ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಮುಖಂಡರ ಜತೆ ಸೋಮವಾರ ಸಂಜೆ ಸಭೆ ನಡೆಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ ವಿಧಾನಸಭೆ ಚುನಾವಣೆ ಬೆನ್ನಲ್ಲೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಬಿಬಿಎಂಪಿ ಚುನಾವಣೆ ಸಹ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕಾಂಗ್ರೆಸ್ ಪರವಾಗಿ ಬಿಬಿಎಂಪಿಯನ್ನು ಕೈವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಜನಪ್ರತಿನಿಧಿಗಳಿಗೆ ಸೂಚನೆ ಕೊಟ್ಟರು.
"ಯಾವುದೇ ಕಾರಣಕ್ಕೂ ಬೆಂಗಳೂರು ನಗರದ ಹಿಡಿತವನ್ನು ಕಾಂಗ್ರೆಸ್ ಕಳೆದುಕೊಳ್ಳಬಾರದು. ವಿಧಾನಸಭೆ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದ ಮಟ್ಟದ ಸ್ಥಾನಗಳು ಬಂದಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಬಿಬಿಎಂಪಿ ಚುನಾವಣೆಯಲ್ಲಿ ಅತಿ ಹೆಚ್ಚು ವಾರ್ಡ್ಗಳಲ್ಲಿ ಗೆದ್ದು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಇದಕ್ಕೆ ನಮ್ಮ ಶಾಸಕರು ಇರುವ ಕ್ಷೇತ್ರ ವ್ಯಾಪ್ತಿಯಲ್ಲಿ ವಿಶೇಷ ಪ್ರಯತ್ನ ನಡೆಯಬೇಕಿದೆ. ಇದರ ಜೊತೆ ಜೊತೆಗೆ ನಮ್ಮ ಶಾಸಕರಿಲ್ಲದ ಕ್ಷೇತ್ರಗಳಿಗೂ ಅಕ್ಕ -ಪಕ್ಕದ ಕ್ಷೇತ್ರದ ಪ್ರಭಾವಿ ಶಾಸಕರು ಅಥವಾ ಸಚಿವರು ವಿಶೇಷ ಗಮನ ಕೊಡಬೇಕಿದೆ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಉತ್ಸಾಹದಲ್ಲಿ ಬೆಂಗಳೂರು ನಗರದ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಇದ್ದಾರೆ. ಇವರನ್ನು ಇನ್ನಷ್ಟು ಹುರಿದುಂಬಿಸಿ ಮುಂಬರುವ ಬಿಬಿಎಂಪಿ ಚುನಾವಣೆಗೆ ಅಣಿಗೊಳಿಸಿ" ಎಂದು ಸೂಚಿಸಿದರು.
ರಾಜ್ಯ ರಾಜಧಾನಿ ಕಾಂಗ್ರೆಸ್ ಹಿಡಿತದಲ್ಲಿದ್ದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಗರದ ಪ್ರಮುಖ ಮೂರು ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಅನುಕೂಲ ಆಗಲಿದೆ. ಇದರ ಜತೆಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದರೂ ಅದಕ್ಕೂ ಸಹ ಎಲ್ಲರೂ ಸಿದ್ದರಿರಬೇಕು. ಬಿಬಿಎಂಪಿ ಚುನಾವಣೆ ಬಳಿಕ ಇದು ನಡೆಯುವ ಸಾಧ್ಯತೆ ಇದ್ದು, ನಮ್ಮ ಪಕ್ಷದ ಮುಖಂಡರು ಗೆಲುವಿಗಾಗಿ ಹೆಚ್ಚಿನ ಶ್ರಮ ತೊಡಗಿಸಬೇಕು. ಅತ್ಯಂತ ಪ್ರಮುಖವಾಗಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 20 ಸ್ಥಾನವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ ಎಂದರು.