ಬೆಂಗಳೂರು: ನೆರೆ ಪ್ರದೇಶದಲ್ಲಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಯಾರ ಬಾಯಿಗೂ ಆಹಾರವಾಗದಂತೆ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳಿಗೆ ತಾಕೀತು ಮಾಡಿದರು.
ಸಂಪುಟ ಸಭೆಯಲ್ಲಿ ನೆರೆ ಪರಿಹಾರ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿ, ಈ ವೇಳೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಸಂತ್ರಸ್ತರಿಗೆ ಆಹಾರ, ಬಟ್ಟೆ ಸರಿಯಾಗಿ ಸಿಗುವಂತೆ ಕ್ರಮವಹಿಸಿ. ಮನೆ ಕಳೆದುಕೊಂಡವರ ಪಟ್ಟಿ ತ್ವರಿತವಾಗಿ ಸಿದ್ಧಪಡಿಸಿ. ಅವರಿಗೆ ಪರಿಹಾರ ತಲುಪಿಸುವ ಕೆಲಸವನ್ನು ಶೀಘ್ರವೇ ಮಾಡಿ. 10 ಸಾವಿರ ರೂ. ಪರಿಹಾರ ಎಲ್ಲರಿಗೂ ಸಿಗಬೇಕು. ಮನೆ ಕಳೆದು ಕೊಂಡವರಿಗೆ ಪರ್ಯಾಯ ವ್ಯವಸ್ಥೆ ಮಾಡಿ. ಆಯಾ ಕ್ಷೇತ್ರದ ಜವಾಬ್ದಾರಿ ಆಯಾ ಶಾಸಕರು, ಸಚಿವರೇ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು. ನೆರೆ ಪೀಡಿತ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ವರದಿ ತರಿಸುವಂತೆ ಸಿಎಂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.