ಬೆಂಗಳೂರು:ಸಚಿವ ಚಲುವರಾಯಸ್ವಾಮಿ ವಿರುದ್ಧ ಮಂಡ್ಯ ಜಿಲ್ಲೆಯ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬರ್ಥದಲ್ಲಿ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂಬುದು ಬಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಂತಹ ಅಧಿಕಾರಿಗಳು ಯಾರೂ ಜಿಲ್ಲೆಯಲ್ಲಿ ಇಲ್ಲ ಎಂದು ಮಂಡ್ಯದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಈ ಸಂಬಂಧ ಪರಿಶೀಲನೆ ನಡೆಸಿ, ಅಗತ್ಯ ಕಂಡು ಬಂದಲ್ಲಿ ತನಿಖೆ ನಡೆಸುತ್ತೇವೆ ಎಂದು ಸಿಎಂ ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ನಾಯಕರೇ, ಇಂತಹ ನಕಲಿ ಪತ್ರವನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ನೀವೇ ಇದರ ಸೃಷ್ಟಿಕರ್ತರೋ? ಅಥವಾ ನಿಮ್ಮ "ಬ್ರದರ್ರೋ"? ಎಂದು ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.
ಚಲುವರಾಯಸ್ವಾಮಿ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ಮಂಡ್ಯ ಜಿಲ್ಲೆ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪರಿಶೀಲಿಸುವಂತೆ ಸೂಚಿಸಿರುವ ಪತ್ರದ ಪ್ರತಿ ಹರಿದಾಡಿತ್ತು.
ಕೆಟ್ಟ ಹೆಸರು ತರುವ ಪ್ರಯತ್ನ : ರಾಜ್ಯಪಾಲರ ಈ ಪತ್ರ ಅಸಲಿಯೋ, ನಕಲಿಯೋ ಎಂಬ ಅನುಮಾನವನ್ನು ಕೃಷಿ ಸಚಿವರು ವ್ಯಕ್ತಪಡಿಸಿದ್ದರು. ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಪ್ರಯತ್ನ ಮಾಡುತ್ತಲೇ ಬಂದಿದ್ದು, ಇದು ಹತಾಶ ಮನೋಭಾವವಾಗಿದೆ. ಈಗಾಗಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಲಾಗಿದೆ. ರಾಜ್ಯಪಾಲರಿಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ದೂರುಪತ್ರ ಸೃಷ್ಟಿ ಮಾಡಿ ಕಳುಹಿಸಲಾಗಿದೆ. ಉದ್ದೇಶ ಪೂರ್ವಕವಾಗಿ ಕೆಟ್ಟ ಹೆಸರು ತರುವ ಪ್ರಯತ್ನ ಮುಂದುವರೆದಿದೆ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದರು.
ನಕಲಿ ಪತ್ರ ಸೃಷ್ಟಿ ಮಾಡಿ ಸಲ್ಲಿಸಲಾಗಿದೆ: ಹಾಗಾಗಿಯೇ, ರಾಜ್ಯಪಾಲರಿಗೆ ನಕಲಿ ಪತ್ರ ಸೃಷ್ಟಿ ಮಾಡಿ ಸಲ್ಲಿಸಲಾಗಿದೆ. ಇದಕ್ಕೆ ಈಗಾಗಲೇ ಈ ಬಗ್ಗೆ ಉತ್ತರಿಸಲಾಗಿದೆ. ಆದರೂ ಇದು ಹುಸಿ ದೂರು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ. ದೂರಿನ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಮೂಲಕ ತನಿಖೆ ಮಾಡಿ ವರದಿ ಪಡೆಯುವಂತೆ ಮುಖ್ಯಮಂತ್ರಿಗಳನ್ನು ಚಲುವರಾಯಸ್ವಾಮಿ ಒತ್ತಾಯಿಸಿದ್ದರು.
ನನಗೆ ಯಾವ ಮಾಹಿತಿಯೂ ಗೊತ್ತಿಲ್ಲ:ತಮ್ಮ ಮೇಲೆ ಬಂದಿರುವ ಲಂಚ ಆರೋಪ ಕುರಿತು ಸಚಿವ ಚಲುವರಾಯಸ್ವಾಮಿ ಮಾತನಾಡಿ, ಈ ಬಗ್ಗೆ ನನಗೆ ಯಾವ ಮಾಹಿತಿಯೂ ಗೊತ್ತಿಲ್ಲ. ತನಿಖೆಗೆ ನೀಡುವಂತೆ ಮುಖ್ಯಮಂತ್ರಿಗಳ ಬಳಿ ನಾನೂ ಕೂಡ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರನ್ನು ಕರೆದು ಈ ಬಗ್ಗೆ ಸ್ವತಃ ನಾನೇ ಮಾತನಾಡಿರುವೆ. ಪ್ರಾಥಮಿಕವಾಗಿ ತನಿಖೆ ಮಾಡುವಂತೆಯೂ ಹೇಳಿದ್ದೇನೆ. ಮುಖ್ಯಮಂತ್ರಿಗಳು ಕೂಡ ತಮ್ಮಲ್ಲಿರುವ ಅಧಿಕಾರವನ್ನು ಉಪಯೋಗಿಸಿ ಯಾವುದಾರೂ ತನಿಖೆಗೊಳಿಸುವಂತೆ ಹಾಗೂ ಪ್ರಕರಣಕ್ಕೆ ಕಾರಣರಾದವವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆಯೂ ಫೋನ್ ಕರೆ ಮೂಲಕ ಮನವಿ ಮಾಡಿರುವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಎಡಿ, ಜೆಡಿ ಹಾಗೂ ಇಡಿ ಅಧಿಕಾರಿಗಳ ಬಳಿ ಈ ವಿಷವನ್ನು ಪ್ರಸ್ತಾಪ ಮಾಡಿಲ್ಲ, ಚರ್ಚೆಯನ್ನೂ ಮಾಡಿಲ್ಲ. ನನ್ನ ಹೆಸರನ್ನು ಬಳಸಿ ನೀವು ಯಾರಾದರೂ ಈ ಬಗ್ಗೆ ಮಾತನಾಡಿದ್ದೀರಾ ಎಂದು ಸಹ ಅಧಿಕಾರಿಗಳನ್ನು ಕೇಳಿದ್ದೇನೆ. ಅವರು ಸಹ ಯಾರ ಜೊತೆಗೂ ಮಾತನಾಡಿಲ್ಲ ಎಂದಿದ್ದಾರೆ. ವಿನಾಕಾರಣ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಲಂಚದ ಆರೋಪ ಕುರಿತು ರಾಜ್ಯಪಾಲರಿಗೆ ದೂರು.. ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ