ಕರ್ನಾಟಕ

karnataka

ETV Bharat / state

ನಿಮಗೆ ಗೊತ್ತಿಲ್ಲದೇ ನಿಮ್ಮ ಫಿಂಗರ್ ಪ್ರಿಂಟ್ 5 ಸಾವಿರಕ್ಕೆ ಮಾರಾಟ: ಬ್ಯಾಂಕ್​ ಖಾತೆಯಿಂದ ಹಣ ದೋಚುತ್ತಾರೆ ಎಚ್ಚರ! - ಸೈಬರ್ ವಂಚಕರ

ಬೆಂಗಳೂರಿನ ಈಶಾನ್ಯ ವಿಭಾಗದಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಗಳ ಸಂಬಂಧ ಐವರನ್ನ ಬಂಧಿಸಲಾಗಿದ್ದು, ಇನ್ನುಳಿದವರಿಗೆ ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

Etv Bharatcyber-fraudsters-sell-your-fingerprint-for-5-thousand-and-steal-money-from-the-bank
ನಿಮಗೆ ಗೊತ್ತಿಲ್ಲದೆ ನಿಮ್ಮ ಫಿಂಗರ್ ಪ್ರಿಂಟ್ 5 ಸಾವಿರಕ್ಕೆ ಮಾರಾಟ: ನಿಮ್ಮ ಬ್ಯಾಂಕ್​ ಖಾತೆಯಿಂದ ಹಣ ದೋಚುತ್ತಾರೆ ಎಚ್ಚರ!

By ETV Bharat Karnataka Team

Published : Jan 16, 2024, 10:52 PM IST

ಬೆಂಗಳೂರು: ಆಧಾರ್ ನಂಬರ್ ಜೊತೆ ವಿಲೀನಗೊಂಡಿರುವ ಫಿಂಗರ್ ಪ್ರಿಂಟ್ ಬಳಸಿ ಸಾರ್ವಜನಿಕರಿಗೆ ಅರಿವಿಲ್ಲದಂತೆ ಲಕ್ಷಾಂತರ ರೂಪಾಯಿ ದೋಚುತ್ತಿದ್ದ ಸೈಬರ್ ವಂಚಕರ ನಾಗಾಲೋಟಕ್ಕೆ ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ. ಹೌದು, ಕಂದಾಯ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರಿ ಇಲಾಖೆಯಲ್ಲಿ ಸಾರ್ವಜನಿಕವಾಗಿ ಕಾಣಸಿಗುವ ಬಯೋಮೆಟ್ರಿಕ್ ಕದ್ದು, ಗ್ರಾಹಕರ ಸೋಗಿನಲ್ಲಿ ಆನ್​ಲೈನ್ ಮುಖಾಂತರ ಬ್ಯಾಂಕ್ ನಲ್ಲಿ ಹಣ ವಿತ್​ ಡ್ರಾ ಮಾಡಿ ವಂಚಿಸುವ ಪ್ರಕರಣಗಳು ಹೆಚ್ಚಾಗುತಿತ್ತು.

ಈ ಹಿನ್ನೆಲೆ ಕಂದಾಯ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಕ್ರಯಪತ್ರದಲ್ಲಿ (ಸೆಲ್ ಡೀಡ್) ಆಧಾರ್ ಸಂಖ್ಯೆ ಜೊತೆ ಬೆರಳಚ್ಚನ್ನು ಡೌನ್ ಲೋಡ್ ಮಾಡಿಕೊಂಡು ವ್ಯವಸ್ಥಿತ ಸಂಚು ರೂಪಿಸಿ ಹಣ ಎಗರಿಸುವ ಸಂಬಂಧ ಸೆಲ್ ಡೀಡ್ ಪ್ರತಿಯನ್ನ ಜಾಲತಾಣದಲ್ಲಿ ಸುಲಭವಾಗಿ ಸಿಗದಂತೆ ಹಾಗೂ ಗೌಪ್ಯತೆ ಕಾಪಾಡಲು ನಗರ ಪೊಲೀಸ್ ಇಲಾಖೆಯು ಬರೆದಿದ್ದ ಪತ್ರಕ್ಕೆ ಕಂದಾಯ ಇಲಾಖೆಯು ಸ್ಪಂದಿಸಿ ಸಾರ್ವಜನಿಕರಿಗೆ ಸಂಬಂಧಿಸಿದ ದಾಖಲಾತಿಗಳನ್ನ ಸುಲಭವಾಗಿ ಕಾಣಿಸದಂತೆ ಮಾಡಿದ ಫಲವಾಗಿ ರಾಜಧಾನಿಯಲ್ಲಿ ಎಇಪಿಎಸ್ ಪ್ರಕರಣಗಳು ಕ್ರಮೇಣ ಕಡಿಮೆಯಾಗಿವೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರೆಂಡ್​ಗೆ ತಕ್ಕಂತೆ ಸೈಬರ್ ಖದೀಮರು ಅಪ್​ಡೇಟ್ ಆಗಿದ್ದು, ಬೆರಳಚ್ಚು ಬಳಸಿ ಗ್ರಾಹಕರಿಗೆ ಯಾವುದೇ ಒಟಿಪಿ, ಸಂದೇಶ ಬರದೇ ಹಣ ಎಗರಿಸುತ್ತಿದ್ದು, ನಗರದ ಎಂಟು ಸಿಇಎನ್ ಠಾಣೆ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದುವರೆಗೂ 128 ಎಇಪಿಎಸ್ ಪ್ರಕರಣ ದಾಖಲಾಗಿವೆ. ಅಪರಾಧ ಸ್ವರೂಪದ ಗಂಭೀರತೆ ಅರಿತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ತನಿಖೆ ಜವಾಬ್ದಾರಿ ವಹಿಸಿಕೊಂಡ ಡಿಸಿಪಿ ನಗರದಲ್ಲಿ ದಾಖಲಾಗಿರುವ ಪ್ರಕರಣಗಳ ಸಮಗ್ರ ಮಾಹಿತಿ ಪಡೆದು ಪ್ರಾಥಮಿಕ ತನಿಖೆ ನಡೆಸಿದಾಗ ಬಿಹಾರ, ಉತ್ತರಪ್ರದೇಶ ಹಾಗೂ ದೆಹಲಿ ಸೇರಿ ಕೆಲ ಉತ್ತರ ಭಾರತದ ರಾಜ್ಯಗಳ‌ ಆರೋಪಿಗಳೇ ಕೃತ್ಯವೆಸಗಿರುವುದು ಕಂಡು ಬಂದಿತ್ತು. ಈ ಸಂಬಂಧ ವಿಶೇಷ ತಂಡವು ಈಶಾನ್ಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ ಐದು ಪ್ರಕರಣಗಳಲ್ಲಿ ಬಿಹಾರ ಮೂಲದ ಮತ್ತಿರುಹಮಾನ್, ಅಬುಜರ್, ಮೊಹಮ್ಮದ್ ಪರ್ವಾಜ್, ಎಂಡಿ ಆರೀಫ್, ನಾಶೀರ್ ಅಹಮದ್ ಎಂಬುವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಒಂದು ಫಿಂಗರ್ ಪ್ರಿಂಟ್​ 5 ಸಾವಿರಕ್ಕೆ ಮಾರಾಟ:ಬಿಹಾರ ಮೂಲದ ವಂಚಕರು ಸ್ಥಳೀಯವಾಗಿ ಕಸ್ಟಮರ್ ಸರ್ವಿಸ್ ಸೆಂಟರ್ ಇಟ್ಟುಕೊಂಡಿದ್ದರು. ಬೆರಳಚ್ಚು ಬಳಸಿ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಬಂಧಿತರ ಕೆಲವರು ಸುಲಭವಾಗಿ ಆಧಾರ್ ನಂಬರ್ ಹಾಗೂ ಬೆರಳಚ್ಚು ಸಿಗುವ ಸರ್ಕಾರಿ ಜಾಲತಾಣಗಳಲ್ಲಿ ಲಭ್ಯವಾಗುವ ದಾಖಲಾತಿಗಳನ್ನ ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು‌. ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಸರ್ಕಾರಿ ಇಲಾಖೆಯ ವೆಬ್​ಸೈಟ್ ಗಳಲ್ಲಿ ಸಿಗುವ ಬೆರಳಚ್ಚು ಹಾಗೂ ಆಧಾರ್ ನಂಬರ್ ಇರುವ ದಾಖಲಾತಿ ಕದಿಯುತ್ತಿದ್ದರು‌. ಇನ್ನೂ ಕೆಲವರು ಒಂದು ಬೆರಳಚ್ಚು ಪ್ರತಿ ಇರುವ ದಾಖಲಾತಿಗೆ ಅಪರಿಚಿತ ಆರೋಪಿಗಳಿಂದ 5 ಸಾವಿರಕ್ಕೆ ಖರೀದಿ ಮಾಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಲ್ಲಿದ್ದ ಹಣ ಲಪಾಟಿಸುತ್ತಿದ್ದರು.

ಎಇಪಿಎಸ್ ಪ್ರಕರಣ ಹೆಚ್ಚು ದಾಖಲಾಗದಂತೆ ಕಂದಾಯ ಇಲಾಖೆ ಪತ್ರ ಬರೆದ ಹಿನ್ನೆಲೆಯಲ್ಲಿ‌ ಈಗ ಮಹತ್ವದ ದಾಖಲಾತಿಗಳನ್ನ ಗೌಪ್ಯವಾಗಿ ಇರುವಂತೆ ಮಾಡಿಸಲಾಗಿದ್ದು‌, ಇದರ‌ ಪರಿಣಾಮ‌ ಗಣನೀಯವಾಗಿ‌ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಈಶಾನ್ಯ ವಿಭಾಗದಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ಐವರನ್ನ ಬಂಧಿಸಲಾಗಿದ್ದು‌, ಇನ್ನೂ ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನ ಗುರುತಿಸಲಾಗಿದೆ. ಅವರನ್ನು ಇನ್ನಷ್ಟೇ ಬಂಧಿಸಬೇಕಿದ್ದು, ಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಈಟಿವಿ ಭಾರತ್​ಗೆ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ‌.

ಏನಿದು Aeps ವಂಚನೆ?:ಸರಳವಾಗಿ ಹೇಳುವುದಾದರೆ ಬ್ಯಾಂಕ್ ಖಾತೆ ಆಧಾರ್ ಖಾತೆ ವಿಲೀನಗೊಳಿಸಿ ಬಯೋಮೆಟ್ರಿಕ್ ಬಳಸಿ ಹಣ ರವಾನೆ ಅಥವಾ ವಿತ್ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಯೇ AEPS. ಆಧಾರ್ ಕಾರ್ಡ್ ದಾರರು ತಮ್ಮ‌ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣಗೊಳಿಸಿದ ಬಳಿಕ ಹಣದ ವಹಿವಾಟು ನಡೆಸಬಹುದಾಗಿದೆ. ಸೈಬರ್ ಚೋರರು ಬಯೋಮೆಟ್ರಿಕ್ ಬಳಸಿಕೊಂಡು ಹಣ ವಂಚಿಸುತ್ತಾರೆ.

ಸಾರ್ವಜನಿಕರು ಮಾಡಬೇಕಿರೋದು ಏನು?:ಎಇಪಿಎಸ್ ವ್ಯವಸ್ಥೆ ಮೂಲಕ ಹಣ ರವಾನೆ ಆಥವಾ ವಿತ್ ಡ್ರಾ ಮಾಡುವ ಬ್ಯಾಂಕ್ ಖಾತೆದಾರರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್ ಸಂಖ್ಯೆ ಸೇರಿದಂತೆ ಇನ್ನಿತರ ಮಹತ್ವರ ಮಾಹಿತಿಗಳನ್ನ ಹಂಚಿಕೊಳ್ಳಬೇಡಿ. ಬಯೋಮೆಟ್ರಿಕ್ ಮೂಲಕ‌ ನಿಮ್ಮ‌ ಬೆರಳಚ್ಚು ಪ್ರತಿಯನ್ನ ಸಂಗ್ರಹಿಸುವ ಸೈಬರ್ ಚೋರರು ಸರ್ಕಾರಿ ವೆಬ್ ಸೈಟ್ ಗಳ ಮೂಲಕ ನಿಮ್ಮ ವೈಯಕಿಕ್ತ ಡೇಟಾ ಕದ್ದು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ. ಪಿನ್ ನಂಬರ್ ಅಥವಾ ಪಾಸ್ ವರ್ಡ್ ಗಳನ್ನ ಹಂಚಿಕೊಳ್ಳಬೇಡಿ. ಅನಗತ್ಯ ಲಿಂಕ್ ಗಳ ಮೇಲೆ‌ ಕ್ಲಿಕ್‌ ಮಾಡಬೇಡಿ.‌‌ ನಿಮ್ಮ ‌ಮೊಬೈಲ್ ಆಥವಾ ಕಂಪ್ಯೂಟರ್ ಗೆ ಕಾಲಕ್ಕೆ‌ ಅನುಗುಣವಾಗಿ ಆ್ಯಂಟಿವೈರಸ್ ಸಾಫ್ಟ್ ವೇರ್ ಗಳನ್ನ ಅಪ್ ಡೇಟ್ ಮಾಡಿಕೊಳ್ಳಿ.

ಇದನ್ನೂ ಓದಿ:ಆಸ್ಪತ್ರೆಯಿಂದ ತಪ್ಪಿಸಿಕೊಂಡ ಆರೋಪಿ; ಮತ್ತೆ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ABOUT THE AUTHOR

...view details