ಮಾಜಿ ಸಿಎಂ ಬಸವಾರಜ ಬೊಮ್ಮಾಯಿ ಯಲಹಂಕ(ಬೆಂಗಳೂರು): ದೌರ್ಜನ್ಯ, ವಂಚನೆ, ಹಲ್ಲೆ ಮತ್ತು ಜಾತಿ ನಿಂದನೆ ಆರೋಪದಡಿ ಸಚಿವ ಡಿ ಸುಧಾಕರ್ ಮೇಲೆ ಎಫ್‌ಐಆರ್ ದಾಖಲಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವರಾಗಿರುವ ಡಿ. ಸುಧಾಕರ್ ಸೇರಿ ಮೂವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಸುಬ್ಬಮ್ಮ ಎಂಬುವರು ನೀಡಿರುವ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಪಾಲುದಾರರಾಗಿರುವ ಸುಧಾಕರ್ ಮೋಸದಿಂದ ಆಸ್ತಿ ಕಬಳಿಕೆ ಮಾಡಿ ಮನೆಯಲ್ಲಿದ್ದ ಮಗಳ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ಸುಬ್ಬಮ್ಮ ದೂರು ನೀಡಿದ್ದಾರೆ. ಸೆವೆನ್ ಹಿಲ್ ಡೆವಲಪರ್ಸ್ ಆ್ಯಂಡ್ ಟ್ರೇಡರ್ಸ್, ಸಚಿವ ಡಿ. ಸುಧಾಕರ್, ಶ್ರೀನಿವಾಸ್, ಭಾಗ್ಯಮ್ಮ ವಿರುದ್ಧ ಯಲಹಂಕ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಕೋರ್ಟ್ನಲ್ಲಿ ಕೇಸ್ ಇದ್ದಾಗ ಗುಂಪು ಕಟ್ಟಿಕೊಂಡು ದೌರ್ಜನ್ಯ ಮಾಡಿ ಮಹಿಳೆಯರನ್ನು ಕರೆದೊಯ್ದು, ಜೆಸಿಬಿ ಮೂಲಕ ಮನೆ ಕೆಡವಿರುವುದಾಗಿ ಸುಬ್ಬಮ್ಮ ಆರೋಪಿಸಿದ್ದಾರೆ.
ಡಿ ಸುಧಾಕರ್ ರಾಜೀನಾಮೆಗೆ ಬೊಮ್ಮಾಯಿ ಒತ್ತಾಯ: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರಿಂದ ಜಾತಿ ನಿಂದನೆ ಆಗಿದ್ದರೆ, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಆರ್.ಟಿ. ನಗರದ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ ಅವರು ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಕಾನೂನು ರೀತಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಸಾಮಾನ್ಯ ಜನರನ್ನು ಹೇಗೆ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಾರೋ, ಅದೇ ರೀತಿ ಸಚಿವರನ್ನು ವಿಚಾರಣೆ ನಡೆಸಬೇಕು. ಪೊಲೀಸರು ಒತ್ತಡಕ್ಕೆ ಮಣಿದರೆ, ರಾಜ್ಯದ ದಲಿತರು ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಮಾತ್ರ ದಲಿತರ ಪರ ಮಾತನಾಡುತ್ತಾರೆ. ಆದರೆ, ಅವರ ಸಚಿವರ ನಡವಳಿಕೆ ಸಂಪೂರ್ಣ ದಲಿತ ವಿರೋಧಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಲಿತರು ಇವರನ್ನು ಕ್ಷಮಿಸುವುದಿಲ್ಲ ಎಂದರು.
ಸ್ಟಾಲಿನ್ ಮನವೊಲಿಸಲಿ: ರಾಜ್ಯ ಸರ್ಕಾರ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗುವ ಬದಲು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ರಾಜ್ಯದ ವಸ್ತುಸ್ಥಿತಿ ಮನವರಿಕೆ ಮಾಡಿ, ಅವರ ಮನವೊಲಿಸಬೇಕು. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಬರುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ತಮಿಳುನಾಡು ಅಗತ್ಯಕ್ಕಿಂತ ಹೆಚ್ಚು ನೀರನ್ನು ಕುರುವೈ ಬೆಳೆಗೆ ಅಕ್ರಮವಾಗಿ ಬಳಸಿಕೊಂಡಿದೆ ಎಂದು ರಾಜ್ಯ ಸರ್ಕಾರ ಸಿಡಬ್ಲುಎಂಎ ಸಭೆಯಲ್ಲಿ ಬಲವಾಗಿ ಹೇಳುತ್ತಿಲ್ಲ. ಸೆ. 12 ರ ನಂತರ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ತನ್ನ ನಿಲುವಿಗೆ ಎಷ್ಟು ಬದ್ಧವಾಗಿರುತ್ತದೆ ಎಂಬುದನ್ನು ಕಾದು ನೋಡೋಣ ಎಂದರು.
ಇದನ್ನೂ ಓದಿ:'ಅನಿಷ್ಟ ಸರ್ಕಾರದ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯ': ಬಸವರಾಜ ಬೊಮ್ಮಾಯಿ