ಬೆಂಗಳೂರು:ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಹಾಗೂ ಪಾಲಿಕೆಯ ಮಾಜಿ ಸದಸ್ಯ ಸತ್ಯ ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಇಬ್ಬರು ಸಾಧಕರ ನಿಧನದಿಂದ ಕನ್ನಡ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಗಳಿಗೆ ನೀಡಲಿ ಎಂದು ಸಂತಾಪ ಸೂಚಿಸಿದರು.
ಸಂತಾಪ ಸೂಚನೆ ನಂತರ ಇತ್ತೀಚೆಗೆ ಪಾಲಿಕೆಯ ಕಾವೇರಿಪುರ ವಾರ್ಡ್, ಸಗಾಯಪುರ ವಾರ್ಡ್‌ಗಳಲ್ಲಿ ಉಪಚುನಾವಣೆ ನಡೆದಿದ್ದು, ಕಾವೇರಿಪುರ ವಾರ್ಡ್‌ನ ಪಲ್ಲವಿ, ಸಗಾಯಪುರ ವಾರ್ಡ್‌ನ ಪಳನಿಯಮ್ಮಳ್ ಜಯಗಳಿದ್ದರು. ಇವರಿಬ್ಬರು ಪ್ರಮಾಣ ವಚನ ಸ್ವೀಕರಿಸಿ, ಮೇಯರ್ ಹೂಗುಚ್ಛ ನೀಡಿ ಅಭಿನಂದಿಸಿದರು.
ನಂತರ, ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಆಡಳಿತ ಪಕ್ಷದ ನಾಯಕ ವಾಜಿದ್, ಹಣಕಾಸು ವರ್ಷ ಆರಂಭವಾಗಿ 3 ತಿಂಗಳು ಪೂರ್ಣವಾಗುವ ಮುನ್ನವೇ ಶೇ.50ರಷ್ಟು ಆಸ್ತಿ ಸಂಗ್ರಹವಾಗಿದ್ದು, ಇದಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಧಿಕಾರಿಗಳೇ ಕಾರಣ. ಈವರೆಗೆ 1700 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ 3500 ಕೋಟಿ ರೂ. ಸಂಗ್ರಹಿಸಲಾಗುವುದು. ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದರೆ ಹೆಚ್ಚಿನ ಸಂಗ್ರಹ ಸಾಧ್ಯ ಎಂದರು.
ಇಂದಿರಾ ಕ್ಯಾಂಟೀನ್ ಟೆಂಡರ್ ರದ್ದುಗೊಳಿಸಿ:
ಇಂದಿರಾ ಕ್ಯಾಂಟೀನ್ಗಳಲ್ಲಿ ಊಟದ ಕ್ವಾಲಿಟಿ ಸರಿ ಇಲ್ಲ. ಹಾಗಾಗಿ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ. ತಕ್ಷಣ ಟೆಂಡರ್ ರದ್ದುಗೊಳಿಸಿ ಕ್ಷೇತ್ರವಾರು ಟೆಂಡರ್ ನೀಡುವಂತೆ ಶಾಸಕ ಮುನಿರತ್ನ ಒತ್ತಾಯ ಮಾಡಿದರು. ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್ ಬಗ್ಗೆ ಸತ್ಯವನ್ನೇ ಹೇಳಿದ್ದೀರಾ ಎಂದು ಶಾಸಕ ಸತೀಶ್ ರೆಡ್ಡಿ ಮುನಿರತ್ನರ ಕಾಲೆಳೆದರು.