ಬೆಂಗಳೂರು : ಕಾಂಗ್ರೆಸ್ ಸದಸ್ಯರ ಧರಣಿ ವಿಚಾರದಲ್ಲಿ ಮಾತನಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿಗೆ ನಡೆದ ಪ್ರಸಂಗವೂ ವಿಧಾನಸಭೆಯಲ್ಲಿ ಇಂದು ನಡೆಯಿತು. ಅರ್ಧ ಗಂಟೆ ನಂತರ ಸದನ ಮತ್ತೆ ಸೇರಿದಾಗ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಈ ನಡುವೆ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಮತ್ತೆ ಪ್ರಶೋತ್ತರ ಕಲಾಪ ನಡೆಸಲು ಮುಂದಾದರು.
ಆಗ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇದೇನು ನಾವು ಧರಣಿ ನಡೆಸಿರುವಾಗ ಕಲಾಪ ನಡೆಸುವುದು ಸರಿಯಲ್ಲ. ಸಚಿವ ಗೋವಿಂದ ಕಾರಜೋಳ ಶಾಸಕ ರಂಗನಾಥ್ ಜೊತೆ ನಡೆದುಕೊಂಡ ರೀತಿ ಸರಿಯಲ್ಲ. ಅವರು ವಿಷಾದ ವ್ಯಕ್ತಪಡಿಸಬೇಕು. ಒಬ್ಬ ಸದಸ್ಯನಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವುದು ಸದನಕ್ಕೆ ಗೌರವ ತರುವುದಿಲ್ಲ. ಅವರೂ ಸಹ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಎಲ್ಲರಿಗೂ ಗೌರವವಿದೆ ಎಂದು ಹೇಳಿ, ನಾವು ಧರಣಿ ಮುಂದುವರೆಸುತ್ತೇವೆ ಎಂದರು.
ಇಷ್ಟಾದರೂ ಸ್ಪೀಕರ್ ಪ್ರಶ್ನೋತ್ತರ ಕಲಾಪವನ್ನು ಮುಂದುವರಿಸಿದರು. ಈ ವೇಳೆ ಸದನಕ್ಕೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವನ್ನು ಪ್ರತಿಷ್ಠೆ ಮಾಡಿಕೊಳ್ಳುವುದು ಬೇಡ. ಬಸ್ ಸಮಸ್ಯೆ ಸರಿಪಡಿಸೋಣ. ಧರಣಿ ಕೈಬಿಡಿ ಎಂದು ಪ್ರತಿಪಕ್ಷದ ಸದಸ್ಯರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ನಾನು ಸಹ ಕೆಲ ದಿನಗಳ ಹಿಂದೆ ವರುಣಾ ಕ್ಷೇತ್ರಕ್ಕೆ ಹೋಗಿದ್ದೆ. ಹಲವಾರು ಊರುಗಳಲ್ಲಿ ಬಸ್ಗಳಿಲ್ಲ ಎಂದು ನನಗೆ ಹೇಳಿದರು. ನಾನು ಜಿಲ್ಲಾಧಿಕಾರಿಗೆ ಫೋನ್ ಮಾಡಿದ್ದೆ. ಆಗ ಸಿಬ್ಬಂದಿಗಳು ರಸ್ತೆ ಸರಿಯಿಲ್ಲವೆಂದು ಹೇಳಿದ್ದಾರೆ. ನಿಮ್ಮದೇ ಸರ್ಕಾರ ಈ ರೀತಿಯಾದರೆ ಹೇಗೆ? ಎಂದು ಪ್ರಶ್ನಿಸಿದರು.