ಬೆಂಗಳೂರು:ವಿಧಾನ ಪರಿಷತ್ ಕಲಾಪ ಆರಂಭವಾಗಿದ್ದು, ಸದನದ ನೂತನ ಸದಸ್ಯರ ಹೆಸರು ಘೋಷಣೆ ಬಳಿಕ ಅಗಲಿದ ನಾಯಕರಿಗೆ ಸಂತಾಪ ಸೂಚಿಸಲಾಯಿತು.
ನಿಧನರಾದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಪ್ರವೀಣ ಚಂದ್ರು ಕಮಲಾನಿ, ಎ.ಕೆ. ಸುಬ್ಬಯ್ಯ, ಮಾಜಿ ಶಾಸಕರಾದ ಉಮೇಶ್ ಭಟ್, ಸಿ. ವೀರಭದ್ರಯ್ಯ, ಅರ್ಜುನ ರಾವ್ ಹಿಶೋಭಿಕರ್, ಕೇಂದ್ರದ ಮಾಜಿ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಮ್ ಜೇಠ್ಮಲಾನಿ ಸೇರಿದಂತೆ ಮತ್ತಿತರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಅಲ್ಲದೆ, ನೆರೆಯಲ್ಲಿ ಮೃತಪಟ್ಟ 90 ಜನರಿಗೂ ಸಂತಾಪ ಸೂಚಿಸಬೇಕೆಂದು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ತಿಳಿಸಿದರು.
ಸದಸ್ಯ ಐವಾನ್ ಡಿಸೋಜ ಅವರು ವಿಧಾನಸಭೆ ಮಾದರಿಯಲ್ಲಿ ವಿಧಾನ ಪರಿಷತ್ನಲ್ಲಿ ಕೂಡ ಮಾಧ್ಯಮ ನಿರ್ಬಂಧ ಇದೆಯೋ ಇಲ್ಲವೋ ಎನ್ನುವ ಗೊಂದಲವಿದ್ದು, ಅದನ್ನು ಸ್ಪಷ್ಟಪಡಿಸಬೇಕೆಂದು ಮನವಿ ಮಾಡಿದರು. ಇನ್ನು ಪರಿಷತ್ ಬಿಜೆಪಿ ಆಡಳಿತ ಪಕ್ಷದ ನಾಯಕ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಿಗೆ ಗಣ್ಯರಿಗೆ ಸಂತಾಪ ಸೂಚಿಸಿ, ಮೃತರ ಗುಣಗಾನ ಮಾಡಿದರು. ಜೊತೆಗೆ ನೆರೆಯಲ್ಲಿ ಮೃತಪಟ್ಟ ನಾಯಕರಿಗೂ ಸಂತಾಪ ಸೂಚಿಸುತ್ತೇನೆ, ಇವರನ್ನೂ ಸಹ ಸಂತಾಪ ಸೂಚನಾ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಿದರು. ನಂತರ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸಂತಾಪ ಸೂಚಿಸಿದರು.
ಕಾಂಗ್ರೆಸ್ ಪ್ರತಿಪಕ್ಷ ನಾಯಕರಾಗಿ ಎಸ್.ಆರ್ ಪಾಟೀಲ್, ಬಸವರಾಜ ಹೊರಟ್ಟಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮರಿತಿಬ್ಬೇಗೌಡ ಉಪ ನಾಯಕ, ಚೌಡರೆಡ್ಡಿ ಸಚೇತಕ ಆಯ್ಕೆಯಾಗಿದ್ದನ್ನು ಇದೇ ವೇಳೆ ಘೋಷಿಸಲಾಯಿತು.