ಬೆಂಗಳೂರು: ನೀವು ಈಗ ಡಬಲ್ ಮೂಡ್ನಲ್ಲಿದ್ದೀರಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಅವರು, ಅರಸೀಕೆರೆ ಶಾಸಕ ಶಿವಲಿಂಗೇಗೌಡರನ್ನು ಛೇಡಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು. ರಾಜ್ಯಪಾಲರ ಭಾಷಣದ ಮೇಲೆ ರಾಜ್ಯ ಸರ್ಕಾರದ ಪರವಾಗಿ ಚರ್ಚೆ ಆರಂಭಿಸಿದ ಸಿ.ಟಿ.ರವಿ ಅವರು, ನಾನು ಡಬಲ್ ಇಂಜಿನ್ ಸರಕಾರದ ಪ್ರಯೋಜನವೇನು ಅಂತ ಹೇಳ್ತಿದ್ದೆ ಎಂದರು. ಆಗ ಶಿವಲಿಂಗೇಗೌಡರು ಮಧ್ಯಪ್ರವೇಶಿಸಿ, ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದಿರಾ ಎಂದು ಸಿ.ಟಿ.ರವಿ ಅವರ ಕಾಲೆಳೆದರು.
ನೀವು ಡಬಲ್ ಮೂಡ್ನಲ್ಲಿದ್ದೀರಿ:ಇದಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ ನೀವು ಈಗ ಡಬಲ್ ಮೂಡ್ನಲ್ಲಿ ಇದ್ದೀರಿ, ನಾನು ಶಿವಲಿಂಗೇಗೌಡರಿಗೆ ಹೇಳಿದ್ದೆ. ಎಣ್ಣೆ ಬರುತ್ತಿದೆ - ಕಣ್ಣು ಮುಚ್ಚಿಕೊಳ್ಳಬೇಡಿ ಎಂದಿದ್ದೆ. ಆದರೆ ಶಿವಲಿಂಗೇಗೌಡರು ಕೇಳಲಿಲ್ಲ ಎಂದು ಆಪರೇಷನ್ ಕಮಲದ ವೇಳೆ ಶಿವಲಿಂಗೆಗೌಡರನ್ನು ಸಂಪರ್ಕಿಸಿದ್ದನ್ನು ಪರೋಕ್ಷವಾಗಿ ಹೇಳಿದರು.
ಅಲ್ಲದೇ ಶಿವಲಿಂಗೇಗೌಡರು ಚಕ್ರವ್ಯೂಹದಲ್ಲಿ ಈಗ ಸಿಲುಕಿದ್ದಾರೆ ಎಂದ ಸಿ.ಟಿ. ರವಿ ಅವರ ಮಾತಿಗೆ ತಿರುಗೇಟು ನೀಡಿದ ಶಿವಲಿಂಗೇಗೌಡರು, ನಾನು ಚಕ್ರವ್ಯೂಹದಲ್ಲಿ ಸಿಲುಕಿಲ್ಲ. ನಾನು ಅಭಿಮನ್ಯು ಆಗುವುದಿಲ್ಲ. ನಾನು ಅರ್ಜುನ ಪಾತ್ರ ಹಾಕುವುದು. ನಾನು ಅಭಿಮನ್ಯು ಪಾತ್ರ ಹಾಕಲ್ಲ. ಜನರ ಬೆಂಬಲ ಇರುವ ತನಕ ನಾನು ಅರ್ಜುನ ಎಂದರು. ಯಾರು ಅರ್ಜುನ - ಯಾರು ಅಭಿಮನ್ಯು ಅಂತ ಮುಂಬರುವ ಚುನಾವಣೆಯಲ್ಲಿ ಗೊತ್ತಾಗಲಿದೆ. ದುರ್ಯೋಧನ ಯಾರು ಅಂತ ನನಗೆ ಗೊತ್ತು. ನಾನು ಭೀಮನ ಪಾತ್ರ ಮಾಡಿದವನು, ದುರ್ಯೋಧನ ಪಾತ್ರ ಹಾಕಿಲ್ಲ ಎಂದು ಸಿಟಿ ರವಿ ತಿರುಗೇಟು ನೀಡಿದರು.
ಮಧ್ಯಪ್ರವೇಶಿಸಿದ ಅಶೋಕ್ ಹೇಳಿದ್ದೇನು?:ವಿಧಾನಸಭೆಯಲ್ಲಿ ಸಿ.ಟಿ. ರವಿ ಹಾಗೂ ಶಿವಲಿಂಗೇಗೌಡ ಮಾತುಕತೆ ನಡುವೆ ಸಚಿವ ಆರ್.ಅಶೋಕ್ ಮಧ್ಯ ಪ್ರವೇಶಿಸಿ, ನಿನ್ನೆ ಕಾರ್ಯಕ್ರಮದ ವೇದಿಕೆ ಮೇಲೆ ಸುತ್ತಲೂ ಯಾರಿದ್ದರು ಅಂತ ಹೇಳಿ, ಕರ್ಣ ಯಾರು, ದುರ್ಯೋಧನ ಯಾರು ಅಂತ ಹೇಳಬಹುದು ನೀವು ಎಂದು ಕೆಣಕಿದರು. ಇದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯೋ, ಚುನಾವಣಾ ಪ್ರಣಾಳಿಕೆಯೋ?. ಚುನಾವಣಾ ಪ್ರಚಾರದ ಭಾಷಣ ಓದಿಸಿಬಿಟ್ಟಿದ್ದಾರೆ ಎಂದು ಸಿ.ಟಿ.ರವಿ ಅವರ ಚರ್ಚೆಗೆ ಶಿವಲಿಂಗೇಗೌಡರು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅನೈತಿಕ ರೀತಿಯಲ್ಲಿ ಕಾಂಗ್ರೆಸ್ - ಜೆಡಿಎಸ್ ಸರ್ಕಾರ ರಚನೆಯಾಯ್ತು. ಬಿಜೆಪಿಯ ಬಿ ಟೀಮ್ ಅಂತ ಸಿದ್ಧರಾಮಯ್ಯ ಭಾಷಣ ಮಾಡಿದ್ರು. ಆದರೆ, ಅವರೊಂದಿಗೆ ಸೇರಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದರು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕುಟುಕಿದ್ದಾರೆ. ರಾಜ್ಯದಲ್ಲಿ 2018ರಲ್ಲಿ ಯಾವ ಪಕ್ಷಕ್ಕೂ ಜನಾದೇಶ ಸಿಕ್ಕಿರಲಿಲ್ಲ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಿಂದ ಸಿದ್ಧರಾಮಯ್ಯ ಸೋತರು. ನಂತರ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಬಿಜೆಪಿ ಸರ್ಕಾರ ರಚನೆಯಾಯಿತು. ಜನರ ಮುಂದೆ ಅಗ್ನಿಪರೀಕ್ಷೆಗೆ ಹೋದಾಗ ಬೆಂಬಲ ಸಿಕ್ತು. ಯಾವುದೇ ಸಂದರ್ಭದಲ್ಲೂ ಜನರು ನಮ್ಮ ಮೇಲೆ ಅನುಮಾನ ಪಟ್ಟಿಲ್ಲ ಎಂದರು.