ಬೆಂಗಳೂರು:ನ್ಯಾ. ಡಾ. ಎಂ.ರಾಮಾ ಜೋಯಿಸ್ ನ್ಯಾಯಮೂರ್ತಿಯಾಗಿ ನೀಡಿದ ದಿಟ್ಟ ತೀರ್ಪುಗಳು ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದವು. ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಸರಳ, ಸಜ್ಜನಿಕೆಯಿಂದ ವರ್ತಿಸುತ್ತಿದ್ದರು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅಧಿವಕ್ತ ಪರಿಷತ್ ಕರ್ನಾಟಕ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಿ. ನ್ಯಾ. ಡಾ. ಎಂ.ರಾಮಾ ಜೋಯಿಸ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಬಿಎಸ್ವೈ, ನ್ಯಾ. ರಾಮಾ ಜೋಯಿಸ್ ಸಂಸ್ಕೃತದಲ್ಲಿ ಪಾಂಡಿತ್ಯ ಹೊಂದಿದ್ದರು. ರಾಮಾ ಜೋಯಿಸ್ರ ಸಾವು ಇಡೀ ದೇಶಕ್ಕೆ ಅಘಾತ ತಂದಿದೆ. ಕಾಫಿ ಕುಡಿಯುವ ವೇಳೆ ಇಹಲೋಕ ತ್ಯಜಿಸಿದ್ದಾರೆ. ಇಂಥ ಸಾವು ದೇವರಲ್ಲಿ ಭಕ್ತಿ ಇರುವವರಿಗೆ ಮಾತ್ರ ಬರಲು ಸಾಧ್ಯ. ಜೋಯಿಸರು ಶಿಕ್ಷಕ, ವಕೀಲ, ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಿದ್ದಾರೆ ಎಂದರು.
ನ್ಯಾ. ರಾಮಾ ಜೋಯಿಸ್ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿ ಸಂತಾಪ ಸೂಚಿಸಿದ ಸಿಎಂ ಬಿಎಸ್ವೈ ತುರ್ತು ಪರಿಸ್ಥಿತಿಯಲ್ಲಿ ನಡೆದುಕೊಂಡ ರೀತಿ ಎಲ್ಲರೂ ನೆನೆಯಬೇಕಿದೆ. ನ್ಯಾಯಮೂರ್ತಿಗಳಾಗಿ ಕೊಟ್ಟ ದಿಟ್ಟ ತೀರ್ಪುಗಳು ದೇಶಕ್ಕೆ ಒಳ್ಳೆಯ ಸಂದೇಶಗಳಾಗಿವೆ. ರಾಮಾ ಜೋಯಿಸ್ ಒಳ್ಳೆಯ ರಾಜಕೀಯ ಚಿಂತಕರು ಸಹ ಆಗಿದ್ದರು ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘ ಸಂಚಾಲಕ ವಿ.ನಾಗರಾಜ್ ಮಾತನಾಡಿ, ಜೋಯಿಸರನ್ನು 1970ರಿಂದ ನೋಡಿದ್ದೇನೆ. 24 ಗಂಟೆಗಳ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಯಾದವರಾವ್ ಜೋಷಿಯವರ ಪ್ರೇರಣೆಯಿಂದ ವಕೀಲರಾದ ಅವರು, ಜೀವನದುದ್ದಕ್ಕೂ ಸಂಘದ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. 21 ತಿಂಗಳ ಕಾಲ ಬಂಧನದಲ್ಲಿದ್ದರೂ ಎಲ್ಲರನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದರು. ಆದರ್ಶ ಜೀವನ ತೋರಿಸಿಕೊಟ್ಟರು ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ, ದೇಶ ಕಂಡ ಅಪರೂಪದ ವ್ಯಕ್ತಿ ನ್ಯಾ. ರಾಮಾ ಜೋಯಿಸ್. ಅವರ ನೆನಪು ಹಸಿರಾಗಿ ಉಳಿದಿದೆ. ತೀರ್ಥಹಳ್ಳಿಯಲ್ಲಿ ಹುಟ್ಟಿದ ಜೋಯಿಸರು, ಕಷ್ಟ ಕಾರ್ಪಣ್ಯಗಳ ಮಧ್ಯೆ ವಿದ್ಯಾಭ್ಯಾಸ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ನಮ್ಮಬ್ಬಿರ ನಡುವೆ ಒಡನಾಟವಿತ್ತು. ವಿಚಾರಗಳನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುವ ವ್ಯವಧಾನವಿತ್ತು. ಮೃದು ಸ್ವಭಾವದವರಾಗಿದ್ದರು ಎಂದು ಹೇಳಿದರು.
ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ಮಾತನಾಡಿ, ಯುವಕರಿಗೆ ಮಾರ್ಗದರ್ಶನ ನೀಡಿದ ಕೆಲವೇ ನ್ಯಾಯಮೂರ್ತಿಗಳಲ್ಲಿ ರಾಮಾ ಜೋಯಿಸರು ಸಹ ಒಬ್ಬರು. ಅವರು ಜಡ್ಜ್ ಆಗಿದ್ದಾಗ ನಾನು ವಕೀಲನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಕಷ್ಟಕರ ಕೇಸ್ಗಳಿಗೆ ಸೂಕ್ಷ್ಮವಾಗಿ ತೀರ್ಪು ನೀಡುತ್ತಿದ್ದರು. ಯುವಕರನ್ನು ಪ್ರೋತ್ಸಾಹಿಸುತ್ತಿದ್ದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗದಲ್ಲಿ ಕೆಲಸ ಮಾಡಿದ ಏಕೈಕ ವ್ಯಕ್ತಿಯಾಗಿದ್ದರು ಎಂದರು.
ಇದನ್ನೂ ಓದಿ:ನಿವೃತ್ತ ಐಪಿಎಸ್ ಅಧಿಕಾರಿ ಬ್ಯಾಂಕ್ ಅಕೌಂಟ್ ಹ್ಯಾಕ್: 2.13 ಲಕ್ಷ ರೂ. ಎಗರಿಸಿದ ಹ್ಯಾಕರ್ಸ್!