ಬೆಂಗಳೂರು : ಇತ್ತೀಚೆಗೆ ಮಂಡ್ಯದಲ್ಲಿ ಬೆಳಕಿಗೆ ಬಂದ ಭ್ರೂಣ ಹತ್ಯೆ ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಸಿಎಂ ಆದೇಶ ಮಾಡಿದ್ದು, ಈ ಕುರಿತಂತೆ ಗೃಹ ಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ ಹೆಣ್ಣು ಭ್ರೂಣ ಪತ್ತೆ ಹಾಗೂ ಗರ್ಭಪಾತ ಪ್ರಕರಣ ಭೇದಿಸಿದ್ದ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯ ದಂಪತಿ ಹಾಗೂ ಇತರ ಮೂವರು ಸೇರಿದಂತೆ ಐವರನ್ನು ಬಂಧಿಸಿದ್ದರು. ಇದಕ್ಕೂ ಮುನ್ನ ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಕುಮಾರ್ ಮತ್ತು ನಯನ್ ಕುಮಾರ್ ಎಂಬವರನ್ನು ಬಂಧಿಸಲಾಗಿತ್ತು. ಇವರನ್ನು ವಿಚಾರಣೆ ನಡೆಸಿದ ಬಳಿಕ ಮೈಸೂರು ಮೂಲದ ವೈದ್ಯರು ಭಾಗಿಯಾಗಿರುವುದು ಗೊತ್ತಾಗಿತ್ತು.
ಸಂಬಂಧಪಟ್ಟ ಅಧಿಕಾರಿಗಳ ಅಮಾನತಿಗೆ ಆರೋಗ್ಯ ಸಚಿವರ ಸೂಚನೆ:ಪ್ರಕರಣ ಕುರಿತಂತೆ ಮೈಸೂರಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಗ್ಯ ಇಲಾಖೆಯ ಕೆಲ ಅಧಿಕಾರಿಗಳ ಲೋಪದೋಷ ಕೂಡ ಎದ್ದು ಕಾಣುತ್ತಿದೆ. ಮೈಸೂರು ತಾಲೂಕು ವೈದ್ಯಾಧಿಕಾರಿ ರಾಜೇಶ್ವರಿ ಅವರ ಕರ್ತವ್ಯ ಲೋಪ ಕಂಡು ಬಂದಿದೆ. ಹೀಗಾಗಿ ಅವರನ್ನ ಅಮಾನತು ಮಾಡಲು ಆಯುಕ್ತರಿಗೆ ಆದೇಶಿಸಿದ್ದೇನೆ ಎಂದಿದ್ದಾರೆ.
ಅಲ್ಲದೇ ಈ ಹಿಂದೆ ಮೈಸೂರು ಡಿಹೆಚ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ ರವಿ ಅವರ ಕರ್ತವ್ಯ ಲೋಪವೂ ಇದೆ. ಹೀಗಾಗಿ ಅವರನ್ನೂ ಅಮಾನತು ಮಾಡಲು ಆದೇಶಿಸಲಾಗಿದೆ. ಇಂತಹ ಪ್ರಕರಣಗಳ ತಡೆಯುವ ನಿಟ್ಟಿನಲ್ಲಿ ನಮ್ಮ ಸಮಾಜ ಕೂಡ ಬದಲಾಗಬೇಕಿದೆ. ಭ್ರೂಣ ಹತ್ಯೆಯು ಒಂದು ಸಾಮಾಜಿಕ ಪಿಡುಗಾಗಿದೆ. ಭ್ರೂಣ ಹತ್ಯೆಯ ಜಾಲ ಪತ್ತೆ ಹಚ್ಚಲು ಒಂದು ಸೂಕ್ತ ತನಿಖೆ ಅಗತ್ಯವಿದೆ. ಈ ಕುರಿತಂತೆ ಗೃಹ ಸಚಿವರು ಹಾಗೂ ಸಿಎಂ ಜೊತೆ ಮಾತನಾಡಿದ್ದೇನೆ. ಯಾವ ರೀತಿಯ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಸಿಎಂ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಭ್ರೂಣ ಹತ್ಯೆ ಮಾಡಿದವರು, ಮಾಡಿಸಿಕೊಂಡವರಿಗೂ ಕಠಿಣ ಶಿಕ್ಷೆ ಆಗಲಿ: ಸಚಿವ ವೆಂಕಟೇಶ್