ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಮೊದಲ ಬಾರಿಗೆ ''ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ'' ಎಂಬ ಹೆಸರಿನಲ್ಲಿ ಕೆ.ಆರ್.ಪುರ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಜನಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ಬಿಎಂಆರ್ಡಿಎ, ಜಲಮಂಡಳಿ, ಕಂದಾಯ ಹಾಗೂ ಬೆಸ್ಕಾಂಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಗಮನ ಸೆಳೆದರು.
ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಹಾಗೂ ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತಿಳಿಸಿದರು. ಶಾಸಕ ಬೈರತಿ ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಕುಡಿಯುವ ನೀರಿನ ಹಾಹಾಕಾರವಿದೆ. ಸುತ್ತಲಿನ 110 ಹಳ್ಳಿಗಳಿಗೆ ನೀರು ಒದಗಿಸಲು ಅನುದಾನ ಕಲ್ಪಿಸಬೇಕು. ಹಳೇ ಮದ್ರಾಸ್ ರಸ್ತೆಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಫ್ಲೈ ಓವರ್ ಮಾಡಬೇಕೆಂಬ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಯೋಜನೆ ಪ್ರಸ್ತಾಪಿಸಿತ್ತು. ಆದರೆ ಈ ಯೋಜನೆ ತಡೆಹಿಡಿಯಲಾಗಿದ್ದು, ಇದನ್ನ ಮುಂದುವರೆಸಬೇಕು ಎಂದರು.
ಕ್ಷೇತ್ರದಲ್ಲಿರುವ 11 ವಾರ್ಡ್ಗಳಲ್ಲಿ ಒಳಚರಂಡಿ ವ್ಯವಸ್ಥೆಗೆ ಅನುದಾನ, ಐಟಿಐನಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಅದನ್ನು ತೆರವುಗೊಳಿಸಬೇಕು. ಕೆರೆಗಳ ಆಭಿವೃದ್ಧಿ ಮಾಡಬೇಕು. ಸೂಕ್ತ ಮಳೆನೀರುಗಾಲುವೆ ಇಲ್ಲದಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. 110 ಹಳ್ಳಿಗಳಿಗೆ ಒಳಚರಂಡಿ, ನೀರಿನ, ಸಂಸ್ಕರಣಾ ಘಟಕಗಳ ನಿರ್ಮಾಣ ಕಾಮಗಾರಿ ಸಮಸ್ಯೆಗೆ ಅನುದಾನ ಕಲ್ಪಿಸಬೇಕು. ಕಳೆದ ಸರ್ಕಾರದಲ್ಲಿ ಹೆಚ್ಚಿನ ಅನುದಾನ ತರಲಾಗಿತ್ತು. ವಿವಿಧ ಕಾರಣಗಳಿಗಾಗಿ ಸರ್ಕಾರವು ಅನುದಾನ ಕಡಿತಗೊಳಿಸಿದೆ. ಬೆನ್ನಿಗಾನಹಳ್ಳಿ ಮೆಟ್ರೋ ರೈಲು ನಿಲ್ದಾಣದ ಹೆಸರನ್ನು ಉದಯನಗರ ಮೆಟ್ರೋ ನಿಲ್ದಾಣಕ್ಕೆ ಬದಲಿಸಬೇಕು ಎಂದು ಮನವಿ ಮಾಡಿದರು.
ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ನಗರದ ಶೇ.80ರಷ್ಟು ಕಸ ಕ್ಷೇತ್ರದ ಮಿಟಗಾನಹಳ್ಳಿ ಕ್ವಾರಿಗೆ ಬರುತ್ತಿದೆ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕಸ ಬರುವುದನ್ನು ತಡೆಯಬೇಕು. ರಾಜಕಾಲುವೆಗಳಲ್ಲಿ ಹೂಳೆತ್ತುವ ಕೆಲಸವಾಗುತ್ತಿಲ್ಲ. ನಗರದ ಶೇ. 80ರಷ್ಟು ಮಲೀನ ನೀರು ಕ್ಷೇತ್ರದಲ್ಲೇ ಹರಿಯುತ್ತಿದೆ. ಇದರಿಂದ ಸಮಸ್ಯೆಗಳು ಉಂಟಾಗುತ್ತಿದ್ದು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.