ಬೆಂಗಳೂರು:ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ. ಆರೋಗ್ಯ ಗಟ್ಟಿಯಾಗಿದ್ದರೆ ಎಲ್ಲ ಕೆಲಸಗಳನ್ನು ಮಾಡಬಹುದು. ಹೀಗಾಗಿ ಹಿರಿಯರ ಆರೋಗ್ಯಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಹಿರಿಯ ನಾಗರಿಕರ ಸೇವಾಭತ್ಯೆಯನ್ನು ಹೆಚ್ಚಿಗೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನಾಗರಿಕರ ಮಾಶಾಸನವನ್ನು ನಾನು ಮುಖ್ಯಮಂತ್ರಿಯಾದ ನಾಲ್ಕು ಗಂಟೆಯಲ್ಲಿ ಹೆಚ್ಚಿಗೆ ಮಾಡಿದ್ದೇನೆ. ಅಂಗವಿಕಲರ ಮಾಶಾಸನ ಹೆಚ್ಚಿಗೆ ಮಾಡಿದ್ದೇನೆ. ಅವರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಮಾಶಾಸನ ಹೆಚ್ಚಳ ಮಾಡಿದ್ದೇನೆ. ಆರೋಗ್ಯ ಇಲಾಖೆಯಿಂದ 60 ವರ್ಷ ಆದವರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ವರ್ಷದಲ್ಲಿ ಎರಡು ಬಾರಿ ಮಾಡಲಾಗುತ್ತಿದೆ.
ಈ ತಪಾಸಣೆಯ ವೇಳೆಯಲ್ಲಿ ಅವರಿಗೆ ಆರೋಗ್ಯ ತೊಂದರೆಯಿದ್ದರೆ, ಅದಕ್ಕೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಅಲ್ಲದೇ ರಾಜ್ಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ನೀಡುವ ಮೂಲಕ ದೃಷ್ಠಿ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮ ರೂಪಿಸಿದ್ದೇವೆ.
ಕಿವಿ ಕೇಳಿಸದ ಹಿರಿಯ ನಾಗರಿಕರಿಗೆ 500 ಕೋಟಿ ರೂ. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನೀಡುವ ಕಾರ್ಯಕ್ರಮ ಮಾಡಿದ್ದೇವೆ. ವಯಸ್ಸಾದ ಮೇಲೆ ಡಯಾಲಿಸಸ್ಗೆ ಹಿರಿಯರು ಹೋಗುತ್ತಾರೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಹೇಳಿ, 30 ಸಾವಿರ ಸೈಕಲ್ ಇತ್ತು. ಅದನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕ್ಯಾನ್ಸರ್ ಕಿಮಿಯೋಥೆರಪಿ ಎರಡು ಪಟ್ಟು ಹೆಚ್ಚಿಸಿದ್ದೇವೆ. 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದರು.