ಬೆಳಗಾವಿ:ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ, ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ. ಇದರಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಇಂತಹ ಹೀನ ಕೃತ್ಯಗಳನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಿಎಂ, ಪ್ರಕರಣದ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವ ಸಂಪೂರ್ಣ ಹೊಣೆ ನಮ್ಮ ಸರ್ಕಾರದ್ದು ಎಂದು ಸಿಎಂ ಹೇಳಿದ್ದಾರೆ. ಇನ್ನೊಂದೆಡೆ ಗೃಹಸಚಿವ ಜಿ.ಪರಮೇಶ್ವರ್ ಅವರು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಮಹಿಳೆಯ ಆರೋಗ್ಯ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವರು, 24 ವರ್ಷದ ಯುವಕ ಯುವತಿಯನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾನೆ. ಹುಡುಗ ಹುಡುಗಿ ಪ್ರೀತಿಸುತ್ತಿದ್ದರು ಎನ್ನುವ ಮಾಹಿತಿ ಇದೆ. ಇದರಿಂದ ಯುವಕನ ತಾಯಿ ಮೇಲೆ ಯುವತಿ ಕುಟುಂಬದವರು ಹಲ್ಲೆ ಮಾಡಿದ್ದಾರೆ. ಸುಮಾರು 8 ರಿಂದ 10 ಜನ ಹಲ್ಲೆ ಮಾಡಿ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿದ್ದಾರೆ. ಸದ್ಯ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಬೇಕಿದೆ. ಅವರನ್ನೂ ಸಹ ಪೊಲೀಸರು ಬಂಧನ ಮಾಡುತ್ತಾರೆ ಎಂದು ಗೃಹ ಸಚಿವರು ಇದೇ ವೇಳೆ ಹೇಳಿದರು.