ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಹಣ ವರ್ಗಾವಣೆ ಪ್ರಕ್ರಿಯೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಗ್ಯಾರಂಟಿ ಯೋಜನೆ ಈಡೇರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಕೊರತೆಯುಂಟಾಗಿದೆ. ಇದರಿಂದಾಗಿ 5 ಕೆಜಿ ಅಕ್ಕಿ ವಿತರಿಸಿ, ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ನೀಡುವುದಾಗಿ ಸರ್ಕಾರ ಘೋಷಿಸಿತ್ತು.
ಇದರಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ ನಂತೆ 5 ಕೆಜಿಗೆ 170 ರೂ ಹಣವನ್ನು ಪಡಿತರದಾರರ ಖಾತೆಗೆ ವರ್ಗಾಯಿಸಲಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರೆಲ್ಲರಿಗೂ ತಲಾ 5 ಕೆಜಿ ಅಕ್ಕಿಯ ದುಡ್ಡನ್ನು ಆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆ ಪ್ರಸಕ್ತ ತಿಂಗಳಿನಿಂದಲೇ ಆರಂಭವಾಗಿದೆ. ಅಂತೆಯೇ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಹಣ ವರ್ಗಾವಣೆಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಈ ತಿಂಗಳೊಳಗೆ ಪಡಿತರದಾರರ ಖಾತೆಗೆ ಹಣ ಜಮಾ ಆಗಲಿದೆ. ಹೆಚ್ಚುವರಿ ಅಕ್ಕಿ ಲಭ್ಯವಾದ ಬಳಿಕ ಹಣ ವರ್ಗಾವಣೆ ನಿಲ್ಲಿಸಿ, 5 ಕೆಜಿ ಅಕ್ಕಿ ವಿತರಿಸಲಿದ್ದೇವೆ ಎಂದು ಸರ್ಕಾರ ಈ ಮೊದಲು ತಿಳಿಸಿತ್ತು.
1.28 ಕೋಟಿ ಕುಟುಂಬಗಳಿಗೆ ಪ್ರಯೋಜನ :ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇರುವುದನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಶತ 99 ರಷ್ಟು ಕಾರ್ಡುಗಳು ಆಧಾರ್ನೊಂದಿಗೆ ಜೋಡಣೆಯಾಗಿವೆ. ಶೇ. 82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಕೋಟಿ ಪಡಿತರ ಚೀಟಿಗಳು, ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಖಾತೆಗಳಿಗೆ ನಗದು ವರ್ಗಾವಣೆಯನ್ನ ನೇರವಾಗಿ ಮಾಡಲಾಗುತ್ತದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಸುಮಾರು 22 ಲಕ್ಷ ಕಾರ್ಡುದಾರರಿಗೆ ಖಾತೆ ತೆರೆಯುವಂತೆ ಸರ್ಕಾರ ಮಾಹಿತಿ ನೀಡಲಿದೆ. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು, ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ. 94 ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ.5 ರಷ್ಟು ಪುರುಷರಾಗಿದ್ದಾರೆ. ಈ ಯೋಜನೆಯಡಿ ಈ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗಲಿದೆ. ಜೊತೆಗೆ ಬ್ಯಾಂಕ್ ಖಾತೆಗೆ 170 ರೂ ನೇರ ವರ್ಗಾವಣೆ ಆಗಲಿದೆ. ನಾಲ್ಕು ಜನರಿಂತ ಹೆಚ್ಚಿರುವ ಅಂತ್ಯೋದ್ಯಯ ಕುಟುಂಬಗಳಿಗೂ ಯೋಜನೆಯ ಪ್ರಯೋಜನ ಲಭ್ಯ.