ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಹಣದಾಸೆಗೆ ಗರ್ಭಿಣಿ ಹಸುವಿನ ಹತ್ಯೆ ಮಾಡಲಾಗಿದ್ದು, ಕಳ್ಳತನ ಮಾಡಿ ಕೊಂದ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಬರ್ಕತ್, ಮೊಹಮದ್, ಇಮ್ರಾನ್ ಪಾಷಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ಸುಹೈಲ್ ಎಂಬಾತ ಪರಾರಿಯಾಗಿದ್ದಾನೆ.
ಜೂನ್ 6 ರಂದು ಹೆಚ್.ಬಿ.ಆರ್.ಲೇಔಟ್ನಲ್ಲಿ ಬೆಳಗಿನ ಜಾವ ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ, ಆಟೋದಲ್ಲಿ ಅನುಮಾನಾಸ್ಪದವಾಗಿ ಮೂವರು ವ್ಯಕ್ತಿಗಳು ಓಡಾಡುತ್ತಿದ್ದರು. ಈ ವೇಳೆ, ಆಟೋ ನಿಲ್ಲಿಸುವಂತೆ ಸೂಚಿಸಿದ್ದರು. ಆಗ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಬೆನ್ನಟ್ಟಿ ಆಟೋ ನಿಲ್ಲಿಸಿ ಆರೋಪಿಗಳ ವಿಚಾರಣೆ ನಡೆಸಿದಾಗ ಹಸು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತ್ತು ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.