ಬೆಂಗಳೂರು: ಸಚಿವ ಶಿವಳ್ಳಿ ನಿಧನಕ್ಕೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸುತ್ತಾ, ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿರುವ ವಿಷಯ ಅತ್ಯಂತ ಆತಂಕ ಮೂಡಿಸಿದೆ. ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರ ಅಗಲಿಕೆ ನೋವುಂಟು ಮಾಡಿದೆ. ಅವರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ಶಿವಳ್ಳಿ ಅವರು ಮೆಲು ಮಾತಿನ, ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.
ಗೃಹ ಸಚಿವ ಎಂ.ಬಿ.ಪಾಟಿಲ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಸಿ.ಎಸ್. ಶಿವಳ್ಳಿ ಅವರ ಅನಿರೀಕ್ಷಿತ ಅಗಲಿಕೆ ತೀವ್ರ ಆಘಾತ ಉಂಟುಮಾಡಿದೆ. ಅವರ ಕುಟುಂಬದ ಸದಸ್ಯರಿಗೆ ಹಾಗೂ ಬಂಧು ಮಿತ್ರರಿಗೆ ಅವರ ಅಕಾಲಿಕ ಸಾವಿನ ನೋವನ್ನು ಸಹಿಸಿಕೊಳ್ಳುವಂತಹ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.