ಬೆಂಗಳೂರು: ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಈ ವೇಳೆ ಕಾಂಗ್ರೆಸ್ ಮುಖಂಡರು ಚುನಾವಣಾ ನಿಯಮ ಉಲ್ಲಂಘಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿ ಕಡೆಯಿಂದ ತಲಾ ಮೂವರು ಮಾತ್ರ ನಾಮಪತ್ರ ಸಲ್ಲಿಕೆಯ ಕಚೇರಿಯೊಳಗೆ ತೆರಳಿದ್ದರು. ಕೊರೊನಾ ಹಿನ್ನೆಲೆ ಕೇವಲ ಮೂರು ಮಂದಿಗೆ ಮಾತ್ರ ಕಚೇರಿ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ಆದ್ರೆ, ಕಾಂಗ್ರೆಸ್ ಪಕ್ಷದಿಂದ ಮೂರಕ್ಕೂ ಹೆಚ್ಚು ಜನ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಬ್ಯಾರಿಕೇಡ್ ಹಾಕಿದ್ದರೂ ಕಚೇರಿಯ ಒಳಗಡೆ ಮಾಜಿ ಸಿಎಂ ಸಿದ್ದರಾಮಯ್ಯನವರು ವಾಹನ ನಿಲ್ಲಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಸೇರಿದಂತೆ ಸಿದ್ದರಾಮಯ್ಯ ಸಹ ಕಚೇರಿಯ ಆವರಣದೊಳಗೆ ವಾಹನ ತಂದಿರುವುದು ನಿಯಮ ಬಾಹಿರವಾಗಿದೆ ಎಂದು ಬಿಜೆಪಿ, ಜೆಡಿಎಸ್ ಪಕ್ಷ ಆರೋಪಿಸಿದೆ.
ಈ ಕುರಿತು ಬೆಂಗಳೂರು ನಗರ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಮಾತನಾಡಿ, ಕಾನೂನು ಉಲ್ಲಂಘನೆ ಯಾರೇ ಮಾಡಿದ್ದರು ತಪ್ಪು. ಈಗಾಗಲೇ ರಾಜಕೀಯ ಮುಖಂಡರಿಗೆ ನಿಯಮಗಳ ಬಗ್ಗೆ ಸಭೆಯಲ್ಲಿ ತಿಳಿಸಲಾಗಿತ್ತು. ಆದರೂ ಉಲ್ಲಂಘಿಸಿದ್ದರೆ, ಈ ಬಗ್ಗೆ ವರದಿ ಪಡೆದುಕೊಂಡು ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುತ್ತದೆ ಎಂದರು.