ಬೆಂಗಳೂರು: ನಗರದಲ್ಲಿ ಇಂದು ಅತಿ ಹೆಚ್ಚು ಕೊರೊನಾ ಪ್ರಕರಣ ದೃಢಪಟ್ಟಿದ್ದು, ಒಂದೇ ದಿನ 55 ಮಂದಿಯಲ್ಲಿ ಸೋಂಕು ಪತ್ತೆಯಾಗಿ ಐವರು ಮೃತಪಟ್ಟಿದ್ದಾರೆ.
ಸದ್ಯ ನಗರದದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು 827 ಕ್ಕೆ ಏರಿಕೆಯಾಗಿದ್ದು, 43 ಮಂದಿ ಮೃತಪಟ್ಟಿದ್ದಾರೆ. ಇಂದು 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 370 ಮಂದಿ ಗುಣಮುಖರಾಗಿದ್ದಾರೆ. 413 ಸಕ್ರಿಯ ಪ್ರಕರಣಗಳಿವೆ. 70 ವರ್ಷದ ಮಹಿಳೆ, 64 ವರ್ಷದ ಪುರುಷ, 61 ಮತ್ತು 90 ವರ್ಷದ ಇಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಅಲ್ಲದೆ 39 ವರ್ಷದ ಮಹಿಳೆ ಕೂಡ ನಿನ್ನೆ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇಂದು ವರದಿಯಾಗಿದೆ. ಐಸಿಯುನಲ್ಲಿ ನಗರದ 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಉಲ್ಬಣಗೊಂಡಿದೆ. ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಸೋಂಕು ತಗುಲಿದ್ದು, 33, 32 ವರ್ಷದ ಇಬ್ಬರು ಮಹಿಳೆಯರು ಹಾಗೂ 36 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೆ ಹಲವು ಸೋಂಕಿತರಿಗೆ ಬೇದಿಯ ಲಕ್ಷಣಗಳಿಂದಲೂ ಸೋಂಕು ದೃಢಪಟ್ಟಿದೆ. ಕನಕಪುರ, ಓಕಳೀಪುರಂ ಮುಖ್ಯರಸ್ತೆ, ಸುಬ್ಬಣ್ಣ ಗಾರ್ಡನ್, ಗಿರಿನಗರ, ಗೋರಿಪಾಳ್ಯ, ಸಿದ್ಧಯ್ಯ ರಸ್ತೆ, ಆರ್ ಕೆ ಲೇಔಟ್, ಶ್ರೀನಿವಾಸ ನಗರ, ಬುಲ್ ಟೆಂಪಲ್ ರಸ್ತೆ, ಗುರಪ್ಪನಪಾಳ್ಯ, ನೀಲಸಂದ್ರ, ಪಾದರಾಯನಪುರ, ಕಾವಲ್ ಬೈರಸಂದ್ರ, ಪ್ರಕಾಶನಗರ, ಕಾಟನ್ ಪೇಟೆ, ಶಂಕರ್ ನಗರ, ಇಂದಿರಾ ನಗರ, ಮೈಸೂರು ರಸ್ತೆ ಚಾಮರಾಜಪೇಟೆ, ಕೋರಮಂಗಲ, ಜಯನಗರ ಫಸ್ಟ್ ಬ್ಲಾಕ್, ಈಜಿಪುರದಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿವೆ.
ಕೊರೊನಾ ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿ ತಲುಪುತ್ತಿರುವುದರಿಂದ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ವಾರ್ಡ್ ,ಝೋನ್ ಮಾಹಿತಿ ನೀಡುವುದನ್ನು ಬಿಬಿಎಂಪಿ ವಾರ್ ರೂಂ ಸ್ಥಗಿತಗೊಳಿಸಿದೆ. ಕೇವಲ ಶೇಕಡಾವಾರು ಮಾಹಿತಿ ನೀಡಿದ್ದು, ಶೇಕಡಾ 82 ರಷ್ಟು ಆಕ್ಟಿವ್ ಕಂಟೇನ್ಮೆಂಟ್ ಪ್ರದೇಶಗಳು, ಶೇಕಡಾ 3 ರಷ್ಟು ಕಂಟೇನ್ಮೆಂಟ್ ವಿಸ್ತರಿಸಿದ ಪ್ರದೇಶಗಳು, ಹಾಗೂ ಶೇಕಡಾ 15 ರಷ್ಟು ಕಂಟೇನ್ಮೆಂಟ್ ತೆರವಾಗಿರುವ ಪ್ರದೇಶಗಳು ಇವೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿವೆ. ನಂತರ ಪೂರ್ವ ಹಾಗೂ ಪಶ್ಚಿಮ ವಲಯದಲ್ಲಿ ಹಾಗೂ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.