ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂಬ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ತಪ್ಪು. ಇದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದರು. ವಿಧಾನಸೌಧದ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರು ಮಾಹಿತಿ ಕೊರತೆಯಿಂದ ಈ ರೀತಿ ಹೇಳಿಕೆ ನೀಡಿರಬಹುದು ಎಂದರು.
ಅಧಿಕಾರಿಗಳನ್ನು ಸರ್ಕಾರದಲ್ಲಿ ಕಡೆಗಣಿಸಲಾಗಿದೆ. ಲಿಂಗಾಯತ ಅಧಿಕಾರಿಗಳಿಗೆ ಮಹತ್ವವಿಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಎಲ್ಲಾ ಜಾತಿಯಲ್ಲೂ ಅರ್ಹರು ಮತ್ತು ಅನರ್ಹರು ಇರುತ್ತಾರೆ. ಅರ್ಹತೆ ಆಧಾರದ ಮೇಲೆ ಅಧಿಕಾರಿಗಳಿಗೆ ಹುದ್ದೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಒಪ್ಪುವುದಿಲ್ಲ. ಸಿದ್ದರಾಮಯ್ಯ ಬಸವ ತತ್ವದ ಅನುಯಾಯಿ. ತಮ್ಮ ಸಂಪುಟದಲ್ಲಿ 7 ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ಲಿಂಗಾಯತ ಸಮುದಾಯದ ಮೂರು ಜಿಲ್ಲಾಧಿಕಾರಿಗಳು, 7 ಎಸ್ಪಿಗಳು, 13 ವಿಶ್ವವಿದ್ಯಾಲಯದ ಕುಲಪತಿಗಳು, ನಾಲ್ಕು ಮಂದಿ ಸಿಇಒಗಳು ಹಾಗೂ ಮುಖ್ಯ ಇಂಜಿನಿಯರ್ಗಳು ಇದ್ದಾರೆ ಎಂದು ಅಂಕಿಅಂಶಗಳ ಸಹಿತ ಮಾಹಿತಿ ನೀಡಿದರು.
ಜಾತಿ ಆಧಾರದಲ್ಲಿ ಪೋಸ್ಟಿಂಗ್ ಕೊಡಲು ಆಗಲ್ಲ. ಆದರೆ ಮಂತ್ರಿ ಮಾಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕೊಡುತ್ತೇವೆ. ಜಾತಿ ಆಧಾರದಲ್ಲಿ ಮಂತ್ರಿ ಮಾಡುವುದು ಸಹಜ. ಪ್ರಧಾನಿ ಯಾರು ಬೇಕಾದರೂ ಆಗಬಹುದು, ಆದರೆ ಅಟೆಂಡರ್ ಆಗಲು ಮಾನದಂಡವಿದೆ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಸ್ವತಃ ಬಸವ ತತ್ವದ ಅನುಯಾಯಿ. ಬಸವತತ್ವ ಸಾಮಾಜಿಕ ನ್ಯಾಯದ ಮೇಲೆ ನಿಂತಿದೆ. ಬಸವೇಶ್ವರ ಭಾವಚಿತ್ರ ಸರ್ಕಾರಿ ಕಚೇರಿಯಲ್ಲಿ ಹಾಕಿಸಲು ಆದೇಶ ಮಾಡಿದ್ದಾರೆ. ಲಿಂಗಾಯತ ಸಿಎಂ ಸಾಕಷ್ಟು ಮಂದಿ ಆಗಿದ್ದರೂ ಬಸವೇಶ್ವರ ಫೋಟೋ ಏಕೆ ಹಾಕಿರಲಿಲ್ಲ? ಕಲಬುರಗಿ ವಿವಿಗೆ ಬಸವೇಶ್ವರ ಹೆಸರು ಇಡಲು ಪ್ರಸ್ತಾಪ ಇತ್ತು. ಆದರೆ ಬಿಜೆಪಿ ಅವಧಿಯಲ್ಲಿ ಏಕಿಡಲಿಲ್ಲ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಅಲ್ಲ. ಆದರೆ ಅವರಿಗೆ ತಳಸಮುದಾಯದ ಬಗ್ಗೆ ಕಾಳಜಿ ಇದೆ ಎಂದರು.
ಅಧಿಕಾರಿಗಳ ಬಗ್ಗೆ ಜಾತಿ ಆಧಾರದಲ್ಲಿ ಮಾತನಾಡುವುದೇ ತಪ್ಪು. ಸಾಕಷ್ಟು ಚೀಫ್ ಇಂಜಿನಿಯರ್ ಪೋಸ್ಟ್ನಲ್ಲಿ ಲಿಂಗಾಯತರಿದ್ದಾರೆ. ಹೀಗೆ ಆದರೆ ನಾಳೆ ಒಕ್ಕಲಿಗರು, ಕುರುಬರು ಮಾತನಾಡುತ್ತಾರೆ. ಹೀಗಾದರೆ ಆಡಳಿತ ನಡೆಸುವುದು ಹೇಗೆ? ಶಾಮನೂರು ಹೇಳಿಕೆ ಪರಿಣಾಮ ಆಡಳಿತದ ಮೇಲೆ ಬೀರುತ್ತದೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಪರವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಒಪ್ಪಲು ಆಗಲ್ಲ. ಜಾತಿ ಅಧಾರಿತವಾಗಿ ಮಾತನಾಡಬಾರದು. ಆದರೆ ನಾನು ಸಿದ್ದರಾಮಯ್ಯ ಪರವಾಗಿ ವಕಾಲತ್ತು ಮಾಡಲು ಬಂದಿಲ್ಲ. ಸಿದ್ದರಾಮಯ್ಯ ಬಳಿ ನಾನೇನು ಭಿಕ್ಷೆ ಬೇಡಲ್ಲ ಎಂದರು.
ಲಿಂಗಾಯತ ಶಾಸಕರಿಗೆ ಅಸಮಾಧಾನ ಇಲ್ಲ: ಸರ್ಕಾರದ ಬಗ್ಗೆ ಲಿಂಗಾಯತ ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ವಿರೋಧ ಪಕ್ಷದವರು ಹೇಳಿದಂತೆ ಬಹುಮತವುಳ್ಳ ನಮ್ಮ ಸರ್ಕಾರಕ್ಕೆ ಏನು ಆಗುವುದಿಲ್ಲ. ಪಕ್ಷದಲ್ಲಿ ಯಾವುದೇ ರೀತಿಯ ಸಮಸ್ಯೆ ಗೊಂದಲಗಳಿಲ್ಲ. ಆಂತರಿಕ ಪ್ರಜಾಪ್ರಭುತ್ವ ಪಕ್ಷದಲ್ಲಿ ಹೆಚ್ಚಿರುವುದರಿಂದ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಿದ್ದಾರೆ. ತಾವು ಮುಖ್ಯಮಂತ್ರಿ ಪರವಾಗಿಯಾಗಲಿ ಅಥವಾ ಶಾಮನೂರು ಶಿವಶಂಕರಪ್ಪ ಪರವಾಗಿಯಾಗಲಿ ಮಾತನಾಡುತ್ತಿಲ್ಲ. ಶಾಸಕನಾಗಿ ಜಾತಿ ಆಧಾರದ ಮೇಲೆ ಮಾತನಾಡಬಾರದು ಎಂದು ಹೇಳಿದರು.
ಡಿಸಿಎಂ ಹುದ್ದೆ ಸಂವಿಧಾನದಲ್ಲಿ ಇಲ್ಲ: ಉಪಮುಖ್ಯಮಂತ್ರಿ ಹುದ್ದೆ ಸಂವಿಧಾನದಲ್ಲಿ ಇಲ್ಲ. ಅದೊಂದು ಗೌರವದ ಹುದ್ದೆ. ಮತ್ತೆ ಮೂರು ಉಪಮುಖ್ಯಮಂತ್ರಿ ಮಾಡಬೇಕೆಂಬ ವಿಚಾರ ಬಂದಾಗ 3 ಏಕೆ 6 ಡಿಸಿಎಂ ಮಾಡಿ ಎಂದು ಹೇಳಿದ್ದು ನಿಜ. ಉಪಮುಖ್ಯಮಂತ್ರಿಗಳ ಸಂಖ್ಯೆ ಹೆಚ್ಚಾದರೆ ಪ್ರಧಾನ ಉಪಮುಖ್ಯಮಂತ್ರಿ ಎಂದು ಮಾಡಬೇಕೇ ಎಂದು ಪ್ರಶ್ನಿಸಿದರು.
ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ: ಶಾಶ್ವತ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಅವಧಿಯಲ್ಲಿ ಸಿದ್ಧಪಡಿಸಲಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಯನ್ನು ಸರ್ಕಾರ ಸ್ವೀಕರಿಸಿ ಬಿಡುಗಡೆ ಮಾಡಬೇಕು ಇದೇ ಸಂದರ್ಭದಲ್ಲಿ ರಾಯರೆಡ್ಡಿ ಎಂದು ಮುಖ್ಯಮಂತ್ರಿ ಅವರನ್ನು ಆಗ್ರಹಿಸಿದರು. ಬಿಹಾರದಲ್ಲಿ ಜಾತಿಗಣತಿಯನ್ನು ಬಿಡುಗಡೆ ಮಾಡಲಾಗಿದೆ. ಜಾತಿ ಗಣತಿ ಬಿಡುಗಡೆ ಮಾಡುವುದರಿಂದ ದುರ್ಬಲ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಆಗಲಿ: ಸಚಿವ ಸತೀಶ್ ಜಾರಕಿಹೊಳಿ