ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಬೆಂಗಳೂರು: ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ನಾಯಕರೊಬ್ಬರು ಹೇಳಿದ್ದಾರೆ. ನನ್ನ ಬಗ್ಗೆ ಕಾಂಗ್ರೆಸ್ ಚಿಂತಿಸುವುದು ಬೇಡ. ಇಂಥ ಪ್ರಾಮಾಣಿಕ ಸರ್ಕಾರ ಹಿಂದೆ ಬಂದಿಲ್ಲ, ಮುಂದೆಯೂ ಬರಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಜಾತ್ಯತೀತ ಜನತಾದಳ ಪಕ್ಷದ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ನಿನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಅವರು ವೀರಾವೇಶದಲ್ಲಿ ಮಾತನಾಡಿದ್ದಾರೆ. ಅವರ ಬ್ಯಾಕ್ಗ್ರೌಂಡ್ ಹೊಸದಾಗಿ ತಿಳಿಯಬೇಕಿಲ್ಲ. ಮತ್ತೊಬ್ಬ ಶಾಸಕ ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳಿದ್ದಾರೆ. ನಮ್ಮ ಕುಟುಂಬದಲ್ಲೇ ಸಾಕಷ್ಟು ವೈದ್ಯರಿದ್ದಾರೆ. ಇನ್ನೊಬ್ಬರಿಂದ ನಾನು ಸರ್ಟಿಫಿಕೇಟ್ ಪಡೆಯುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕೆ ನನ್ನದು ಹಿಟ್ ಅಂಡ್ ರನ್ ಅಂತ ಹೇಳ್ತಾರೆ. ನಮ್ಮ ಬಳಿ ಇರೋದು ಖಾಲಿ ಪೆನ್ಡ್ರೈವ್ ಅಲ್ಲ. ಹಿಂದೆ ವೀರಪ್ಪ ಮೊಯ್ಲಿ ಒಂದು ರೆಕಾರ್ಡ್ ಮಾಡಿದ್ದರು. ಮೊಯ್ಲಿ ಟೇಪ್ ಅಂತಾನೇ ಹೇಳಿದ್ದರು. ಅದೇನಾದರೂ ತಾರ್ಕಿಕ ಅಂತ್ಯ ಕಂಡಿತಾ? ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಜನತೆ ಬೆವರು ಸುರಿಸಿದ ಹಣವನ್ನು ದುರ್ಬಳಕೆ ಮಾಡ್ತಾ ಇದ್ದಾರೆ. ಸರ್ಕಾರದ ಅಧಿಕಾರಿಗಳು ಗುಲಾಮರಾಗಿದ್ದಾರೆ. ರಾಜ್ಯದಲ್ಲಿ ಇನ್ನೊಂದು ರೀತಿಯ ಗುಲಾಮಗಿರಿ ಆಗ್ತಾ ಇದೆ. ಇಂತಹ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು, ದಬ್ಬಾಳಿಕೆ ನಿಲ್ಲಿಸಬೇಕಾಗಿದೆ. ದೇಶ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು. ಒಂದಷ್ಟು ಕಠಿಣ ನಿರ್ಧಾರಗಳು, ದೇಶ ವಿಭಜನೆ, ಹಲವಾರು ನಾಯಕರ ಹೋರಾಟದ ಫಲವೇ ಇಂದು ಆಚರಿಸುತ್ತಿರುವ ಸ್ವಾತಂತ್ರ್ಯ.
ಕಾಂಗ್ರೆಸ್ನವರು ಸಮಾನತೆ ತರುತ್ತೇವೆ ಎಂದು ಹೇಳ್ತಾರೆ. ಇವರು ಯಾವುದರಲ್ಲಿ ಸಮಾನತೆ ತರುತ್ತಾರೆ. ಪುಕ್ಕಟೆ ಕೊಡುವ ಮೂಲಕ ಎಲ್ಲರೂ ಕೈ ಒಡ್ಡುವಂತೆ ಮಾಡಿದ್ದಾರೆ. ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಬದಲು, ಈ ರೀತಿ ಮಾಡುತ್ತಿದ್ದಾರೆ. ದೇಶದ ಆರ್ಥಿಕ ಸಂಪತ್ತು ವೃದ್ಧಿ ಆಗುತ್ತಿದೆ. ಆದರೆ, ಆ ಸಂಪತ್ತು ಎಲ್ಲರಿಗೂ ತಲುಪುವ ಕೆಲಸವಾಗುತ್ತಿಲ್ಲ. ಕೇವಲ ಕೆಲವು ಜನರಿಗೆ ತಲುಪುತ್ತಿದೆ. ನಮ್ಮ ದೇಶದಲ್ಲಿ ನೂರಾರು ಈಸ್ಟ್ ಇಂಡಿಯಾ ಕಂಪನಿಗಳು ಹುಟ್ಟಿಕೊಂಡಿವೆ. ಸ್ವಾತಂತ್ರ್ಯ ಬಂದ ನಂತರವೂ ಈಸ್ಟ್ ಇಂಡಿಯಾ ಕಂಪನಿಯ ಪಳಿಯುಳಿಕೆಗಳಾಗಿ ಎರಡು ಪಕ್ಷಗಳು ನಮ್ಮಲ್ಲಿವೆ.
ಯುಪಿಎ ಸರ್ಕಾರದ ಕೊನೆಯ ದಿನಗಳಲ್ಲಿ ಲಕ್ಷಾಂತರ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. 10 ವರ್ಷದಲ್ಲಿ ಯಾವುದಾದರೂ ಹಗರಣದ ಬಗ್ಗೆ ಮಾತಾಡಿದ್ರಾ?. ಹಣ ವಾಪಸ್ ತರುವ ಕೆಲಸ ಆಯ್ತಾ?. ಬೋಫೋರ್ಸ್ ಹಗರಣದ ಕಥೆ ಏನಾಯ್ತು?. ಸ್ವೇಚ್ಛಾರವಾಗಿ ಲೂಟಿ ಆಗ್ತಾ ಇದೆ. ಕಾವೇರಿ ಸಮಸ್ಯೆ ಇರಲಿ, ಅಪ್ಪರ್ ಭದ್ರಾ ಇರಲಿ, ಯಾವುದು ಕೆಲಸ ಆಗಿದೆ. ಉದ್ಧಟತನದಲ್ಲಿ ನಾಡಿನ ಸಂಪತ್ತನ್ನು ಲೂಟಿ ಮಾಡ್ತಾ ಇದ್ದಾರೆ ಎಂದು ಅಬ್ಬರಿಸಿದರು.
ಅವರು ಒಬ್ಬರಿಗೆ ಅಜ್ಜಯ್ಯ ರಕ್ಷಣೆ ಇರೋದು, ನಮಗೆ ಇಲ್ಲ. ನಾವು ರಕ್ಷಣೆಗಾಗಿ ಹುಡುಕಬೇಕಾಗಿದೆ. ಇದೆಲ್ಲಾ ಶಾಶ್ವತ ಅಲ್ಲ, ಅಂತ್ಯ ಅಂತ ಒಂದಿದೆ. ಮುಂದಿನ 20 ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಹೇಳ್ತಾರೆ. ಹಿಂದೆ ಯಡಿಯೂರಪ್ಪ ಕೂಡ ಹೀಗೆ ಹೇಳಿದ್ದರು. ಟೈಂ ಬಂದಾಗ 20 ವರ್ಷವೋ ಅಥವಾ ಎಷ್ಟು ವರ್ಷ ಅಂತ ಗೊತ್ತಿಲ್ಲ. ಜನ ಈಗ ನಿಮಗೆ ಅವಕಾಶ ಕೊಟ್ಟಿದ್ದಾರೆ. ನೀವು ಸಮಾನತೆ ತರುತ್ತೀರಿ ಎಂದು ಅಧಿಕಾರದಲ್ಲಿ ಕೂರಿಸಿದ್ದಾರೆ. ಗ್ಯಾರಂಟಿ ಮೇಲೆ ಬಂದಿದ್ದೀರಲಾ, ಎಷ್ಟು ವರ್ಷ ಇರಲಿದೆ ಇದು. ಗರೀಬಿ ಹಠಾವೋದಿಂದ ಹಿಂದೆ ಅಧಿಕಾರಕ್ಕೆ ಬಂದ್ರಿ. ಒಳ್ಳೆ ಕೆಲಸ ಮಾಡಿ, ಬೆನ್ನು ತಟ್ಟುತ್ತೇವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಧ್ವಜಾರೋಹಣ: 77ನೇ ಸ್ವಾತಂತ್ರ ದಿನಾಚರಣೆ ನಿಮಿತ್ತ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ ಟಿ.ಎ. ಶರವಣ, ಮಾಜಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಹಿರಿಯ ಮುಖಂಡ ನಾರಾಯಣ್ ರಾವ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಭಾರತದ ಸಮಸ್ತ ಬಂಧುಗಳಿಗೆ ಸ್ವಾತಂತ್ರ್ಯ ದಿನೋತ್ಸವಕ್ಕೆ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:CM siddaramaiah: ಅನ್ನಬ್ರಹ್ಮ ರೈತ, ಸುಭದ್ರ ಕರ್ನಾಟಕದ ಅಭಿವೃದ್ಧಿಯೇ ಗುರಿ: ಸಿಎಂ ಸಿದ್ದರಾಮಯ್ಯ