ಬೆಂಗಳೂರು:ಕೊರೊನಾ ಸೋಂಕಿನ ಕಾರಣದಿಂದ ಉಪಚುನಾವಣಾ ಪ್ರಚಾರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿದ್ದಾರೆ. ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರದಲ್ಲಿ ಒಂದೊಂದು ದಿನ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಉಪಚುನಾವಣಾ ಪ್ರಚಾರದ ಅಖಾಡಕ್ಕಿಳಿಯಲು ಸಿಎಂ ಸಜ್ಜು: ಶಿರಾ, ಆರ್.ಆರ್ ನಗರದಲ್ಲಿ ಪ್ರಚಾರಕ್ಕೆ ನಿರ್ಧಾರ - RR Nagar and Sira by-election 2020
ಆರ್ ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ಕೊರೊನಾ ಕಾರಣದಿಂದ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಲು ಹಿಂದೇಟು ಹಾಕಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೊನೆ ಗಳಿಗೆಯಲ್ಲಿ ಒಪ್ಪಿಕೊಂಡಿದ್ದಾರೆ. ಅ. 30 ರಂದು ಶಿರಾದಲ್ಲಿ ಹಾಗೂ ಅ. 31 ರಂದು ಆರ್ ಆರ್ ನಗರದಲ್ಲಿ ಅಭ್ಯರ್ಥಿಗಳ ಪರ ಮತಬೇಟೆಗೆ ಇಳಿಯಲಿದ್ದಾರೆ.
ಅಕ್ಟೋಬರ್ 30 ರಂದು ಶಿರಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೋಡ್ ಶೋ ನಡೆಸಲಿದ್ದಾರೆ. ರಸ್ತೆ ಮಾರ್ಗದ ಮೂಲಕ ಶಿರಾಗೆ ಬೆಳಗ್ಗೆ 11 ಗಂಟೆಗೆ ಭೇಟಿ ನೀಡಲಿರುವ ಸಿಎಂ, ಶಿರಾದ ಮದಲೂರಿನಲ್ಲಿ ಆಯೋಜಿಸಿರುವ ಉಪಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಯಿಂದ 5ಗಂಟೆವರೆಗೆ ಶಿರಾ ಪಟ್ಟಣದಲ್ಲಿ ಚುನಾವಣಾ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಅಕ್ಟೋಬರ್ 31 ರಂದು ಆರ್ ಆರ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ. ಇಲ್ಲಿಯೂ ಸಹ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ.