ಕರ್ನಾಟಕ

karnataka

ETV Bharat / state

BSY ಸಂಪುಟದಲ್ಲಿ ವೀರಶೈವರಿಗೆ ಸಿಂಹ ಪಾಲು: ಹೇಗಿತ್ತು ಗೊತ್ತಾ ಮಾಜಿ ಸಿಎಂ ಕ್ಯಾಬಿನೆಟ್​..!

ಬಿಜೆಪಿಗೆ ವೀರಶೈವ ಸಮುದಾಯದ ಬೆಂಬಲ ದೊಡ್ಡ ಪ್ರಮಾಣದಲ್ಲಿದ್ದು, ಆ ಸಮುದಾಯದ ಶಾಸಕರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಮಾಜಿ ಸಿಎಂ ಬಿ. ಎಸ್​. ಯಡಿಯೂರಪ್ಪ ಸಂಪುಟದಲ್ಲಿ ವೀರಶೈವ ಸಮುದಾಯಕ್ಕೆ ಸಿಂಹ ಪಾಲು ಲಭಿಸಿತ್ತು. ಸದ್ಯ ಸಮಪಾಲು ಸಂಪುಟ ರಚನೆ ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ರೀತಿ ಕ್ಯಾಬಿನೆಟ್​​ ರಚನೆ ಮಾಡುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

cm-yadiyurappa-cabinet-cast-wise-details
ಯಡಿಯೂರಪ್ಪ ಸಿಎಂ ಕ್ಯಾಬಿನೆಟ್

By

Published : Aug 3, 2021, 4:53 PM IST

ಬೆಂಗಳೂರು: ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ 32 ಸಚಿವರಿದ್ದರು. ಅದರಲ್ಲಿ 11 ಮಂದಿ ಲಿಂಗಾಯತ, 7 ಮಂದಿ ಒಕ್ಕಲಿಗ, ಆರು ಮಂದಿ ದಲಿತರು ನಾಲ್ವರು ಕುರುಬರು, ಇಬ್ಬರು ಬ್ರಾಹ್ಮಣರು, ರಜಪೂತ, ಈಡಿಗ- ಮರಾಠ ಸಮುದಾಯಕ್ಕೆ ತಲಾ ಒಂದು ಸ್ಥಾನ ಸಿಕ್ಕಿತ್ತು. ಈಗ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸಂಪುಟದಲ್ಲಿ ಯಾವ ಸಮುದಾಯಕ್ಕೆ ಎಷ್ಟು ಸ್ಥಾನ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.

ಯಡಿಯೂರಪ್ಪ ಸಂಪುಟದಲ್ಲಿ ನಿರೀಕ್ಷೆಯಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ಲಭಿಸಿತ್ತು. ಬಿಜೆಪಿಗೆ ವೀರಶೈವ ಸಮುದಾಯದ ಬೆಂಬಲ ದೊಡ್ಡ ಪ್ರಮಾಣದಲ್ಲಿದ್ದು, ಆ ಸಮುದಾಯದ ಶಾಸಕರ ಸಂಖ್ಯೆಯೂ ಹೆಚ್ಚಿರುವ ಕಾರಣ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಆ ಸಮುದಾಯಕ್ಕೆ ಅಗ್ರ ಸ್ಥಾನ ಖಚಿತವಾಗಿದೆ. ಆದರೆ, ಇತರ ಸಮುದಾಯಕ್ಕೆ ಯಾವ ರೀತಿ ಹಂಚಿಕೆಯಾಗಲಿದೆ ಎನ್ನುವ ಪ್ರಶ್ನೆ ಎದುರಾಗಿದೆ.

ವೀರಶೈವ ಲಿಂಗಾಯತ ಸಮುದಾಯ:ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಆಗಿ ಲಕ್ಷ್ಮಣ ಸವದಿ, ಸಚಿವರಾಗಿ ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ,ಜೆ.ಸಿ ಮಾಧುಸ್ವಾಮಿ, ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ, ಬಿ.ಸಿ ಪಾಟೀಲ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಸೇರಿ ಒಟ್ಟು 11 ಜನರಿದ್ದು, ಸಂಪುಟದಲ್ಲಿ ಲಿಂಗಾಯತ ಸಮುದಾಯ ಸಿಂಹಪಾಲು ಪಡೆದುಕೊಂಡಿತ್ತು.

ಒಕ್ಕಲಿಗ ಸಮುದಾಯ:ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಡಾ. ಸುಧಾಕರ್, ನಾರಾಯಣಗೌಡ, ಸಿ.ಪಿಯೋಗೇಶ್ವರ್ ಒಕ್ಕಲಿಗ ಸಮುದಾಯದಿಂದ ಸಚಿವರಾಗಿದ್ದರು. ಏಳು ಮಂದಿಗೆ ಅವಕಾಶ ಪಡೆದು ಸಂಪುಟದಲ್ಲಿ ಎರಡನೇ ಹೆಚ್ಚಿನ ಸ್ಥಾನ ಪಡೆದುಕೊಂಡಿತ್ತು.

ದಲಿತ ಸಮುದಾಯ: ವಾಲ್ಮೀಕಿ ಸಮುದಾಯದದಿಂದ ಸಚಿವರಾಗಿ ಬಿ.ಶ್ರೀರಾಮುಲು, ರಮೇಶ್ ಜಾರಕಿಹೊಳಿ ಸಂಪುಟ ಸೇರ್ಪಡೆಯಾಗಿದ್ದರು. ಡಿಸಿಎಂ ಆಗಿ ಗೋವಿಂದ ಕಾರಜೋಳ, ಸಚಿವರಾಗಿ ಎಸ್. ಅಂಗಾರ, ಅರವಿಂದ ಲಿಂಬಾವಳಿ, ಪ್ರಭು ಚವಾಣ್ ಪರಿಶಿಷ್ಟ ಜಾತಿಯಿಂದ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರಿಂದ ಸಂಪುಟದಲ್ಲಿ ದಲಿತ ಸಮುದಾಯದ ಸಂಖ್ಯೆ 6 ರಿಂದ 5 ಕ್ಕೆ ಇಳಿಕೆಯಾಗಿತ್ತು.

ಕುರುಬ ಸಮುದಾಯ:ಸಚಿವರಾಗಿ ಕೆ.ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್. ಶಂಕರ್ ಮತ್ತು ಬೈರತಿ ಬಸವರಾಜ್ ಸೇರಿ ಬಿಎಸ್​ವೈ ಸಂಪುಟದಲ್ಲಿ ನಾಲ್ವರು ಕುರುಬ ಸಮುದಾಯದ ನಾಯಕರು ಅವಕಾಶ ಪಡೆದುಕೊಂಡಿದ್ದರು.

ಬ್ರಾಹ್ಮಣ ಮತ್ತು ಇತರ:ಸಚಿವರಾಗಿ ಸುರೇಶ್ ಕುಮಾರ್ ಮತ್ತು ಶಿವರಾಮ ಹೆಬ್ಬಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ಆನಂದ ಸಿಂಗ್ ರಜಪೂತ ಸಮುದಾಯಕ್ಕೆ, ಶ್ರೀಮಂತ ಪಾಟೀಲ್ ಮರಾಠ ಸಮುದಾಯಕ್ಕೆ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಈಡಿಗ ಸಮುದಾಯಕ್ಕೆ ಸೇರಿದವರು ಅವಕಾಶ ಪಡೆದುಕೊಂಡಿದ್ದರು.

ಸದ್ಯ ಸಮತೋಲಿತ ಸಂಪುಟ ರಚನೆ ಮಾಡುವುದಾಗಿ ಹೇಳಿಕೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಯಾವ ಸಮುದಾಯಕ್ಕೆ ಎಷ್ಟು ಅವಕಾಶ ನೀಡಲಿದ್ದಾರೆ ಎನ್ನುವುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಇದ್ದು ಅದರಲ್ಲಿ ಬದಲಾವಣೆ ಆಗಬಹುದಾದರೂ ಅದರಲ್ಲಿ ಹೆಚ್ಚಿನ ವ್ಯತ್ಯಾಸ ಕಷ್ಟಸಾಧ್ಯ ಎನ್ನಲಾಗಿದೆ. ಆದರೆ, ಇತರ ಸಮುದಾಯಗಳಿಗೆ ಹಂಚಿಕೆ ಕುರಿತು ಬೊಮ್ಮಯಿ ಹಾಗೂ ಹೈಕಮಾಂಡ್ ನಡೆ ಏನು ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details