ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಿಯೋಜಿತನಾದ ಸಂದರ್ಭದಿಂದಲೂ ತಮ್ಮನ್ನು ತಡೆಯುವ ಹಾಗೂ ಹತ್ತಿಕ್ಕುವ ಯತ್ನ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ರಾಜೀವ್ ಗಾಂಧಿ ಭವನದಲ್ಲಿ ಅವರು ಮಾತನಾಡಿ, ಇಂದು ನನ್ನ ಬಲ ತುಂಬಿದ್ದು, ಪಕ್ಷದ ಕಾರ್ಯಕರ್ತರು. ನಾನು ವ್ಯಕ್ತಿ ಪೂಜಕನಲ್ಲ. ಪಕ್ಷ ಪೂಜಕನಲ್ಲ. ನಾವು ಸಾಕಷ್ಟು ಸಂಕಷ್ಟದ ಸ್ಥಿತಿಯಲ್ಲಿ ಹೋರಾಡಿದ್ದೇವೆ ಎಂದರು.
ನನಗೆ ಪಕ್ಷದ ಕಾರ್ಯಕರ್ತರು ಬಲವಾಗಿ ನಿಂತರು. ಪಾದಯಾತ್ರೆ ಸಂದರ್ಭ, ಕೋವಿಡ್ ಸಂದರ್ಭ ನಿಮ್ಮ ಸಹಕಾರ ಅವಿಸ್ಮರಣೀಯ. ಜನರಿಗೆ ಪಕ್ಷದ ಕಾರ್ಯಕರ್ತರು ಸಹಕಾರ, ಕೈಲಾದ ಸೇವೆ ಸಲ್ಲಿಸಿದ್ದೀರಿ ಎಂದು ಕೊಂಡಾಡಿದರು. ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಗರದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು 70 ಸಾವಿರ ಮಂದಿ ಝೂಮ್ ಮೂಲಕ ವೀಕ್ಷಿಸುತ್ತಿದ್ದಾರೆ.
ಪಕ್ಷದ ಬಲ ವೃದ್ಧಿಸುತ್ತೇನೆ: ಇದರ ಹೊರತಾಗಿ ಆನ್ಲೈನ್ ಮೂಲಕ ಲಕ್ಷಾಂತರ ಮಂದಿ ವೀಕ್ಷಿಸುತ್ತಿದ್ದಾರೆ. ನಾವು ಉಪಚುನಾವಣೆ, ಪರಿಷತ್ ಚುನಾವಣೆ ಗೆದ್ದಿದ್ದೇವೆ. ಅವರಿಗೆ ಭರವಸೆ ನೀಡುತ್ತಿದ್ದೇನೆ, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರನ್ನು ಜತೆಯಲ್ಲಿ ಕೊಂಡೊಯ್ದು ರಾಜ್ಯದಲ್ಲಿ ಪಕ್ಷದ ಬಲ ವೃದ್ಧಿಸುತ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಕೈಕಟ್ಟಿ ಪಾಲಿಸುತ್ತೇನೆ ಎಂದು ಡಿ ಕೆ ಶಿವಕುಮಾರ್ ವಾಗ್ದಾನ ಮಾಡಿದರು.
ಪಕ್ಷ ಅಧಿಕಾರಕ್ಕೆ ಬರಲಿ. ಅದಾದ ಬಳಿಕ ಸಾಕಷ್ಟು ಕ್ರಮ, ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ನಾವೆಲ್ಲಾ ಒಟ್ಟಾಗಿ ಹೋದರೆ ಗೆಲುವು ಕಷ್ಟವಲ್ಲ. ಪ್ರತಿಭೂತ್ನಲ್ಲಿಯೂ ಡಿಜಿಟಲ್ ವ್ಯವಸ್ಥೆ ಅಳವಡಿಸಿದ್ದೇವೆ. ಇಂದಿನ ಸಮಾರಂಭ ಸಹ ಡಿಜಿಟಲ್ ಸಾಧನೆಯ ಯಾವ ಸೌಕರ್ಯ ಬಳಸಿಕೊಂಡಿದೆ ಎಂಬುದಕ್ಕೆ ಸಾಕ್ಷಿ. ಕಳೆದ 70 ವರ್ಷ ನಾವು ಮಾಡಿದ ಸಾಧನೆ ನಮ್ಮ ಕಣ್ಣ ಮುಂದಿದೆ. ಮುಂದಿನ ನಮ್ಮ ಬದ್ಧತೆ ಹಾಗೂ ಗುರಿ ರಾಜ್ಯವನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಅರ್ಪಿಸುವುದಾಗಿದೆ ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ನಾವು ಉದ್ಯೋಗ ನೀಡಿಕೆ, ಮಹಿಳಾ ಸಬಲೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ರಾಜ್ಯ ಕಾಂಗ್ರೆಸ್ ರಾಜ್ಯ ಉಸ್ತುವಾರಿ ತಿಂಗಳಲ್ಲಿ 15 ದಿನ ಇಲ್ಲಿರುವುದಾಗಿ ಭರವಸೆ ನೀಡಿದ್ದಾರೆ. ನಾವು ಇದೇ ತಿಂಗಳು ಚಿಂತನ- ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಿಎಲ್ಪಿ ನಾಯಕರ ಜತೆ ಮಾತುಕತೆ ನಡೆಸಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆಯನ್ನು ನಾನು ಮಾಡಲ್ಲ. ಪಕ್ಷದ ತಳ ಮಟ್ಟದ ನಾಯಕರು ಹಾಗೂ ರಾಷ್ಟ್ರೀಯ ನಾಯಕರು ಮಾಡಲಿದ್ದಾರೆ ಎಂದರು.
ಪೂರ್ಣ ಜನಾಶೀರ್ವಾದ ಲಭಿಸಿಲ್ಲ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ನಾವು ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಅನೈತಿಕ ಸರ್ಕಾರ ಇದೆ. ಬಿಜೆಪಿ ಯಾವಾಗಲೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಪೂರ್ಣ ಜನಾಶೀರ್ವಾದ ಲಭಿಸಿಲ್ಲ. ಆಪರೇಷನ್ ಕಮಲ ಮೂಲಕ ಯಡಿಯೂರಪ್ಪ ಎರಡೂ ಬಾರಿ ಅಧಿಕಾರ ಹಿಡಿದರು.