ಬೆಂಗಳೂರು:ಲೋಕ ಸಮರದಲ್ಲಿನ ಹೀನಾಯ ಸೋಲಿನಿಂದ ಮನನೊಂದ ಸಿಎಂ ಕುಮಾರಸ್ವಾಮಿ ಇಂದು ನಡೆದ ಅನೌಪಚಾರಿಕ ಸಂಪುಟ ಸಭೆಯಲ್ಲಿ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಫಲಿತಾಂಶದಿಂದ ಸಿಎಂ ಕುಮಾರಸ್ವಾಮಿ ತೀವ್ರ ಮನನೊಂದಿದ್ದರು. ಮಂಡ್ಯದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ತುಮಕೂರಿನಲ್ಲಿ ದೇವೇಗೌಡರ ಸೋಲಿನಿಂದ ಸಿಎಂ ರಾಜೀನಾಮೆಯ ಚಿಂತನೆ ನಡೆಸಿದ್ದರು. ನಿನ್ನೆ ಫಲಿತಾಂಶ ಬಂದ ಬಳಿಕ ದೇವೇಗೌಡರ ಮನೆಗೆ ಭೇಟಿ ನೀಡಿ, ರಾಜೀನಾಮೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿಯಿಂದ ಮನವೊಲಿಕೆ:ಕುಮಾರಸ್ವಾಮಿ ರಾಜೀನಾಮೆ ಚಿಂತನೆ ವಿಷಯ ತಿಳಿದ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿಗೆ ಫೋನ್ ಮಾಡಿ ಮನವೊಲಿಕೆ ಮಾಡಿದ್ದಾರೆ. ನೀವೇ ಮುಖ್ಯಮಂತ್ರಿ ಆಗಿ ಮುಂದುವರೆಯಿರಿ. ಫಲಿತಾಂಶದಿಂದ ಮೈತ್ರಿ ಮುರಿಯುವುದು ಬೇಡ. ಕಾಂಗ್ರೆಸ್ ನಾಯಕರು ನಿಮ್ಮ ನೇತೃತ್ವದಲ್ಲಿ ಮುಂದುವರೆಯುತ್ತಾರೆ. ಫಲಿತಾಂಶದಿಂದ ಆತಂಕ ಬೇಡ ಎಂದು ರಾಹುಲ್ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.
ತಾವು ಫೋನ್ ಮಾಡಿದ್ದಲ್ಲದೇ ರಾಜ್ಯ ಕಾಂಗ್ರೆಸ್ ನಾಯಕರ ಮೂಲಕವೂ ರಾಹುಲ್ ಸಿಎಂ ಹೆಚ್ಡಿಕೆ ಅವರನ್ನು ಸಮಾಧಾನ ಮಾಡಿಸಿದ್ದಾರೆ. ಇಂದು ಡಿಸಿಎಂ ಮನೆಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಸಚಿವರು ಹಾಗೂ ನಾಯಕರು ಮೈತ್ರಿ ಸರ್ಕಾರದ ಅನಿವಾರ್ಯತೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜತೆಗೆ ಸಿಎಂ ಕುಮಾರಸ್ವಾಮಿಗೆ ತಮ್ಮ ಸಂಪೂರ್ಣ ಬೆಂಬಲ ನೀಡುವ ಬಗ್ಗೆನೂ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಪುಟ ಸಭೆಯಲ್ಲಿ ಧೈರ್ಯ ತುಂಬಿದ ಕೈ ಸಚಿವರು:
ರಾಹುಲ್ ಗಾಂಧಿ ಸೂಚನೆಯಂತೆ ಇಂದಿನ ಸಭೆಯಲ್ಲಿ ಸಿಎಂಗೆ ಕಾಂಗ್ರೆಸ್ ನಾಯಕರು ಧೈರ್ಯ ತುಂಬಿದ್ದಾರೆ. ನಾವು ನಿಮ್ಮ ಜೊತೆ ಇರುತ್ತೇವೆ. ಬಿಜೆಪಿ ತಂತ್ರಗಳಿಗೆಲ್ಲ ಹೆದರಬೇಡಿ. ನಾವು ನಿಮ್ಮ ಜತೆಗಿದ್ದೇವೆ ಎಂದು ಸಿಎಂಗೆ ಕಾಂಗ್ರೆಸ್ ಸಚಿವರು ಅಭಯ ನೀಡಿದ್ದಾರೆ ಎನ್ನಲಾಗಿದೆ.