ಬೆಂಗಳೂರು:ಸಾರ್ವಜನಿಕ ಹುದ್ದೆಗಳನ್ನು ಖಾಸಗೀಕರಣ ಮಾಡುತ್ತಿದ್ದು, ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗದೇ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು. ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಚಾಲನಾ ಸಮಿತಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ ದಲಿತರ ಸಾಂಸ್ಕ್ರತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಉದ್ಯೋಗಾವಕಾಶಗಳಲ್ಲಿ ಬಹುತೇಕ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ. ಗುತ್ತಿಗೆ ಮತ್ತು ಖಾಸಗಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಿರುವಾಗ ಮೀಸಲಾತಿ ಹೆಚ್ಚಳ ಮಾಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸರ್ಕಾರ ದಲಿತರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಮೀಸಲಾತಿ ಹೆಚ್ಚಳ ಮಾಡಿದರೂ ಸರ್ಕಾರಿ ಹುದ್ದೆಗಳು ಇಲ್ಲದಿದ್ದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ. ಈ ನಿಟ್ಟಿನಲ್ಲಿ ದಲಿತರು ತಮ್ಮ ಮೀಸಲು ಹಕ್ಕನ್ನು ಪಡೆದುಕೊಳ್ಳುವುದಕ್ಕಾಗಿ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ.
ರಾಜ್ಯದಲ್ಲಿ ದಲಿತರಿಗೆ ಮಂಜೂರು ಮಾಡಿದ್ದ ಜಮೀನುಗಳನ್ನು ಪರಭಾರೆ ಮಾಡದಂತೆ ಇದ್ದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯಿದೆ(ಕೆಲ ಜಮೀನುಗಳ ಹಸ್ತಾಂತರ ನಿರ್ಷೇಧ) ಕಾಯಿದೆ 1978(ಪಿಟಿಸಿಎಲ್) ಕಾಯಿದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಈ ವರ್ಗದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮತ್ತೆ ಆ ಕಾಯಿದೆಗೆ ತಿದ್ದುಪಡಿ ತರಬೇಕು ಎಂಬ ಬೇಡಿಕೆಗಳು ಎದುರಾಗಿವೆ. ಆದರೆ, ಸರ್ಕಾರಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಆದ್ದರಿಂದ ದಲಿತರ ವರ್ಗಗಳು ಒಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಸೂಚನೆ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಪ್ರಸ್ತುತ ಹಿಂದೂ ದೇವಾಲಯಗಳಲ್ಲಿ ಮುಸ್ಲಿಮರಿಗೆ ಮಾರಾಟ ಮಳಿಗೆಗಳನ್ನು ಪ್ರಾರಂಭಿಸುವುದಕ್ಕೆ ವಿರೋಧಿಸುತ್ತಿದ್ದಾರೆ. ಇದನ್ನು ತಡೆಯದಿದ್ದಲ್ಲಿ ಮುಂದೊಂದು ದಿನ ದಲಿತರಿಗೂ ದೇವಾಲಯಗಳ ಬಳಿ ಯಾವುದೇ ವ್ಯಾಪಾರ ವ್ಯವಹಾರ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಚ್ಚರಿಕೆ ನೀಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಿಂದ ದೇಶದಲ್ಲಿ ಸಮಾನತೆಗೆ ಕಾರಣವಾಗಿದೆ. ದೇಶದಲ್ಲಿ ದಲಿತರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಉನ್ನತ ಹುದ್ದೆಗಳಿಗೇರಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಮುಂದಿನ 10 ವರ್ಷಗಳಲ್ಲಿ ಡಿಸೇಲ್ ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧ: ಸಚಿವ ಮುರುಗೇಶ್ ನಿರಾಣಿ ಅಭಿಮತ