ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ಮತ್ತೊಮ್ಮೆ ವಿಚಾರಣೆಗೆ ಕರೆದಿರುವುದನ್ನ ಖಂಡಿಸಿ ಇದೇ 26 ರಂದು ಮೌನ ಸತ್ಯಾಗ್ರಹ ಮಾಡಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಇದೇ 26 ರಂದು ವಿಚಾರಣೆಗೆ ಬರುವಂತೆ ಸೋನಿಯಾ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೆ ಸಮನ್ಸ್ ಜಾರಿ ಮಾಡಿದ್ದಾರೆ. ನನ್ನ ಪ್ರಕರಣದಲ್ಲಿ ನನ್ನ ತಾಯಿಗೂ ಇದೇ ರೀತಿ ಕಿರುಕುಳ ನೀಡಿದ್ದರು. ಆ ಸಂದರ್ಭದಲ್ಲಿ ಮನೆಯಲ್ಲೇ ವಿಚಾರಣೆ ಮಾಡಲು ನ್ಯಾಯಾಲಯದ ಮೊರೆ ಹೋಗಿದ್ದೆ. ಆದರೆ, ಸೋನಿಯಾ ಗಾಂಧಿ ಅವರು ನ್ಯಾಯಾಲಯದ ಮೊರೆ ಹೋಗದೆ ಧೈರ್ಯವಾಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ಆದರೂ ಕಿರುಕುಳ ನಿಲ್ಲುತ್ತಿಲ್ಲ. ಹೀಗಾಗಿ, ಬೆಂಗಳೂರಿನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ನ ಎಲ್ಲ ನಾಯಕರು, ಶಾಸಕರು, ಬ್ಲಾಕ್ ಅಧ್ಯಕ್ಷರು, ಕಾರ್ಪೊರೇಟರ್, ಮಾಜಿ ಕಾರ್ಪೊರೇಟರ್, ಪಕ್ಷದ ಪದಾಧಿಕಾರಿಗಳು ಎಲ್ಲರೂ 26 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮೌನ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.
ನನ್ನ ಬಳಿ ಚರ್ಚೆ ಮಾಡಿಲ್ಲ: ಚೆಲುವರಾಯಸ್ವಾಮಿ, ಬಾಲಕೃಷ್ಣ ಅವರ ಜತೆ ಶನಿವಾರ ರಾತ್ರಿ ಸಮಾಲೋಚನೆ ಕುರಿತ ಪ್ರಶ್ನೆಗೆ ಭಾರತ ಜೋಡೋ ಪಾದಯಾತ್ರೆ ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣ, ನಾಗಮಂಗಲ, ಮೇಲುಕೋಟೆ, ಪಾಂಡವಪುರ, ಮಾರ್ಗವಾಗಿ ತುಮಕೂರು ಜಿಲ್ಲೆ ಪ್ರವೇಶಿಸಲಿದೆ. ಇದಕ್ಕೆ ಸಂಬಂಧಿಸಿದ ತಯಾರಿ ಕುರಿತು ಚರ್ಚೆ ಮಾಡಿದ್ದೇವೆ. ಪಕ್ಷದ ಸಂಘಟನೆ ವಿಚಾರ ಹೊರತುಪಡಿಸಿ ಬೇರೆ ವಿಚಾರವಾಗಿ ಯಾವುದೇ ನಾಯಕರು ನನ್ನ ಬಳಿ ಚರ್ಚೆ ಮಾಡಿಲ್ಲ. ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.