ಬೆಂಗಳೂರು :ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಕಡು ಬಡತನದಲ್ಲಿ ಜೀವನ ಮಾಡುತ್ತಿರುವವರಿಗೆ ಬಡ ಜನರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ ನಿರುದ್ಯೋಗಿಗಳಿಗೆ, ದಿವ್ಯಾಂಗರಿಗೆ ಕುಟುಂಬದ ದುಡಿಯುವ ವ್ಯಕ್ತಿಯು ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದಲ್ಲಿ ನಿರ್ಗತಿಕರಾಗುವ ಕುಟುಂಬದವರಿಗೆ, ಆಕಸ್ಮಿಕ ದರ್ಘಟನೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಪ್ರದತ್ತವಾಗಿರುವ ವಿವೇಚನಾನುಸಾರ ಘೋಷಿಸುವ ಪರಿಹಾರದ ಮೊತ್ತವನ್ನು ನೊಂದ ಕುಟುಂಬದವರಿಗೆ ವಿತರಿಸಲಾಗುತ್ತದೆ.
ಸಿಎಂ ಪರಿಹಾರ ನಿಧಿಯಡಿ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳೆಂದು ಗುರುತಿಸಲು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಅರ್ಜಿದಾರರು ಚಿಕಿತ್ಸೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಹಾಗೂ ಇತರೆ ಯೋಜನೆಗಳಲ್ಲಿ ಸೌಲಭ್ಯವನ್ನು ಪಡೆದು ಮತ್ತೊಮ್ಮೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲು ಅತಿಯಾಸೆಯಿಂದ ಸೌಲಭ್ಯ ಪಡೆಯಲು ಯತ್ನಿಸುವ ಪ್ರಕರಣಗಳನ್ನು ತಡೆಗಟ್ಟಲು ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂತಿಮ ಮೂಲ ಬಿಲ್ಲುಗಳನ್ನು ಹಾಗೂ ಬಿಡುಗಡೆ ಸಾರಾಂಶ ಪತ್ರವನ್ನು ಪಡೆಯಲಾಗುತ್ತದೆ. ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಪಡೆಯಲಾಗುತ್ತದೆ.
ಇನ್ನಿತರೆ ದುರ್ಘಟನೆಗಳಿಗೆ ಸಂಬಂಧಿಸಿದಂತೆ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದ ಬಡ ಜನರ ಮಾರಣಾಂತಿಕ ಕಾಯಿಲೆಯ ಚಿಕಿತ್ಸಾ ವೆಚ್ಚಕ್ಕೆ ಪರಿಹಾರ ಒದಗಿಸಲು ನಿಯಮವನ್ನು ರೂಪಿಸಲಾಗಿದೆ. ಅರ್ಜಿದಾರರ ಆರ್ಥಿಕ ಸ್ಥಿತಿಯ ಬಗ್ಗೆ ಹಾಗೂ ಅವರು ಅನುಭವಿಸುತ್ತಿರುವ ಯಾತನೆಯ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ನಿಗದಿತ ದಾಖಲೆಗಳೊಂದಿಗೆ ವರದಿ ಸಲ್ಲಿಸಿದಲ್ಲಿ ಮುಖ್ಯಮಂತ್ರಿಗಳಿಗೆ ಕಡತ ಸಲ್ಲಿಸಿ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಸಾಮಾನ್ಯ ಜನರು ಅರ್ಜಿ ಸಲ್ಲಿಸಿ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಹಾಗೂ ಅರ್ಹ ಅರ್ಜಿದಾರರಿಗೆ ಶೀಘ್ರಗತಿಯಲ್ಲಿ ಪರಿಹಾರವನ್ನು ಒದಗಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ವಿದ್ಯುನ್ಮಾನದ ತಂತ್ರಾಂಶದ ಮೂಲಕ ನಿರ್ವಹಿಸಲಾಗುತ್ತಿದೆ. ಅರ್ಜಿಯ ವಿಲೇವಾರಿಯ ಹಂತಗಳ ಮಾಹಿತಿಯನ್ನು ಅರ್ಜಿದಾರರ ಮೊಬೈಲ್ ಸಂಖ್ಯೆಗೆ ರವಾನಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಯಾವ ಕಾಯಿಲೆಗಳ ಚಿಕಿತ್ಸೆಗೆ ಪರಿಹಾರ :ಹೃದಯ ಸಂಬಂಧ ಕಾಯಿಲೆ, ಕ್ಯಾನ್ಸರ್, ಮೂತ್ರಕೋಶ, ಮಿದುಳು, ಯಕೃತ್ತು ಮೊದಲಾದ ಗಂಭೀರ ಆರೋಗ್ಯ ಸಮಸ್ಯೆ ಮತ್ತು ಮಾರಣಾಂತಿಕ ಕಾಯಿಲೆಯ ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರೆ ಸಿಎಂ ನಿಧಿಯ ಪರಿಹಾರಕ್ಕೆ ಅರ್ಹರು. ಮೂತ್ರಪಿಂಡ ಸಮಸ್ಯೆ ಹಾಗೂ ಕ್ಯಾನ್ಸರ್‌ನಿಂದ ಬಳಲುವ ಹೊರ ರೋಗಿಗಳು ಪರಿಹಾರಕ್ಕೆ ಅರ್ಹರು.
ಅರ್ಜಿದಾರರು ಯಾವುದಾದರೂ ವಿಮೆ ಯೋಜನೆ, ವಾಜಪೇಯಿ ಆರೋಗ್ಯಶ್ರೀ, ಯಶಸ್ವಿನಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮತ್ತಿತರ ಯೋಜನೆಯಡಿ ಫಲಾನುಭವಿಗಳಾಗಿದ್ದರೆ ಪರಿಹಾರಕ್ಕೆ ಅರ್ಹರಲ್ಲ. ಚಿಕಿತ್ಸೆ ಪಡೆದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು. ಒಂದು ವರ್ಷದೊಳಗಿನ ಬಿಲ್ಲುಗಳಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಚಿಕಿತ್ಸೆಯ ಬಿಲ್‌ಗಳು 10 ಸಾವಿರದವರೆಗೆ ಇದ್ದರೆ ಕನಿಷ್ಠ 5 ಸಾವಿರ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಬಿಲ್ಲಿನ ಮೊತ್ತ 5 ಸಾವಿರಕ್ಕಿಂತ ಕಡಿಮೆ ಇದ್ದರೆ ಪೂರ್ಣ ಮೊತ್ತವನ್ನು ಪರಿಹಾರವಾಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ? :ವಿಧಾನಸಭೆ, ವಿಧಾನ ಪರಿಷತ್ ಸೇರಿದಂತೆ ಲೋಕಸಭೆ, ರಾಜ್ಯಸಭಾ ಸದಸ್ಯರಿಗೆ ಪ್ರತ್ಯೇಕ ಲಾಗಿನ್ ಒದಗಿಸಲಾಗಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ನೇರವಾಗಿ ಶಾಸಕರ ಕಚೇರಿಗೆ ಅಥವಾ ಸಂಸದರ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಸೇವಾ ಸಿಂಧು ಕೇಂದ್ರಗಳಲ್ಲಿ ಹಾಗೂ ಯಾವುದಾದರೂ ಅಂತರ್ಜಾಲ ಕೇಂದ್ರಗಳಲ್ಲಿ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಗಳ ಸ್ಥಿತಿಗತಿಯನ್ನು ಆನ್‌ಲೈನ್ ಮೂಲಕವೇ ಪರಿಶೀಲಿಸಿಕೊಳ್ಳ ಬಹುದಾಗಿದೆ. ಪರಿಹಾರ ಧನ ಬಿಡುಗಡೆ ವಿವರ ಇತ್ಯಾದಿಗಳನ್ನು ಮೊಬೈಲ್ ಸಂದೇಶದ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಪರಿಹಾರ ಕೋರಿ ಅರ್ಜಿ ಸಲ್ಲಿಸಲು (ಚಿಕಿತ್ಸೆಯ ನಂತರ) ಅಗತ್ಯವಿರುವ ದಾಖಲೆಗಳ ಪಟ್ಟಿ
ಅರ್ಹತೆ: ಬಡ ಕುಟುಂಬ ವರ್ಗದವರು (ಬಿ.ಪಿ.ಲ್)
ಪೂರಕ ದಾಖಲಾತಿಗಳು:
1) ಅರ್ಜಿದಾರರ ಭಾವ ಚಿತ್ರ
2) ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಅಂತಿಮ ಮೂಲ ಬಿಲ್ಲುಗಳು
3) ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರ
4) ಬಿ.ಪಿ.ಎಲ್ ಪಡಿತರ ಚೀಟಿ
5) ಆಧಾರ್ ಗುರುತಿನ ಚೀಟಿ
6)ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪ್ರತಿ
7) ವಿಳಾಸ ದೃಢೀಕರಣ ದಾಖಲೆಗಳು
8) ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆ
ಅರ್ಜಿ ಶುಲ್ಕ : NA
ಸೇವಾ ಶುಲ್ಕ (ಆನ್ ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ): Rs 35
ವಿತರಣಾ ಸಮಯ (ದಿನಗಳು): NA
ಅನ್ವಯಿಸುವ ವಿಧಾನ :ಅರ್ಜಿದಾರರು ಅರ್ಜಿಯನ್ನು ಸಲ್ಲಿಸುತ್ತಾರೆ. ನಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ವಿಷಯ ನಿರ್ವಾಹಕರು ಅವರಿಂದ ಅಪ್ಲಿಕೇಶನ್ ಪರಿಶೀಲನೆ (ಆಸ್ಪತ್ರೆಯ ವಿಚಾರಣೆ) 3) ಶಾಖಾಧಿಕಾರಿಗಳು/ವಿಶೇಷಾಧಿಕಾರಿಗಳು/ವಿಶೇಷ ಕರ್ತವ್ಯಾಧಿಕಾರಿಗಳಿಂದ ಪರಿಶೀಲನೆಯಾಗುತ್ತದೆ.
ಅಧೀನ ಕಾರ್ಯದರ್ಶಿ/ವಿಶೇಷ ಕರ್ತವ್ಯಾಧಿಕಾರಿಗಳಿಂದ ಪರಿಶೀಲನೆಯಾಗುತ್ತದೆ. ಜಂಟಿ ಕಾರ್ಯದರ್ಶಿಯಿಂದ ಪರಿಶೀಲನೆಯಾಗುತ್ತದೆ. ಲೆಕ್ಕಾಧಿಕಾರಿಯಿಂದ ಪರಿಶೀಲನೆಯಾಗುತ್ತದೆ. ಮೊತ್ತ ವಿತರಣೆಗಾಗಿ ಜಂಟಿ ಕಾರ್ಯದರ್ಶಿಗಳಿಂದ ಡಿಬಿಟಿ (ನೇರ ನಗದು ವರ್ಗಾವಣೆ ವ್ಯವಸ್ಥೆ)ಗೆ ಕಳುಹಿಸಲಾಗುತ್ತದೆ.