ಬೆಂಗಳೂರು :ಕೋವಿಡ್ 3ನೇ ಅಲೆ ಆರಂಭವಾಗುವ ಆತಂಕದ ನಡುವೆಯೇ ನಗರದಲ್ಲಿ ಲಸಿಕೆ ಅಲಭ್ಯತೆ ತೀವ್ರವಾಗಿ ಕಾಡುತ್ತಿದೆ. ಆಸ್ಪತ್ರೆಗಳ ಮುಂದೆ ಜನ ಕ್ಯೂ ನಿಂತಿದ್ದರೂ, ಲಸಿಕೆ ಖಾಲಿಯಾಗಿದೆ ಎಂದು ವಾಪಸು ಕಳಿಸುತ್ತಿದ್ದಾರೆ. 40 ವರ್ಷ ಕೆಳಗಿನವರಿಗಂತೂ ಲಸಿಕೆಗಾಗಿ ಪರದಾಡಿದ್ರೂ ಸಿಗುತ್ತಿಲ್ಲ. ಈ ನಡುವೆ ನಿನ್ನೆ ರಾತ್ರಿ ಕೇವಲ 50 ಸಾವಿರ ಡೋಸ್ ಲಸಿಕೆ ಬಂದಿದೆ.
ಈ ಬಗ್ಗೆ ಮಾತನಾಡಿದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ, ಲಸಿಕೆ ಲಭ್ಯತೆ ಕೇಂದ್ರ ಸರ್ಕಾರದಿಂದ ಬರುತ್ತದೆ. ಬಂದಿರುವಷ್ಟನ್ನು ಎಲ್ಲಾ ಕಡೆ ರಾಜ್ಯ ಸರ್ಕಾರ ವಿತರಿಸುತ್ತಿದೆ. ಕೋವಿಶೀಲ್ಡ್ ಕಳೆದ ಮೂರು ದಿನದಿಂದ ಕಡಿಮೆ ಆಗಿದೆ. ನಿನ್ನೆ ರಾತ್ರಿ ಬಂದಿದ್ದ ಐವತ್ತು ಸಾವಿರ ಡೋಸ್ ಲಸಿಕೆಯನ್ನು 250 ಡೋಸ್ನಂತೆ ಪ್ರತಿ ವಾರ್ಡ್ಗೆ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಹೆಚ್ಚು ಬರುವ ಕಡೆ ಕೆಲವು ಕಟ್ಟುನಿಟ್ಟಿನ ಕ್ರಮಗಳ ಜಾರಿ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. 2%ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಕಡೆ ಹೊಸ ನಿಯಮ ಜಾರಿಯಾಗಲಿದೆ. ನಗರದ ಪರಿಸ್ಥಿತಿ ಮೇಲೆಯೂ ನಿಗಾ ಇಡಲಾಗಿದೆ. ಕಳೆದ 40 ದಿನಗಳಲ್ಲಿ ಶೇ.400ರಷ್ಟು ಪ್ರಕರಣ ಬರುತ್ತಿವೆ ಎಂದರು.