ಕರ್ನಾಟಕ

karnataka

ETV Bharat / state

ಸಮ ಸಮಾಜದ ಮಾರ್ಗದಲ್ಲಿ ಎದುರಾಗುವ ಅಡ್ಡಿಗಳನ್ನು ನಿವಾರಿಸಿಕೊಳ್ಳುವ ಛಾತಿ ತೋರಿಸಿದ ಸಿಎಂ ಸಿದ್ದರಾಮಯ್ಯ! - ETV Bharath Kannada news

ಪಂಚ ಯೋಜನಗಳ ಜೊತೆಯಲ್ಲಿ, ಇತರೆ ಯೋಜನೆಗಳನ್ನು ತಕ್ಕಡಿಯ್ಲಲಿಟ್ಟು ಸಿದ್ದರಾಮಯ್ಯ ಬ್ಯಾಲೆನ್ಸ್​​​​ ಮಾಡಿ ಬಜೆಟ್​ ಮಂಡಿಸಿದ್ದಾರೆ. ಸಿರಿವಂತರಿಂದ ತೆರಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಅದನ್ನು ಪಂಚ ಭಾಗ್ಯಗಳಿಗೆ ವ್ಯಯಿಸಲು ಮುಂದಾಗಿದ್ದಾರೆ.

CM Siddaramaiah Karnataka Budget
CM Siddaramaiah Karnataka Budget

By

Published : Jul 7, 2023, 7:40 PM IST

ಬೆಂಗಳೂರು: ಸಮ ಸಮಾಜದ ಕನಸಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದು 2023-24 ನೇ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಮಂಡಿಸಿದ್ದು, ಇಂತಹ ಕನಸಿಗೆ ಎದುರಾಗುವ ಸಂಕಷ್ಟಗಳಿಗೂ ಸಾಕ್ಷಿಯಾಗುವಂತಿದೆ.

ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಮತ್ತು ನಾರಾಯಣಗುರುಗಳು ಕಂಡ ಸಮ ಸಮಾಜದ ಕನಸನ್ನು ಆದರ್ಶವಾಗಿಟ್ಟುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಇದೇ ಆದರ್ಶದೊಂದಿಗೆ ಮುಂದುವರಿಯಲಿದೆ ಎಂಬುದನ್ನು ಕಳೆದ ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಹೇಳಿದ್ದರು.

ಪ್ರಸಕ್ತ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದನ್ನು ಅನುಮಾನಕ್ಕೆಡೆ ಇಲ್ಲದಂತೆ ಸಾಬೀತು ಮಾಡಿದ್ದಾರೆ. ವ್ಯವಸ್ಥೆಯ ಉತ್ಪಾದನೆಯಲ್ಲಿ ಶೇ. 60 ರಷ್ಟು ತಳಮಟ್ಟದಲ್ಲಿರುವವರು ಸೃಷ್ಟಿಸುತ್ತಾರೆ, ಆದರೆ ಶೇ. 10 ರಷ್ಟಿರುವ ಜನ ಉತ್ಪಾದನೆಯ ಬಹುಪಾಲು ಪಡೆಯುತ್ತಾರೆ ಎಂದು ಬಜೆಟ್​​ನಲ್ಲಿ ನೇರವಾಗಿ ಹೇಳಿದ್ದಾರೆ.

ಪ್ರತಿ ವರ್ಷ ಸರ್ಕಾರ ಮಂಡಿಸುವ ಬಜೆಟ್ ತನ್ನ ಆದಾಯದ ಮೂಲಗಳು ಯಾವುದು? ಅವುಗಳಿಂದ ಎಷ್ಟೆಷ್ಟು ಆದಾಯ ಬರುತ್ತದೆ? ಮತ್ತು ಇದನ್ನು ಯಾವ್ಯಾವ ಬಾಬ್ತುಗಳಿಗೆ ವೆಚ್ಚ ಮಾಡುತ್ತೇವೆ ಎಂದು ಹೇಳುವುದು ಸಂಪ್ರದಾಯ. ಆದರೆ ಇದೇ ಮೊದಲ ಬಾರಿ ರಾಜ್ಯ ಸರ್ಕಾರದ ಬಜೆಟ್ ತನ್ನ ಗುರಿಯನ್ನು ಸ್ಪಷ್ಟವಾಗಿ ಹೇಳಿರುವುದಲ್ಲದೆ, ಈ ಗುರಿಗೆ ಎದುರಾಗಿರುವ ಅಡ್ಡಿಗಳೇನು? ಮತ್ತು ಇದನ್ನು ದಾಟಿಕೊಂಡು ಮುನ್ನಡೆಯಲು ಏನು ಮಾಡಬೇಕು? ಎಂದು ಹೇಳಿದೆ.ಆ ನೆಲೆಯಲ್ಲಿ ಸಿದ್ದರಾಮಯ್ಯ ಅವರ ಈ ಬಜೆಟ್ ಐತಿಹಾಸಿಕ ಬಜೆಟ್ ಎನ್ನಲೇಬೇಕು.

ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಮುಖ್ಯಮಂತ್ರಿಗಳು, ಇಂದು ಮಂಡಿಸಿದ ಬಜೆಟ್​ನಲ್ಲಿ ಅವುಗಳಿಗೆ ಆಗುವ ವೆಚ್ಚದ ಬಗ್ಗೆ ಹೇಗೆ ಹೇಳಿದ್ದಾರೆ. ಅದೇ ರೀತಿ ಈ ಯೋಜನೆಗಳಿಗೆ ಎಲ್ಲಿಂದ ಹಣ ಹೊಂದಿಸುತ್ತೇವೆ ಎಂದೂ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕದಿಂದ ಬರುವ ತೆರಿಗೆ ಮತ್ತು ಹೊಸ ಮೋಟಾರು ವಾಹನಗಳಿಂದ ಬರುವ ತೆರಿಗೆಯನ್ನು ಹೆಚ್ಚಿಸಿರುವ ಸಿದ್ದರಾಮಯ್ಯ, ಬಡವರ ಮೇಲೆ ತೆರಿಗೆ ಹೇರದೆ, ಸಮ ಸಮಾಜದ ತಮ್ಮ ಕನಸಿನ ದಾರಿಯಲ್ಲಿ ಮುಂದುವರಿದಿದ್ದಾರೆ.

ರಕ್ತ ರಹಿತ ಸರ್ಜರಿ: ಅವರು ಘೋಷಿಸಿದ ಐದು ಗ್ಯಾರಂಟಿಗಳಿಗೆ ಐವತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಹಣ ಬೇಕು ಎಂಬುದು ನಿಕ್ಕಿಯಾಗಿದ್ದರಿಂದ, ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 3.09 ಕೋಟಿ ಗಾತ್ರದ ಬಜೆಟ್ ಅನ್ನು ನೆಚ್ಚಿಕೊಳ್ಳುವುದು ಅವರಿಗೆ ಕಷ್ಟ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಇದಕ್ಕಾಗಿ ಈಗಾಗಲೇ ಮಂಡನೆಯಾಗಿರುವ 2023-24 ನೇ ಸಾಲಿನ ಬಜೆಟ್ ನ್ನು ಪರಿಷ್ಕರಿಸಿ ಇದರ ಗಾತ್ರವನ್ನು 3.5 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವಾಗಲಿದೆ ಎಂಬ ಭಾವನೆ ಆರ್ಥಿಕ ತಜ್ಞರಲ್ಲೂ ಇತ್ತು.

ಆದರೆ ಇಂತಹ ಲೆಕ್ಕಾಚಾರಗಳನ್ನು ಹುಸಿಗೊಳಿಸಿದ ಅವರು, ಈ ಹಿಂದೆ ಮಂಡನೆಯಾದ ಬಜೆಟ್​​ನಲ್ಲಿ ಯಾವ ಪ್ರಮಾಣದ ಆದಾಯ ನಿರೀಕ್ಷಿಸಲಾಗಿತ್ತೋ? ಅದಕ್ಕಿಂತ ಹದಿನೆಂಟು ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಹೆಚ್ಚುವರಿಯಾಗಿ ಪಡೆಯಲು ಬಯಸಿದ್ದಾರೆ. ಅದರ ಅರ್ಥ ಸರ್ಕಾರದ ಮಟ್ಟದಲ್ಲಿ ಸೋರಿಕೆಯನ್ನು ತಡೆಗಟ್ಟಿ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಆಡಳಿತ ಯಂತ್ರಕ್ಕೆ ರಕ್ತ ರಹಿತ ಸರ್ಜರಿ ಮಾಡಲು ಅವರು ಮುಂದಾಗಿರುವುದು ಸ್ಪಷ್ಟವಾಗಿದೆ.

ಇದೇ ಕಾಲಕ್ಕೆ ಅವರು ಕೇಂದ್ರ ಮತ್ತು ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರಗಳ ಆರ್ಥಿಕ ಅಶಿಸ್ತು ಮತ್ತು ವೈಫಲ್ಯಗಳ ಬಗ್ಗೆ ಪದೇ ಪದೇ ಕಟುವಾಗಿ ಟೀಕಿಸಿರುವುದು ಪರಿಸ್ಥಿತಿ ಎಷ್ಟು ಕಷ್ಟಕರವಾಗಿದೆ? ಮತ್ತು ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸರ್ಕಾರ ಎಷ್ಟು ಕಷ್ಟಪಡಬೇಕಿದೆ? ಎಂಬುದನ್ನು ಹೇಳುತ್ತಾರೆ. ಅವರ ಈ ಮಾತು ಅವರ ಸಮ ಸಮಾಜದ ಕನಸಿನೊಂದಿಗೆ ನಡೆಯುವುದು ಎಷ್ಟು ಕಷ್ಟ ಎಂಬುದಕ್ಕೆ ಸಂಕೇತವೂ ಆಗುವುದು ವಿಶೇಷ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿರುವುದರಿಂದ ಸಹಜವಾಗಿಯೇ ಜನಜೀವನ ದುಬಾರಿಯಾಗಿದ್ದರೆ, ಈ ಹಿಂದಿದ್ದ ಬಿಜೆಪಿ ಸರ್ಕಾರ ತನ್ನ ಬಜೆಟ್​ನಲ್ಲಿ ಜಲಸಂಪನ್ಮೂಲ, ನಗರಾಭಿವೃದ್ಧಿ ಮತ್ತು ಇತರ ಇಲಾಖೆಗಳ ವ್ಯಾಪ್ತಿಯಲ್ಲಿ ಕಾಮಗಾರಿಗಳಿಗೆ ಎಂದು 33,616 ಕೋಟಿ ರೂಪಾಯಿ ಮೀಸಲಿರಿಸಿದ್ದರೂ, 94,933 ಕೋಟಿ ರೂಗಳ ಕಾಮಗಾರಿಗೆ ಅನುಮೋದನೆ ನೀಡಿರುವ ವಿಪರ್ಯಾಸದ ಬಗ್ಗೆ ಸಿದ್ದರಾಮಯ್ಯ ವಿವರಿಸುತ್ತಾರೆ.

ಕೇಂದ್ರದಿಂದ ಅನುದಾನದ ಅನ್ಯಾಯ: ಅರವತ್ತು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಅದು ಮಂಜೂರಾತಿ ನೀಡಿರುವುದರಿಂದ, ಹೆಚ್ಚುವರಿ ಹಣವನ್ನು ಬಜೆಟ್​​​ನಲ್ಲಿ ಹೊಂದಿಸುವುದು ಸಿದ್ದರಾಮಯ್ಯ ಅವರ ಸರ್ಕಾರದ ಜವಾಬ್ದಾರಿ. ಇದು ಅಸ್ತಿತ್ವಕ್ಕೆ ಬಂದ ಅವರ ಸರ್ಕಾರಕ್ಕೆ ನಿಶ್ಚಿತವಾಗಿಯೂ ಹೊರೆ. ಈ ಮಧ್ಯೆ ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಕೇಂದ್ರಕ್ಕೆ ತೆರಿಗೆ ಸಲ್ಲಿಸುವ ರಾಜ್ಯವಾಗಿದ್ದರೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಮರಳಿ ಬರುತ್ತಿರುವ ಹಣದ ಪಾಲು ಕಡಿಮೆ. ಜಿ.ಎಸ್.ಟಿ.ಇರಬಹುದು ಅಥವಾ ಬೇರೆ ಬೇರೆ ಯೋಜನೆಗಳಿಗೆ ಕೇಂದ್ರದಿಂದ ಬರುತ್ತಿದ್ದ ಅನುದಾನವೇ ಇರಬಹುದು. ಇದರಲ್ಲೆಲ್ಲ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ನಮ್ಮದು ಡಬಲ್ ಎಂಜಿನ್ ಸರ್ಕಾರ ಎನ್ನುತ್ತಿದ್ದ ಬಿಜೆಪಿ ನಾಯಕರು, ಕೇಂದ್ರದ ಈ ತಾರತಮ್ಯ ಧೋರಣೆಯ ವಿರುದ್ಧ ಧ್ವನಿ ಎತ್ತದ ಪರಿಣಾಮವಾಗಿ ಕರ್ನಾಟಕ ನಿಜಕ್ಕೂ ಸಂಕಷ್ಟವನ್ನುಎದುರಿಸುತ್ತಿದೆ.

ಸಮತೋಲನಕ್ಕೆ ಸಿಎಂ ತಕ್ಕಡಿ:ಇಂತಹ ಸಂಕಷ್ಟಗಳನ್ನು ಎದುರಿಸುವುದು ಎಂದರೆ ಹಣಕಾಸಿನ ಕೊರತೆಯನ್ನು ಎದುರಿಸುವುದು ಎಂದೇ ಅರ್ಥ. ಇಂತಹ ಕೊರತೆಯನ್ನು ಎದುರಿಸುತ್ತಲೇ ಸಮಾಜದ ಬಹುಪಾಲು ಜನರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಮತ್ತು ಅದೇ ಕಾಲಕ್ಕೆ ರಾಜ್ಯದ ಅಭಿವೃದ್ಧಿ ಸಾಧಿಸುವ ಅನಿವಾರ್ಯತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು. ಇವತ್ತು ಸಮ ಸಮಾಜದ ಕನಸು ಕಾಣುವ ಮುಖ್ಯಮಂತ್ರಿಗಳು ಸಹಜವಾಗಿಯೇ ಬಜೆಟ್​ನ ಎರಡು ಮುಖಗಳ ಪೈಕಿ ಒಂದು ಮುಖಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಅಂದ ಹಾಗೆ ಬಜೆಟ್​​​ನ ಎರಡು ಮುಖಗಳ ಪೈಕಿ ಒಂದು ಮುಖಕ್ಕೆ ಯೋಜನಾ ವೆಚ್ಚ ಎಂದು ಹೆಸರು. ಮತ್ತೊಂದು ಮುಖಕ್ಕೆ ಯೋಜನೇತರ ವೆಚ್ಚ ಎಂದು ಹೆಸರು.

ಯೋಜನಾ ವೆಚ್ಚ ಎಂದರೆ ರಾಜ್ಯದ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವುದು ಎಂದರ್ಥ. ನೀರಾವರಿ, ರಸ್ತೆ, ಕಟ್ಟಡ, ಸೇತುವೆ ಸೇರಿದಂತೆ ಲಾಭ ತಂದು ಕೊಡುವ ಕೆಲಸಗಳು ಯೋಜನಾ ವೆಚ್ಚ ಅನ್ನಿಸಿಕೊಳ್ಳುತ್ತವೆ. ಅದೇ ರೀತಿ ಸರ್ಕಾರಿ ನೌಕರರ ವೇತನ, ಪಿಂಚಣೆ, ಸಾಮಾಜಿಕ ಭದ್ರತೆಯ ಯೋಜನೆಗಳು, ಆರೋಗ್ಯಕ್ಕಾಗಿ ಮಾಡುವ ವೆಚ್ಚಗಳೆಲ್ಲ ಯೋಜನೇತರ ಬಾಬ್ತಿಗೆ ಸೇರುತ್ತವೆ. ಹೀಗಾಗಿ ಸರ್ಕಾರ ಈಗ ಜಾರಿ ಮಾಡಿರುವ ಶಕ್ತಿಯಂತಹ ಯೋಜನೆ, ಜಾರಿಯಾಗಲಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವನಿಧಿಯಂತಹ ಕಾರ್ಯಕ್ರಮಗಳು ಯೋಜನೇತರ ವೆಚ್ಚದ ಬಾಬ್ತಿಗೆ ಸೇರುತ್ತವೆ.

ಅರ್ಥಾತ್, ಇಂತಹ ಕಾರ್ಯಕ್ರಮಗಳು ಸರ್ಕಾರಕ್ಕೆ ಮರಳಿ ಲಾಭ ತಂದುಕೊಡುವುದಿಲ್ಲ. ಆದರೆ ಸಮಸಮಾಜದ ಕನಸು ಕಾಣುವವರು, ತಳವರ್ಗವನ್ನು ಮೇಲೆತ್ತಲು ಬಯಸುವವರು ಯೋಜನೇತರ ವೆಚ್ಚದ ಕಡೆ ಗಮನ ಹರಿಸುವುದು ಅನಿವಾರ್ಯವಾಗುತ್ತದೆ. ಹಾಗಂತ ಅಭಿವೃದ್ಧಿಯನ್ನೇ ಮರೆತು ಯೋಜನಾ ವೆಚ್ಚವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲವಲ್ಲ? ಆ ದೃಷ್ಟಿಯಿಂದ ಸಿದ್ದರಾಮಯ್ಯ ತಮ್ಮ ಬಜೆಟ್​ನ ಯೋಜನೆ ಮತ್ತು ಯೋಜನೇತರ ವೆಚ್ಚಗಳನ್ನು ಸರಿಹೊಂದಿಸಲು ಶ್ರಮಿಸಿದ್ದಾರೆ.

ಈ ಸಲದ ಬಜೆಟ್​​ನಲ್ಲಿ ಅವರು ಶಿಕ್ಷಣಕ್ಕೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಿರುವ ಆದ್ಯತೆಯನ್ನು ಗಮನಿಸುವಂತೆಯೇ ಇಂಧನ, ನೀರಾವರಿಯಂತಹ ವಿಭಾಗಗಳನ್ನು ನೋಡಿದರೂ ಸಾಕು, ಅವರು ಯೋಜನೆ ಮತ್ತು ಯೋಜನೇತರ ಬಾಬ್ತುಗಳ ನಡುವೆ ಹೊಂದಾಣಿಕೆ ಸಾಧಿಸಲು ಶ್ರಮಿಸಿರುವುದು ಎದ್ದು ಕಾಣುತ್ತದೆ. ಈ ಮಧ್ಯೆ ಗಮನಿಸಬೇಕಿರುವ ಮತ್ತೊಂದು ಅಂಶವೆಂದರೆ ವಾಣಿಜ್ಯ ತೆರಿಗೆಯ ಸಂಗ್ರಹದಲ್ಲಿ ಅವರು ಇಟ್ಟುಕೊಂಡಿರುವ ಗುರಿ. ಇದೇ ಮೊದಲ ಬಾರಿ ವಾಣಿಜ್ಯ ತೆರಿಗೆ ಬಾಬ್ತಿನಿಂದ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಆದಾಯವನ್ನು ಅವರು ನಿರೀಕ್ಷಿಸಿದ್ದಾರೆ.

ಇದರರ್ಥ, ಅವರು ಬಡವರ ಮೇಲೆ ಹೊಸ ತೆರಿಗೆ ಹೇರಿದ್ದಾರೆ ಎಂದಲ್ಲ, ಬದಲಿಗೆ ವಾಣಿಜ್ಯ ತೆರಿಗೆಯ ಬಾಬ್ತಿನಲ್ಲಿ ಆಗುತ್ತಿದ್ದ ಸೋರಿಕೆಯನ್ನು ತಡೆಗಟ್ಟುವ ವಿಷಯದಲ್ಲಿ ವಜ್ರದಂತೆ ಕಠೋರವಾಗಿದ್ದಾರೆ. ಸಮ ಸಮಾಜದ ಕನಸು ಕಾಣುವವರು ಆ ದಾರಿಯಲ್ಲಿ ನಡೆಯುವಾಗ, ತಮಗೆ ಎದುರಾಗಬಹುದಾದ ಅಡ್ಡಿಗಳನ್ನು ಅಂದಾಜು ಮಾಡಿಕೊಂಡಿರಲೇಬೇಕು. ಇಲ್ಲದಿದ್ದರೆ ನಡೆಯುವ ದಾರಿಯಲ್ಲಿ ಅವರು ಎಡವಿ ಬೀಳುವುದು ಗ್ಯಾರಂಟಿ. ಆದರೆ ಸಿದ್ಧರಾಮಯ್ಯ ಅವರಿಗೆ ನಡಿಗೆಯೂ ಗೊತ್ತು. ನಡಿಗೆಗೆ ಎದುರಾಗಬಹುದಾದ ಅಡ್ಡಿಗಳೂ ಗೊತ್ತು.

ಹೀಗಾಗಿ ಅವರು ಪ್ರಸಕ್ತ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಎಚ್ಚರದಿಂದ ಮಂಡಿಸಿದ್ದಾರೆ. ತಾವು ಬಯಸಿದ ಸಮಸಮಾಜದ ಮಾರ್ಗದಲ್ಲಿ ಎದುರಾಗುವ ಅಡ್ಡಿಗಳನ್ನು ನಿವಾರಿಸಿಕೊಳ್ಳುವ ಛಾತಿ ತೋರಿಸಿದ್ದಾರೆ.

ಇದನ್ನೂ ಓದಿ:ಬಜೆಟ್ ಅಧಿವೇಶನದಲ್ಲಿ‌ ಶಾಸಕಿಯ ಸ್ಥಾನದಲ್ಲಿ ಕುಳಿತ ಅನಾಮಿಕ : ಪೊಲೀಸ್ ಭದ್ರತಾ ವೈಫಲ್ಯವೇ..? ವರದಿ‌ ಕೇಳಿದ ಹೋಮ್ ಮಿನಿಸ್ಟರ್

ABOUT THE AUTHOR

...view details