ಬೆಂಗಳೂರು:ಹಿಂದಿನ ಸರ್ಕಾರದಲ್ಲಾದ ಲೋಪಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮನುಷ್ಯರ ಬುದ್ಧಿಮತ್ತೆಯು ಉದ್ಯೋಗವನ್ನು ಕಿತ್ತುಕೊಳ್ಳದಂತೆ ಕಾರ್ಯಯೋಜನೆ ರೂಪಿಸಬೇಕಿದೆ. ಸಮಾಜದಲ್ಲಿ ನಕಾರಾತ್ಮಕ ಧೋರಣೆ ಹೆಚ್ಚಾಗುತ್ತಿದೆ. ಇದೆಲ್ಲವನನ್ನೂ ನಾವು ಮೆಟ್ಟಿ ನಿಲ್ಲಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಗರದ ಮಾಣಿಕ್ ಶಾ ಪರೇಡ್ನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಅನ್ನವನ್ನು ಕೊಡು, ಉಡಲು ಬಟ್ಟೆಯನ್ನು ಕೊಡು, ಮನೆಯನ್ನು ಕಟ್ಟಿಕೊಡು ಇರಲು ಎಂಬ ಮಾತಿನಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಾಜಿ ಪ್ರಧಾನಿ ನವಾಹರ್ಲಾಲ್ ನೆಹರೂ ಅವರ ಆಶಯವನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಎಲ್ಲರ ಅಭಿವೃದ್ಧಿಯನ್ನು ಬಯಸುವುದೇ ರಾಜ್ಯ ಸರ್ಕಾರ ನೀತಿಯಾಗಿದೆ. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದಾಗಿದೆ. ಅನ್ನಬ್ರಹ್ಮ ರೈತರ ಅಭಿವೃದ್ಧಿಯಾಗಬೇಕಿದೆ. ಸುಭದ್ರ ಕರ್ನಾಟಕ, ಭಾರತವನ್ನು ನಿರ್ಮಿಸೋಣ. ನಮ್ಮ ಶಕ್ತಿಯಾದ ವೈವಿಧ್ಯತೆ ಕಾಪಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮತೀಯ ಗೂಂಡಾಗಿರಿ ವಿರುದ್ಧ ಸಹಿಸಲ್ಲ:ನಾಡಿನ ನೆಲ, ಜಲ, ಭಾಷೆ ಹಾಗೂ ಅಸ್ಮಿತೆಯನ್ನು ಕಾಪಾಡಲು ನಮ್ಮ ಸರ್ಕಾರ ಕಟಿಬದ್ಧವಾಗಿದೆ. ಮತೀಯ ಗೂಂಡಾಗಿರಿ ಅಥವಾ ನೈತಿಕ ಪೊಲೀಸ್ ಗಿರಿಯ ದಬ್ಬಾಳಿಕೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿ ಸ್ಪಷ್ಟವಾದ ಸಂದೇಶ ರವಾನಿಸಿದರು.
ಮಾನವತಾವಾದಿಗಳಾದ ಬುದ್ಧ, ಗಾಂಧೀಜಿ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರು ಪ್ರತಿಪಾದಿಸಿದ ಮಾನವೀಯತೆಯ ತಳಹದಿಯ ಅಭಿವೃದ್ಧಿಯ ಮಾದರಿಯಾದ ಕರ್ನಾಟಕ ಮಾದರಿ ಅಭಿವೃದ್ಧಿಯನ್ನು ನಾವು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಕರ್ನಾಟಕದ ಜನರು ಒಡೆದಾಳುವವರ ನೀತಿ ವಿರುದ್ಧ ನಿಂತಿದ್ದಾರೆ. ಇವನಾರವನೆನ್ನದೆ ಒಳಗೊಂಡು ಆಡಳಿತ ಮಾಡುವ ನಮ್ಮನ್ನು ಜನರು ಆರಿಸಿದ್ದಾರೆ. ಈ ಸ್ವಾತಂತ್ರ್ಯ ದಿನದಂದು ನಾನು ನೀಡುವ ಭರವಸೆಯಲ್ಲಿ ಬಹಳ ಮುಖ್ಯವಾದುದು. ಈ ಒಳಗೊಂಡು ಬಾಳುವ, ಎಲ್ಲರ ಅಭಿವೃದ್ಧಿಯನ್ನು ಬಯಸುವ ಕರ್ನಾಟಕದ ಹೊಸ ಮಾದರಿಗಳನ್ನು ಪ್ರಬಲಗೊಳಿಸುವ ಭರವಸೆಯೇ ಆಗಿದೆ ಎಂದರು.
ದೇಶದ ಸಂಪತ್ತು ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಶಾಹಿಗಳ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೇ?. ಇದನ್ನೆಲ್ಲ ಮನಗಂಡು ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೆ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೇ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಜಾತಿ, ಭೇದವಿಲ್ಲದೆ ಗ್ಯಾರಂಟಿ ಯೋಜನೆ ಜಾರಿ:ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ‘ಶಕ್ತಿʼ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಇದರ ಅನುಕೂಲವಾಗುತ್ತಿದೆ.
200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1 ರ ಬಿಲ್‍ನಿಂದ ಗ್ರಾಹಕರಿಗೆ ಸೌಲಭ್ಯ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಹಸಿವು ಮುಕ್ತ ಕರ್ನಾಟಕದ ಕಲ್ಪನೆಯನ್ನು ಸಾಕಾರಗೊಳಿಸಲು ಜಾರಿಗೊಳಿಸಿರುವ ಮತ್ತೊಂದು ಗ್ಯಾರಂಟಿ ಯೋಜನೆ ‘ಅನ್ನ ಭಾಗ್ಯʼ. ಫಲಾನುಭವಿಗೆ ಕೇಂದ್ರ ನೀಡುವ 5 ಕೆಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆಜಿ ಆಹಾರ ಧಾನ್ಯ ನೀಡಲಾಗುವುದು ಎಂದರು.
‘ಗೃಹಲಕ್ಷ್ಮಿ’ ಯೋಜನೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ದಿನಾಂಕ ಆಗಸ್ಟ್ 27 ರಂದು ಮಹಿಳೆಯರ ಖಾತೆಗೆ ಮಾಸಿಕ 2000 ರೂ.ಗಳನ್ನು ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಈಗಾಗಲೆ 1.08 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ ಎಂದಿದ್ದಾರೆ. ಪದವಿ, ಡಿಪ್ಲೊಮಾ ಪಡೆದ ಯುವಕರಿಗೆ ಬೆಂಬಲ ನೀಡುವ ಯುವನಿಧಿ ಯೋಜನೆಯನ್ನು 2022-23ರ ಶೈಕ್ಷಣಿಕ ವರ್ಷ ಅಂತ್ಯಗೊಂಡ 6 ತಿಂಗಳ ನಂತರ ಜಾರಿಯಾಗಲಿದೆ ಎಂದು ಹೇಳಿದರು.
ಕೆಲ ಯೋಜನೆಗಳ ಮರುಜಾರಿ:ಕೆಲವು ವರ್ಷಗಳಿಂದ ಸ್ಥಗಿತಗೊಂಡಿರುವ ಕೃಷಿ ಭಾಗ್ಯ, ಅನುಗ್ರಹ ಯೋಜನೆ, ವಿದ್ಯಾಸಿರಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮರುಜಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇದೇ ವೇಳೆ ಸಿಎಂ ತಿಳಿಸಿದರು.
ಅವಕಾಶ ವಂಚಿತ ಸಮುದಾಯಗಳ ಹಿತರಕ್ಷಣೆ ಹಾಗೂ ಅವರ ಅಭ್ಯುದಯ ನಮ್ಮ ಕಾಳಜಿಯಾಗಿದೆ. ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು, ರೈತರು ಹಾಗೂ ಇತರ ಶೋಷಿತ ವರ್ಗದವರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ:77ನೇ ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬಿಗಿ ಪೊಲೀಸ್ ಭದ್ರತೆ