ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಸುದ್ದಿಗೋಷ್ಠಿ ಬೆಂಗಳೂರು:''ರಾಜ್ಯ ಸರ್ಕಾರದ ಎಟಿಎಂ ಕಲೆಕ್ಷನ್ನ ಕೇಂದ್ರ ಬಿಂದು ದೆಹಲಿಯ ಹೈಕಮಾಂಡ್. ರಾಹುಲ್ ಗಾಂಧಿ ಅವರೇ ಈ ಕಲೆಕ್ಷನ್ ಸರ್ಕಾರದ ಮುಖ್ಯಸ್ಥ, ಎಲ್ಲ ವಸೂಲಿ ಹಣದ ನಿರ್ವಹಣೆ ಮಾಡೋದು ರಾಹುಲ್ ಗಾಂಧಿ ಅವರೇ'' ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಗಂಭೀರ ಆರೋಪ ಮಾಡಿದರು. ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಹೆಸರಿನ ದೊಡ್ಡ ಪೋಸ್ಟರ್ ರಿಲೀಸ್ ಮಾಡಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹೊಸ ಪೋಸ್ಟರ್ ರಿಲೀಸ್ ಮಾಡಿದರು. ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ಹೆಸರಿನ ದೊಡ್ಡ ಪೋಸ್ಟರ್ ರಿಲೀಸ್ ಮಾಡಿದರು. ರಾಹುಲ್ ಗಾಂಧಿ- ವೇಣುಗೋಪಾಲ್- ಸುರ್ಜೇವಾಲಾ- ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್- ಯತೀಂದ್ರ ಸಿದ್ದರಾಮಯ್ಯ- ಸಚಿವ ಬೈರತಿ ಸುರೇಶ್- ಗುತ್ತೆಗಾರರಾದ ಅಂಬಿಕಾಪತಿ- ಕೆಂಪಣ್ಣ ಸೇರಿದಂತೆ ಕೆಲ ಗುತ್ತಿಗೆದಾರರ ಫೊಟೋಗಳಿರುವ ಪೋಸ್ಟರ್ ಬಿಡುಗಡೆ ಮಾಡಿದರು.
ಪೋಸ್ಟರ್ ಬಿಡುಗಡೆ ಮಾಡಿದ ಮಾಜಿ ಸಿಎಂ:ಮಾಜಿ ಸಿಎಂಡಿ.ವಿ. ಸದಾನಂದ ಗೌಡ ಮಾತನಾಡಿ, ''ಕಳೆದ ಐದು ತಿಂಗಳಿಂದ ಈ ಸರ್ಕಾರದ ಆಡಳಿತವೇನು ಅಂತ ಜನರಿಗೆ ಗೊತ್ತಾಗಿದೆ. ಇದು ಕಲೆಕ್ಷನ್ ಸರ್ಕಾರ ಅಂತ ಜನಕ್ಕೆ ಅರ್ಥ ಆಗಿದೆ. ಈ ಸರ್ಕಾರದ ಕಲೆಕ್ಷನ್ನ ಕೇಂದ್ರ ಬಿಂದು ದೆಹಲಿಯ ಹೈಕಮಾಂಡ್. ರಾಹುಲ್ ಗಾಂಧಿ ಅವರೆಡ ಈ ಕಲೆಕ್ಷನ್ ಸರ್ಕಾರದ ಮುಖ್ಯಸ್ಥ ಎಲ್ಲ ವಸೂಲಿ ಹಣದ ನಿರ್ವಹಣೆ ಮಾಡೋದು ರಾಹುಲ್ ಗಾಂಧಿ ಅವರೇ'' ಎಂದು ಗಂಭೀರ ಆರೋಪ ಮಾಡಿದರು.
ಕಮೀಷನ್ ಪಡೆಯುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇದೆ. ನಾವು ಇವತ್ತು ಈ ಸರ್ಕಾರದ ಕಲೆಕ್ಷನ್ ವಂಶಾವಳಿ ಬಿಡುಗಡೆ ಮಾಡಿದ್ದೇವೆ. ರಾಹುಲ್ ಗಾಂಧಿಗೆ ಎರಡು ಕಡೆಯಿಂದ ಕಲೆಕ್ಷನ್ ಹೋಗುತ್ತಿದೆ. ಒಂದು ಸುರ್ಜೇವಾಲಾ ಕಡೆಯಿಂದ ಮತ್ತೊಂದು ವೇಣುಗೋಪಾಲ್ ಕಡೆಯಿಂದ ಕಲೆಕ್ಷನ್ ಹೋಗುತ್ತಿದೆ. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡ್ತಾರೆ. ವೇಣುಗೋಪಾಲ್ಗೆ ಡಿಕೆ ಶಿವಕುಮಾರ್ ಕಲೆಕ್ಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಗುಂಪುಗಳಿಗೆ ಅವರರವರ ಬಣದ ಗುತ್ತಿಗೆದಾರರು ಕಮೀಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಕೆಂಪಣ್ಣ ಸಿದ್ದರಾಮಯ್ಯ ಗುಂಪಿನಲ್ಲಿದ್ದರೆ, ಅಂಬಿಕಾಪತಿ ಡಿಕೆ ಶಿವಕುಮಾರ್ ಗುಂಪಿನಲ್ಲಿದ್ದು, ಹಣ ಸಂಗ್ರಹ ಮಾಡಿಕೊಡುತ್ತಿದ್ದಾರೆ'' ಎಂದು ಆರೋಪಿಸಿದರು.
ಜನ ಮಾತಾಡ್ತಿದ್ದಾರೆ- ಸದಾನಂದಗೌಡ:''ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಗೆ ಅಲ್ಲಿನ ಕಲೆಕ್ಷನ್ ಯಾವ ರೀತಿ ಮಾಡಬಹುದು ಅಂತ ಪರಿಶೀಲಿಸಲು ಹೋಗಿದ್ದರು ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಗುಂಪಿನ ಸತೀಶ್ ಜಾರಕಿಹೊಳಿಗೆ ಕಮೀಷನ್ ತಪ್ಪಿಸಲು ಡಿಕೆಶಿ ಹೋಗಿದ್ದರು. ಕಲೆಕ್ಷನ್ನಲ್ಲೂ ಪೈಪೋಟಿ ಮಾಡುತ್ತಿದ್ದಾರೆ. ಸಿಎಂ, ಡಿಸಿಎಂ ಕಡೆ ತಲಾ ಒಂದು ಗುಂಪು ಕಮಿಷನ್ ಸಂಗ್ರಹ ಮಾಡ್ತಿದೆ. ಒಳ್ಳೆಯ, ಪ್ರಾಮಾಣಿಕ ಗುತ್ತಿಗೆದಾರರಿಗೆ ಈಗ ಅಸ್ತಿತ್ವ ಇಲ್ಲ. ಕಮೀಷನ್ ಕೊಡುವ ಗುತ್ತಿಗೆದಾರರಿಗೆ ಈ ಸರ್ಕಾರ ಮಣೆ ಹಾಕ್ತಿದೆ ಎಂದು ಆರೋಪಿಸಿದರು.
''ಇಂದಿರಾ ಕ್ಯಾಂಟೀನ್ಗಳು ಹಲವು ಕಡೆ ನಿಂತಿವೆ. ಕಮಿಷನ್ ಕೊಡುತ್ತಿಲ್ಲ ಅಂತ ನಿಲ್ಲಿಸಿದ್ದಾರೆ. ದಸರಾದಲ್ಲೂ ಕಲಾವಿದರಿಂದ ಕಮೀಷನ್ ಕೇಳ್ತಿದ್ದಾರೆ. ಎಲ್ಲವೂ ಕಮೀಷನ್ಗಾಗಿ ಮಾಡ್ತಿದ್ದಾರೆ. ಇಡೀ ಸರ್ಕಾರವೇ ಕಮೀಷನ್ ಸರ್ಕಾರವಾಗಿದೆ. ಹಾಗಾಗಿ ಈ ಕಮೀಷನ್ ಸರ್ಕಾರ ತೊಲಗಬೇಕು'' ಎಂದರು. ಡಿಕೆ ಶಿವಕುಮಾರ್ ವಿರುದ್ಧದ ತನಿಖೆಗೆ ಹೈಕೋರ್ಟ್ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಅವರ ಅಕ್ರಮ ಆಸ್ತಿಯೂ ಇದೇ ಹಿನ್ನೆಲೆಯಲ್ಲಿ ಆಗಿದ್ದಾಗಿದೆ. ಹಾಗಾಗಿ ಐಟಿ ದಾಳಿ ಮಾಡಿ ಹಣ ಸೀಜ್ ಮಾಡುತ್ತದೆ. ಅಷ್ಟೇ ಆದರೆ ಹಣದ ಮೂಲ, ಹಣದ ಅಪರಾಧ ಹಿನ್ನೆಲೆ ಪತ್ತೆ ಮಾಡಲು ಸಿಬಿಐ ತನಿಖೆಯ ಅಗತ್ಯವಿದೆ. ಹಾಗಾಗಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆ ಪ್ರಕರಣವನ್ನು ಸಿದ್ದರಾಮಯ್ಯ ಸಿಬಿಐಗೆ ಕೊಡಲಿ'' ಎಂದು ಡಿವಿ ಸದಾನಂದಗೌಡ ಆಗ್ರಹಿಸಿದರು.
ಸಿಬಿಐ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ನೀಡಿದ ಹಿನ್ನಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೈತಿಕವಾಗಿ ತಮ್ಮ ಸ್ಥಾನದಲ್ಲಿ ಮುಂದುವರೆಯಬಾರದು. ಅವರು ತಪ್ಪಿತಸ್ಥ ಅಲ್ಲ ಅಂದರೆ, ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಡಿಕೆಶಿ ರಾಜೀನಾಮೆ ಪಡೆಯಲಿ'' ಎಂದು ಒತ್ತಾಯಿಸಿದರು.
ರಾಜ್ಯಾದ್ಯಂತ ಧರಣಿ :''ಇಡೀ ರಾಜ್ಯಾದ್ಯಂತ ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಧರಣಿ ನಡೆಸಿದ್ದೇವೆ. ಹಬ್ಬ ಮುಗಿದ ಮೇಲೆ ಈ ಪೋಸ್ಟರ್ಗಳನ್ನು ರಾಜ್ಯಾದ್ಯಂತ ಹಾಕುತ್ತೇವೆ. ಸರ್ಕಾರದ ನಿಜ ಬಣ್ಣ ಜನರಿಗೆ ತಿಳಿಸ್ತೇವೆ. ಸಿನಿಮಾ ಪೋಸ್ಟರ್ ಥರ ಈ ಪೋಸ್ಟರ್ಗಳನ್ನು ಹಾಕುತ್ತೇವೆ. ನಮ್ಮೆಲ್ಲ ನಾಯಕರ ಜೊತೆಗೆ ಹೋಗಿ ಪೋಸ್ಟರ್ ಅಂಟಿಸ್ತೇವೆ'' ಎಂದರು.
ಬಿಜೆಪಿಯ ಷಡ್ಯಂತ್ರದ ದಾಖಲೆ ನನ್ನ ಬಳಿ ಇವೆ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ''ಆರೋಪಿಯೇ ಅವರು, ಹೀಗೇ ಹೇಳ್ದೆ ಅವರು ಇನ್ನೇನು ಹೇಳ್ತಾರೆ? ಎಂದ ಡಿವಿಎಸ್, ರಾಜ್ಯದ ಹಣ ಕೊಳ್ಳೆ ಹೊಡೆಯೋರ ವಿರುದ್ಧ ನಾವು ಇದ್ದೇವೆ. ಇದಕ್ಕೆ ಬೇಕಾದರೆ ಅವರು ನಮ್ಮನ್ನು ಐಟಿ ವಕ್ತಾರರು ಅಂದ್ರೂ ಒಪ್ಪಲು ನಾವು ತಯಾರಿದ್ದೇವೆ'' ಎಂದು ಬಿಜೆಪಿಯವ್ರು ಐಟಿ ವಕ್ತಾರರು ಎಂಬ ಡಿಕೆಶಿ ಹೇಳಿಕೆಗೆ ಡಿವಿಎಸ್ ಟಕ್ಕರ್ ನೀಡಿದರು.
ಮೈತ್ರಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸದಾನಂದಗೌಡ, ''ರಾಷ್ಟ್ರಮಟ್ಟದಲ್ಲಿ ಆಗುವ ತೀರ್ಮಾನ ರಾಷ್ಟ್ರಮಟ್ಟದಲ್ಲೇ ಆಗಬೇಕು ರಾಜ್ಯ ಮಟ್ಟದಲ್ಲಿ ಆಗುವ ಕೆಲಸ ನಾವು ಮಾಡ್ತೇವೆ. ಮೈತ್ರಿ ಸೀಟು ಹಂಚಿಕೆ ಬಗ್ಗೆ ಹಬ್ಬದ ಬಳಿಕ ಮಾತುಕತೆ ನಡೆಯುತ್ತದೆ'' ಎಂದರು. ''ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷ ಆಗಬೇಕು ಎನ್ನುವ ಅಪೇಕ್ಷೆ ನನಗಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಆಸೆ ಇಟ್ಟು ನಾನು ಪಕ್ಷದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಪಕ್ಷ ಸಂಕಷ್ಟದಲ್ಲಿದೆ, ಮತ್ತೆ ಸಂಘಟಿಸಬೇಕು, ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ನಾನು ಚಟುವಟಿಕೆಯಲ್ಲಿ ತೊಡಗಿದ್ದೇನೆ. ಈಗಾಗಲೇ ರಾಜ್ಯ ಅಧ್ಯಕ್ಷನಾಗಿ ನಾಲ್ಕೂವರೆ ವರ್ಷ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿಯೇ ಬಿಜೆಪಿ ಮೊದಲ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ ಮತ್ತೊಮ್ಮೆ ಮಾಡಿದ ಸಾಧನೆಯನ್ನೇ ಇನ್ನೊಮ್ಮೆ ಮಾಡಲು ನಾನು ಮುಂದಾಗುವುದಿಲ್ಲ'' ಎಂದು ಸದಾನಂದಗೌಡ ಹೇಳಿದರು.
ಇದನ್ನೂ ಓದಿ:ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು - ಡಿಕೆಶಿ ವಿರುದ್ಧ ಸಿ.ಟಿ ರವಿ ವಾಗ್ದಾಳಿ