ಕರ್ನಾಟಕ

karnataka

ETV Bharat / state

ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಬಡಾವಣೆ ನಿರ್ಮಾಣ: ಪರ್ಯಾಯ ಭೂಮಿ, 5 ಲಕ್ಷ ಪರಿಹಾರ ನೀಡುವಂತೆ ಬಿಡಿಎಗೆ ಹೈಕೋರ್ಟ್ ಸೂಚನೆ - High Court order to BDA

ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಹೊರಡಿಸದೇ ಬಡಾವಣೆ ನಿರ್ಮಾಣ ಮಾಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಡೆಯನ್ನು ನ್ಯಾಯಾಲಯ ಪ್ರಶ್ನಿಸಿದೆ

Highcourt
ಹೈಕೋರ್ಟ್​

By

Published : Jan 20, 2023, 8:01 PM IST

ಬೆಂಗಳೂರು: ಖಾಸಗಿ ವ್ಯಕಿಯೊಬ್ಬರಿಗೆ ಸೇರಿದ ಸ್ಥಳವನ್ನು ಸ್ವಾಧೀನಕ್ಕೆ ಪಡೆಯದೆ ನಗರದ ಎಚ್‌ಎಎಲ್ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಬಳಸಿದ ಪ್ರಕರಣದಲ್ಲಿ ಭೂಮಾಲೀಕನಿಗೆ ಐದು ಲಕ್ಷ ರೂ. ಪರಿಹಾರ ಮತ್ತು ಎರಡು ಗುಂಟೆ ಅಭಿವೃದ್ಧಿ ಪಡಿಸಿದ ಜಾಗ ಮಂಜೂರು ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಕೆ. ಶ್ರಿನಿವಾಸ ಮೂರ್ತಿ ಎಂಬುವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದ ನ್ಯಾಯಪೀಠ, ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಹೊರಡಿಸದೇ ಬಡಾವಣೆ ನಿರ್ಮಾಣ ಮಾಡಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಧೋರಣೆಯನ್ನು ಇದೇ ವೇಳೆ ಆಕ್ಷೇಪಿಸಿರುವ ನ್ಯಾಯಪೀಠ, ರಾಜ್ಯದಲ್ಲಿ ಶಾಸನಾತ್ಮಕವಾಗಿ ರಚನೆಯಾಗಿರುವ ಯಾವುದೇ ಪ್ರಾಧಿಕಾರ, ಕಾಯ್ದೆ ಮತ್ತು ಕಾನೂನಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮಕ್ಕೆ ಮುಂದಾಗುವುದಕ್ಕೂ ಮುನ್ನ ಬಡಾವಣೆ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಯ ಜಾಗ ಬಳಸಿಕೊಳ್ಳುವಂತಿಲ್ಲ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾದಿಕಾರ ಈ ಕಾರ್ಯ ನಡೆಸಿದೆ ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಬೆಂಗಳೂರಿನ ಹಲಸೂರು ಗ್ರಾಮದ ಸರ್ವೇ ನಂಬರ್ 35/4ರಲ್ಲಿ ಸುಮಾರು 11 ಗುಂಟೆ ಜಾಗವು ಶ್ರೀನಿವಾಸ ಮೂರ್ತಿ ಅವರ ತಂದೆಯ ಒಡೆತನದಲ್ಲಿತ್ತು. ಆ ಜಾಗವನ್ನು 1967ರಲ್ಲಿ ಎಚ್‌ಐಎಲ್ 4ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿಂದಿನ ನಗರ ಅಭಿವೃದ್ಧಿ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಸ್ವಾಧೀನ ಪಡಿಸಿಕೊಂಡಿತ್ತು. 1976ರಲ್ಲಿ ಸ್ವಾಧೀನ ಪ್ರಕ್ರಿಯೆಯಿಂದ ಈ ಜಾಗವನ್ನು ಕೈಬಿಡಲಾಗಿತ್ತು. ಆದರೂ ಮಾಲೀಕರಿಗೆ ಗೊತ್ತಾಗದೇ ಈ 11 ಗುಂಟೆ ಜಾಗದಲ್ಲಿ ಬಿಡಿಎ ಬಡಾವಣೆ ನಿರ್ಮಿಸಿತ್ತು.

ಈ ಕುರಿತು ಶ್ರೀನಿವಾಸ ಮೂರ್ತಿ ಅವರ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಡಾವಣೆಗೆ ಬಳಸಿದ ಜಾಗಕ್ಕೆ ಶೇ.50ರಷ್ಟು ಅಭಿವೃದ್ಧಿ ಪಡಿಸಿದ ಪರ್ಯಾಯ ಜಾಗ ನೀಡುವಂತೆ ಬಿಡಿಎಗೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಬಿಡಿಎ ಮಾತ್ರ 7 ಗುಂಟೆ ಜಾಗಕ್ಕೆ ಪರ್ಯಾಯವಾಗಿ 3.5 ಗುಂಟೆ ಅಭಿವೃದ್ಧಿ ಪಡಿಸಿದ ಜಾಗ ನೀಡಿತ್ತು. ಇದರಿಂದ ಶ್ರಿನಿವಾಸ ಮೂರ್ತಿ 2016ರಲ್ಲಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಉಳಿದ 11 ಗುಂಟೆ ಜಾಗಕ್ಕೆ 2 ಗುಂಟೆ ಪರ್ಯಾಯ ಅಭಿವೃದ್ಧಿ ಪಡಿಸಿದ ಜಾಗ ನೀಡಲು ಬಿಡಿಎಗೆ ಆದೇಶಿಸುವಂತೆ ಕೋರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಎಚ್‌ಎಎಲ್ 4ನೇ ಹಂತಕ್ಕೆ ಬಡಾವಣೆ ನಿರ್ಮಾಣಗೊಂಡ ನಂತರ ನಿರ್ಮಿಸಿದ ಯಾವುದೇ ಬಡಾವಣೆಯಲ್ಲಿ 2 ಗುಂಟೆ ಅಭಿವೃದ್ಧಿ ಹೊಂದಿದ ಪರ್ಯಾಯ ಜಾಗ ಪಡೆಯಲು ಶ್ರೀನಿವಾಸ ಮೂರ್ತಿ ಅರ್ಹರಾಗಿದ್ದಾರೆ. ಹಾಗೆಯೇ, ಶ್ರೀನಿವಾಸ್ ಮೂರ್ತಿಗೆ ಬಿಡಿಎ ಐದು ಲಕ್ಷ ಪರಿಹಾರ ನೀಡಬೇಕು. ಆ ಮೊತ್ತವನ್ನು ತಪ್ಪಿತಸ್ಥರ ಅಧಿಕಾರಿಗಳಿಂದ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ:ಈಜಿಪುರ ವಸತಿ ಸಮುಚ್ಛಯ ಕಾಮಗಾರಿ ವಿಳಂಬ: ಹೈಕೋರ್ಟ್​ಗೆ ಪ್ರಮಾಣಪತ್ರ ಸಲ್ಲಿಸಿದ ಸರ್ಕಾರ

ABOUT THE AUTHOR

...view details