ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನು ಪ್ರಶ್ನಿಸಿದ ಮೇಲ್ಮನವಿ ಅರ್ಜಿಯನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಿಂಪಡೆದಿದ್ದಾರೆ.
ಸಿಬಿಐ ತನಿಖೆಗೆ ಹಿಂದಿನ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ಅಲ್ಲದೆ, ನಮ್ಮ ಅಭಿಪ್ರಾಯದ ಪ್ರಕಾರ ಇಲ್ಲಿಯವರೆಗೆ ಸಿಬಿಐ ತನಿಖೆಗೆ ಅನುಮೋದನೆ ನೀಡಿರುವುದನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಪ್ರಶ್ನಿಸಲಾಗಿಲ್ಲ. ಹೀಗಾಗಿ, ಸಿಬಿಐ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದರು) ಅವರ ವಾದವನ್ನು ಪರಿಗಣಿಸಲಾಗದು. ಮೇಲ್ಮನವಿದಾರರು ಅರ್ಜಿ ಮತ್ತು ಮೇಲ್ಮನವಿ ಹಿಂಪಡೆಯಲು ಅನುಮತಿ ಕೋರಿರುವುದಕ್ಕೆ ಸಮ್ಮತಿಸಿದ್ದು, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಸುಪ್ರಿಂಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಹಿರಿಯ ವಕೀಲ ಉದಯ್ ಹೊಳ್ಳ ಮೇಲ್ಮನವಿ ಅರ್ಜಿ ಹಿಂಪಡೆಯುವುದಾಗಿ ತಿಳಿಸಿ ಮೆಮೋ ಸಲ್ಲಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥ ಪಡಿಸಿ ಆದೇಶಿಸಿತು.
ಇದಕ್ಕೂ ಮುನ್ನ, ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರ ಜೊತೆಗೆ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ. ಈ ಸಂಬಂಧ ಡೆಲ್ಲಿ ಎಸ್ಟಾಬ್ಲಿಷ್‌ಮೆಂಟ್ ಕಾಯಿದೆಯ ಸೆಕ್ಷನ್ 6 ಸ್ಪಷ್ಟಪಡಿಸಿದ್ದು, ಒಮ್ಮೆ ಅನುಮೋದನೆ ಹಿಂಪಡೆದರೆ ತನಿಖೆ ಮುಂದುವರಿಸಲು ಅವರಿಗೆ ಅವಕಾಶವಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ರಾಜ್ಯ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರವನ್ನು ಆದೇಶದಲ್ಲಿ ತಿಳಿಸಲಾಗಿದೆ. ಸಿಬಿಐ ಮತ್ತು ಮಧ್ಯಪ್ರವೇಶಿಕೆ ಅರ್ಜಿದಾರರು ಆಧರಿಸಿರುವ ಖಾಜಿ ದೋರ್ಜಿ ವರ್ಸಸ್ ಸಿಬಿಐ ಪ್ರಕರಣವು ಹಾಲಿ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಪೀಠ ತಿಳಿಸಿತು.
ಸಿಬಿಐ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್, ಅರ್ಜಿ ಮತ್ತು ಮೇಲ್ಮನವಿ ಅರ್ಜಿ ಹಿಂಪಡೆಯುವುದಾಗಿ ಮೇಲ್ಮನವಿದಾರರ ಪರ ವಕೀಲರು ಹೇಳಿದ್ದಾರೆ. ಅರ್ಜಿ ಹಿಂಪಡೆಯುವುದಕ್ಕೆ ನಮ್ಮ ಆಕ್ಷೇಪವಿದೆ. ಮೇಲ್ಮನವಿ ಹಿಂಪಡೆಯುವುದಕ್ಕೆ ಆಕ್ಷೇಪವಿಲ್ಲ. ಎಫ್‌ಐಆರ್ ಅನ್ನು ಸರ್ಕಾರ ಹಿಂಪಡೆಯಲಾಗದು. ನ್ಯಾಯಾಲಯ ಮಾತ್ರ ಸಿಆರ್ಪಿಸಿ ಸೆಕ್ಷನ್ 482ರ ಅಡಿ ಎಫ್‌ಐಆರ್ ವಜಾ ಮಾಡಬಹುದು ಎಂದು ವಿವರಿಸಿದರು.
ಅಲ್ಲದೆ, 2019ರ ಸೆಪ್ಟೆಂಬರ್ 25ರಂದು ಸಿಬಿಐಗೆ ನೀಡಿರುವ ಅನುಮೋದನೆಯ ಭಾಗವಾಗಿ ಎಫ್‌ಐಆರ್ ದಾಖಲಿಸಿ, ಪ್ರಕ್ರಿಯೆ ನಡೆಸಲಾಗುತ್ತಿದೆ. ಭಾಗಶಃ ತನಿಖೆಯು ನಡೆದಿದೆ. 1994ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿದ್ದು, ರಾಜ್ಯ ಸರ್ಕಾರ ಅನುಮತಿ ಪಡೆಯಬಾರದು. ಇದನ್ನು ಒಪ್ಪಲಾಗದು, ಅದು ಊರ್ಜಿತ್ವವಾಗುವುದಿಲ್ಲ ಎಂದು ಹೇಳಿದರು.
ಇದಕ್ಕೆ ಪೀಠವು ನೀವು (ಸಿಬಿಐ) ಎಫ್‌ಐಆರ್ ವಿಚಾರದಲ್ಲಿ ಮುಂದುವರಿಯಬಹುದು. ಕಾನೂನಿನಲ್ಲಿ ಅನುಮತಿ ಇದ್ದರೆ ನೀವು ಮುಂದುವರಿಯಬಹುದು. ನಿಮ್ಮ ಎಫ್‌ಐಆರ್ ವಿಚಾರವನ್ನು ಮೈಲಿ ದೂರದಲ್ಲಿಟ್ಟಿದ್ದೇವೆ ಎಂದು ಪೀಠ ತಿಳಿಸಿತು.
ಶಿವಕುಮಾರ್ ಪರ ವಕೀಲರು, ರಾಜ್ಯ ಸರ್ಕಾರವು ನವೆಂಬರ್ 28ರಂದು ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮೋದನೆ ಹಿಂಪಡೆದು ಆದೇಶ ಮಾಡಿದೆ. ಹೀಗಾಗಿ, ಅರ್ಜಿಯು ಅಮಾನ್ಯಗೊಂಡಿದೆ. ಈ ನೆಲೆಯಲ್ಲಿ ಅರ್ಜಿ ಮತ್ತು ರಿಟ್ ಮೇಲ್ಮನವಿ ಹಿಂಪಡೆಯಲು ಅನುಮತಿಸಬೇಕು” ಎಂದು ಕೋರಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.
ಅರ್ಜಿಯಲ್ಲಿ ಮಧ್ಯಂತರ ಮನವಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಪರ ವಕೀಲರು, ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು ಅಗತ್ಯವಿದ್ದಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರೆ, ಸಮಾಜಕ್ಕೆ ಯಾವ ಸಂದೇಶ ನೀಡಿದಂತೆ. ಇಡೀ ಸರ್ಕಾರದ ಸಂಪುಟ ಮೇಲ್ಮನವಿದಾರರೊಂದಿಗೆ ಸೇರಿಕೊಂಡಿದೆ. ಖಾಸಗಿ ವ್ಯಕ್ತಿ ಈ ರೀತಿಯಲ್ಲಿ ಮಾಡಿದರೆ ಒಪ್ಪಬಹುದು, ಸರ್ಕಾರವೇ ಈ ರೀತಿಯ ನಿರ್ಧಾರಕ್ಕೆ ಮುಂದಾದರೆ ಹೇಗೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಈ ನಿರ್ಧಾರ ಒಪ್ಪುವಂತದ್ದಲ್ಲ. ಸಂಪುಟ ಅಷ್ಟು ಬೇಗ ತೀರ್ಮಾನ ಕೈಗೊಂಡಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ರಾಜ್ಯ ಸರ್ಕಾರ ಅತಿ ವೇಗವಾಗಿ ಕೆಸಲಗಳನ್ನು ಮಾಡುತ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಕುಮಾರ್ ಪರ ವಕೀಲ, ಮಧ್ಯಂತರ ಅರ್ಜಿ ಸಲ್ಲಿಸುವವರು ಪ್ರಕರಣದಲ್ಲಿ ಈವರೆಗೂ ಭಾಗಿಯಲ್ಲ. ಅವರಿಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಇದೀಗ ಮಧ್ಯಂತರ ಅರ್ಜಿ ಸಲ್ಲಿಸಿದರೆ ವಾದ ಮಂಡಿಸಲು ಅವಕಾಶ ನೀಡಬಾರದು ಎಂದು ಕೋರಿದರು.
ಈ ವೇಳೆ ನ್ಯಾಯಪೀಠ ಮಧ್ಯಂತರ ಅರ್ಜಿ ಸಲ್ಲಿಸಿರುವವರು ಮೇಲ್ಮನವಿ ಅರ್ಜಿಯಲ್ಲಿ ಮಧ್ಯ ಪ್ರವೇಶಕ್ಕೆ ಇರುವ ಅವಕಾಶವನ್ನು ಹೊರತುಪಡಿಸಿ ಸಂಪುಟದ ನಿರ್ಧಾರವನ್ನು ಪ್ರಶ್ನಿಸಲು ಹಲವು ಅವಕಾಶಗಳಿವೆ. ಆದರೆ, ನಾವು(ಪೀಠ) ಈ ಸ್ಥಳದಲ್ಲಿ ಕೂತಿದ್ದಾಗ ಕಾನೂನುಗಳ ಅನ್ವಯ ಮಾತ್ರ ನಿರ್ಧಾರ ಕೈಗೊಳ್ಳಬೇಕು. ಅದನ್ನು ಹೊರತುಪಡಿಸಿ ಬೇರೇನನ್ನೂ ಮಾಡಲಾಗುವುದಿಲ್ಲ ಎಂದು ತಿಳಿಸಿತು.
ಈ ವೇಳೆ ಮಧ್ಯಪ್ರವೇಶ ಮಾಡಿದ ಅರ್ಜಿದಾರರು ತಮ್ಮ ಮೇಲ್ಮನವಿಯನ್ನು ಹಿಂಪಡೆದಿದ್ದರೆ, ಅದೇ ಅರ್ಜಿಗೆ ಸಂಬಂಧಿಸಿದಂತೆ ವಾದಿಸಲು ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇತ್ತೀಚೆಗೆ ಆದೇಶ ಹಿಂಪಡೆದಿದ್ದ ಸಚಿವ ಸಂಪುಟ: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸಿಬಿಐ ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶವನ್ನು ಇತ್ತೀಚೆಗೆ(ನ.23) ರಾಜ್ಯ ಸಂಪುಟ ಸಭೆಯಲ್ಲಿ ಹಿಂಪಡೆಯಲಾಗಿತ್ತು.
ಈ ಕುರಿತು ಸಂಪುಟ ಸಭೆ ಬಳಿಕ ಮಾತನಾಡಿದ್ದ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರು, ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು. ಆದ್ರೆ ಕಾನೂನಾತ್ಮಕವಾಗಿ ಸಭಾಧ್ಯಕ್ಷರಿಂದ ಅನುಮತಿ ಪಡೆಯದೇ ಸಿಬಿಐ ತನಿಖೆಗೆ ಕೇಸ್ಅನ್ನು ವಹಿಸಿತ್ತು. ಸರ್ಕಾರದ ಅಂದಿನ ನಿರ್ಣಯ ಕಾನೂನು ಪ್ರಕಾರ ಇರಲಿಲ್ಲವೆಂದು ತಿಳಿಸಿದ್ದರು. ಅಲ್ಲದೆ, ತಮ್ಮ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡಿದ್ದರು.
ಓದಿ:ಕಳ್ಳಕಾಕರ ರಕ್ಷಣೆಗೆ ಸರ್ಕಾರ ಮುಂದಾಗಿದೆ: ಹೆಚ್ ಡಿ ಕುಮಾರಸ್ವಾಮಿ ಟೀಕೆ
ಬಿಜೆಪಿ ವಾಗ್ದಾಳಿ:ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುದು ಅಕ್ಷಮ್ಯ ಅಪರಾಧ. ಶಿವಕುಮಾರ್ ಅವರನ್ನು ರಕ್ಷಿಸಲು ರಾಜ್ಯ ಸರ್ಕಾರ ಕಾನೂನು ಬಾಹಿರ ತೀರ್ಮಾನ ಕೈಗೊಂಡಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ನವೆಂಬರ್ 25ರಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಬಿ ಎಸ್ ಯಡಿಯೂರಪ್ಪ ಅವರು, ಈ ಬಗ್ಗೆ ದಾಖಲೆ ಸಮೇತ ಬೆಳಗಾವಿ ಅಧಿವೇಶನದಲ್ಲಿ ಪಕ್ಷದ ಶಾಸಕರು ಮಾತನಾಡುತ್ತಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಅಡ್ವೋಕೇಟ್ ಜನರಲ್ ಒಪ್ಪಿಗೆಯ ಮೇರೆಗೆ ಸಿಬಿಐ ತನಿಖೆಗೆ ವಹಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪದಲ್ಲಿ ಹುರುಳಿಲ್ಲ ಎಂದು ತಿರುಗೇಟು ನೀಡಿದ್ದರು.