಿದೆ.

ಹೈಲೋಬಿಜ್: ಇದು ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಉಪಯುಕ್ತ. ಇನ್ ವಾಯ್ಸ್ ಗಳನ್ನು ಕಳಿಸುವುದು, ಜ್ಞಾಪನ ಪತ್ರಗಳನ್ನು ಕಳಿಸುವುದು, ನಗದು ಪಾವತಿ, ವಿಮೆ ಮತ್ತಿತರ ಸೇವೆಗಳನ್ನು ಏಕಗವಾಕ್ಷಿ ಮೂಲಕ ಪಡೆಯಬಹುದು.

ABOUT THE AUTHOR

...view details