ಬೆಂಗಳೂರು: ಕಾಂಗ್ರೆಸ್ ಪಕ್ಷ ಹೊಸದಾಗಿ ಆರಂಭಿಸಿರುವ ಪೇ ಸಿಎಂ ಅಭಿಯಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪರ-ವಿರೋಧದ ಹೇಳಿಕೆಗಳು ವ್ಯಕ್ತವಾಗಿವೆ. ಬೆಂಗಳೂರಿನ ವಿಧಾನಸೌಧದ ಕೆಂಗಲ್ ಗೇಟ್ನಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಜನಪ್ರತಿನಿಧಿಗಳು, ಸರ್ಕಾರ ಮತ್ತು ಸಿಎಂ ಪರ- ವಿರೋಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಮೊಬೈಲ್ನಲ್ಲಿ ಕಾಂಗ್ರೆಸ್ನವರು ಪೇ ಸಿಎಂ ಅಂತ ಅಭಿಯಾನ ಮಾಡ್ತಿದಾರೆ. ಕಾಂಗ್ರೆಸ್ನವರು ಭಾರತ್ ಜೋಡೋ ಯಾತ್ರೆ ಮೊದಲು ಪೇ ಮಾಡಿ. ಸಿದ್ದರಾಮಯ್ಯ ಕಾರು ಹಾಗೂ ವಾಚುಗಳಿಗೆ ಪೇ ಮಾಡಿ. ಅಲ್ಲದೇ ರಮೇಶ್ ಕುಮಾರ್ ಹೇಳಿದ್ದರಲ್ಲ ತಲೆಮಾರು ಕುಳಿತು ತಿನ್ನುವಷ್ಟು ಮಾಡಿದ್ದೇವೆ ಅಂತಾ ಅದಕ್ಕೆ ಪೇ ಮಾಡಿ. ಕಾಂಗ್ರೆಸ್ ಇರುವವರೆಗೆ ಭ್ರಷ್ಟಾಚಾರ ನಡೆಯಲಿದೆ, ಕಾಂಗ್ರೆಸ್ ಹೋಗುವವರೆಗೆ ಭ್ರಷ್ಟಾಚಾರ ಹೋಗಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಹತಾಶ:ಸಚಿವ ಬಿ ಸಿ ನಾಗೇಶ್ ಮಾತನಾಡಿ, ತುಂಬಾ ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಅಭ್ಯಾಸ ಇದ್ದು, ಕಳೆದ ಎಂಟು ವರ್ಷಗಳಲ್ಲಿ ಏನು ಸಿಗದೆ ಕಾಂಗ್ರೆಸ್ನವರು ಹತಾಶರಾಗಿದ್ದಾರೆ. ಕಾಂಗ್ರೆಸ್ಗೆ ಹಗರಣದ ಇತಿಹಾಸ ಇರುವುದು. ಈ ರೀತಿಯ ಕೆಳಮಟ್ಟದ ಯೋಚನೆ ಕಾಂಗ್ರೆಸ್ಗೆ ಒಳ್ಳೆಯದಲ್ಲ. ಬಿಜೆಪಿಯವರನ್ನು ಬಟ್ಟೆ ಬಿಚ್ಚಿಸಿ ನಿಲ್ಲಿಸೋಣ ಎಂದು ಅಂದುಕೊಂಡಿರಬಹುದು. ಆದರೆ ಅದು ಆಗಲ್ಲ. ಶಿಕ್ಷಕರ ನೇಮಕಾತಿ ಕಾಂಗ್ರೆಸ್ ಕಾಲದಲ್ಲಿ ಆಗಿದೆ ಎಂದು ತಿರುಗೇಟು ನೀಡಿದರು.
ಜನರ ಮುಂದೆ ಕಾಂಗ್ರೆಸ್ ಬೆತ್ತಲು: ಕುಡಚಿ ಶಾಸಕ ಪಿ ರಾಜೀವ್ ಮಾತನಾಡಿ, 75 ವರ್ಷದ ಸ್ವಾತಂತ್ರ್ಯದಲ್ಲಿ 60 ವರ್ಷ ಆಳ್ವಿಕೆ ಮಾಡಿದ್ದು, ಕಾಂಗ್ರೆಸ್ ಮಾತ್ರ. ಕೇವಲ 10 ರಿಂದ 15 ವರ್ಷ ಬೇರೆ ಪಕ್ಷ ಆಡಳಿತಕ್ಕೆ ಬಂದ್ರೆ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ರೀತಿ ಪೇ ಸಿಎಂ ಎಂದು ಅಂಟಿಸಿದರೆ ಜನರಿಗೆ ಯಾವ ಸಂದೇಶ ಕೊಡ್ತಿದ್ದೀರಾ?. ಇದು ಕಾಂಗ್ರೆಸ್‌ನ ಅಧಃಪತನವಾಗ್ತಿರುವುದಕ್ಕೆ ಉದಾಹರಣೆ. ಈ ರೀತಿ ಮಾಡಿ ರಾಜ್ಯದ ಜನರ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ ಎಂದರು.