ಬೆಂಗಳೂರು: ಪ್ರಯಾಣಕ್ಕಾಗಿ ಮುಂಗಡವಾಗಿ ಕಾಯ್ದಿರಿಸಿ ಖಚಿತಪಡಿಸಿಕೊಂಡಿದ್ದ ಆಸನವನ್ನು ಮತ್ತೊಬ್ಬರಿಗೆ ಮಂಜೂರು ಮಾಡುವ ಮೂಲಕ ತೊಂದರೆಗೆ ಸಿಲುಕುವಂತೆ ಮಾಡಿದ್ದ ಭಾರತೀಯ ರೈಲ್ವೆ ಇಲಾಖೆಯು 40 ಸಾವಿರ ರೂ. ಪರಿಹಾರವನ್ನು ಗ್ರಾಹಕರಿಗೆ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ಪರಿಹಾರ ಆಯೋಗ ಆದೇಶಿಸಿದೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ವಾಸವಾಗಿರುವ ಆಲೋಕ್ ಕುಮಾರ್ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ನಗರದ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯವಹಾರಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ಶಿವರಾಮ ನೇತೃತ್ವದ ತ್ರಿಸದಸ್ಯ ಪೀಠ, ಭಾರತೀಯ ರೈಲ್ವೆ ಹಾಗೂ ಐಆರ್‌ಸಿಟಿಸಿಗೆ ಈ ಸೂಚನೆ ನೀಡಿತು.
ಅಲ್ಲದೆ, ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಪಡೆದಿದ್ದ 22,300 ರೂ. ಗಳಿಗೆ ವಾರ್ಷಿಕ ಶೇ. 9 ರಷ್ಟು ಬಡ್ಡಿ ಸೇರಿಸಿ ಹಿಂದಿರುಗಿಸಬೇಕು. ಮಾನಸಿಕ ಹಿಂಸೆ ಅನುಭವಿಸಿದ್ದಾಗಿ 30 ಸಾವಿರ ರೂ. ಪರಿಹಾರ ನೀಡಬೇಕು ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಈ ಆದೇಶ ಮುಂದಿನ 45 ದಿನಗಳಲ್ಲಿ ಅನುಷ್ಟಾನಗೊಳಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
2022ರ ಮಾರ್ಚ್ 15ರಂದು ದೂರುದಾರರು ತನ್ನ ಪೋಷಕರಿಗಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮೂಲಕ 2022ರ ಮೇ 21ರಂದು ನವದೆಹಲಿಯಿಂದ ಬಿಹಾರದ ಬರೌನಿಗೆ ಪ್ರಯಾಣಿಸಲು 6,995 ರೂ.ಗಳನ್ನು ಪಾವತಿಸಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಪ್ರಯಾಣದ ದಿನದಂದು ರೈಲ್ವೆ ಅಧಿಕಾರಿಗಳು ನಿಮ್ಮ ಪಿಎನ್‌ಆರ್ ಸಂಖ್ಯೆ ಸರಿಯಿದ್ದರು, ಟಿಕೆಟ್ ಖಚಿವಾಗಿಲ್ಲ ಎಂದು ಹೇಳಿದ್ದರು. ಜತೆಗೆ ತಕ್ಷಣ ರೈಲಿನಿಂದ ಇಳಿಯಬೇಕು. ಇಲ್ಲವಾದಲ್ಲಿ ದಂಡ ಪಾವತಿ ಮಾಡಿ ಪ್ರಯಾಣ ಮುಂದುವರೆಸಬೇಕು ಎಂದು ಸೂಚನೆ ನೀಡಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲೇ ಪ್ರಯಾಣಿಕರು ರೈಲ್ವೆಗೆ ಇ-ಮೇಲ್ ಹಾಗೂ ಫೋನ್ ಮೂಲಕ ಕರೆ ಮಾಡಿ ಐಆರ್‌ಟಿಸಿಗೆ ದೂರು ಸಲ್ಲಿಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಗೊಂದಲಗೊಂಡಿದ್ದ ಪ್ರಯಾಣಿಕರು ಮುಂಗಡವಾಗಿ ಹಣ ಪಾವತಿ ಮಾಡಿದ್ದರೂ, ಕೂಡ 22,300 ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿ ಮಾಡಿ ಪ್ರಯಾಣ ಮುಂದುವರೆಸಿದ್ದರು. ಇದಾದ ಬಳಿಕ ಹಣ ಹಿಂದಿರುಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬೆಳವಣಿಗೆಯಾಗಿರಲಿಲ್ಲ.
ಇದರಿಂದ ಬೇಸತ್ತಿದ್ದ ದೂರುದಾರರು, ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ತಮ್ಮಿಂದ ಹೆಚ್ಚುವರಿಯಾಗಿ ಪಡೆದುಕೊಂಡಿರುವ 22.300 ರೂ. ಹಿಂದಿರುಗಿಸಲು ಸೂಚನೆ ನೀಡಬೇಕು ಎಂದು ಕೋರಿದ್ದರು. ಈ ಪ್ರಕರಣ ಸಂಬಂಧ ರೈಲ್ವೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ, ಎರಡನೇ ಪ್ರತಿವಾದಿ ಐಆರ್‌ಸಿಟಿ ಆಕ್ಷೇಪಣೆ ಸಲ್ಲಿಸಿ ಪ್ರಕರಣದಲ್ಲಿ ರೈಲ್ವೆ ಇಲಾಖೆಯ ನಿರ್ಧಾರವೇ ಅಂತಿಮ. ಈ ಪ್ರಕ್ರಿಯೆಯಲ್ಲಿ ನಮ್ಮ ಪತ್ರ ಇಲ್ಲ ಎಂದು ತಿಳಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿ ಪೀಠ ಈ ಆದೇಶ ಮಾಡಿದೆ.
ಇದನ್ನೂ ಓದಿ:ತಪ್ಪಾಗಿ ಪಿಂಚಣಿ ನಿಗದಿ: 5 ಲಕ್ಷ 63 ಸಾವಿರ ಬಡ್ಡಿ ಪರಿಹಾರ ನೀಡುವಂತೆ ಪಿಎಫ್ ಇಲಾಖೆ ಗ್ರಾಹಕರ ಆಯೋಗದ ಆದೇಶ