ಕರ್ನಾಟಕ

karnataka

ETV Bharat / state

ಬೆಂಗಳೂರು ತೊರೆಯುವ ಹೇಳಿಕೆ: ಐಟಿಬಿಟಿ ಕಂಪನಿಗಳ ಜೊತೆ ಸಭೆಗೆ ಮುಂದಾದ ಸಿಎಂ - Bengaluru businessmen letter to Pm modi

ಬೆಂಗಳೂರು ತೊರೆಯುವ ಬಗ್ಗೆ ಐಟಿಬಿಟಿ ಕಂಪನಿಗಳಿಂದ ಎಚ್ಚರಿಕೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಐಟಿ ಕಂಪನಿಗಳ ಜೊತೆ ಸಭೆ ನಡೆಸಲು ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರೆ.

ಐಟಿಬಿಟಿ ಕಂಪನಿ ಮುಖ್ಯಸ್ಥರ ಜೊತೆ ಸಭೆಗೆ ಮುಂದಾದ ಸಿಎಂ
ಐಟಿಬಿಟಿ ಕಂಪನಿ ಮುಖ್ಯಸ್ಥರ ಜೊತೆ ಸಭೆಗೆ ಮುಂದಾದ ಸಿಎಂ

By

Published : Sep 4, 2022, 5:08 PM IST

ಬೆಂಗಳೂರು: ಮಳೆ ಅನಾಹುತದಿಂದ ಐಟಿಬಿಟಿ ಕಂಪನಿಗಳು ಎದುರಿಸುತ್ತಿರುವ ಸಂಕಷ್ಟ ಕುರಿತು ಉದ್ಯಮಿ ಟಿ.ವಿ.ಮೋಹನ್ ದಾಸ್ ಪೈ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಘಟನೆಯನ್ನು ಕಡೆಗೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಐಟಿ ಕಂಪನಿಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಸಲಹೆ ಪಡೆಯುವ ನಿರ್ಧಾರಕ್ಕೆ ಬಂದಿದೆ.

ಮಳೆ ನೀರು ಸಮಸ್ಯೆ ಕುರಿತು ಮೋಹನ್ ದಾಸ್ ಪೈ ಪತ್ರದ ಬೆನ್ನಲ್ಲೇ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ಕುರಿತು ಹೇಳಿಕೆಗಳ ಬರುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಐಟಿ ದಿಗ್ಗಜರ ಜೊತೆ ಮಾತುಕತೆ ನಡೆಸಲು ಮುಂದಾಗಿದೆ. ಈವರೆಗೂ ಹೇಳಿಕೆ ನೀಡಿಕೊಂಡು ಬಂದಿದ್ದ ಸಿಎಂ, ಈಗ ಸಭೆಗೆ ಮುಂದಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಬ್ರಾಂಡ್‌ ಬೆಂಗಳೂರಿಗೆ ಧಕ್ಕೆಯಾಗುತ್ತಿದೆ ಎಂದು ಮೋಹನ್ ದಾಸ್ ಪೈ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅತಿ ಹೆಚ್ಚು ಐಟಿಬಿಟಿ ಕಂಪನಿಗಳು ಇರುವ ಬೆಳ್ಳಂದೂರು, ಮಾರತ್ತಹಳ್ಳಿ, ಔಟರ್ ರಿಂಗ್ ರೋಡ್‌ನಲ್ಲಿ ಮಳೆಯಿಂದಾಗಿ 2 ದಿನವಾದರೂ ನೀರು ತಗ್ಗಿಲ್ಲ. ಐಟಿಬಿಟಿಯಲ್ಲಿ ಕೃತಕ ನದಿಗಳು ಸೃಷ್ಟಿಯಾಗಿವೆ. ರಸ್ತೆಗಳು ಕಿತ್ತುಹೋಗಿದ್ದು, ರಾಜಕಾಲುವೆಯ ಹೂಳೆತ್ತದೇ ಬಿಬಿಎಂಪಿ ನಿರ್ಲಕ್ಷ್ಯವಹಿಸಿದೆ ಎನ್ನುವ ಆರೋಪ ಮಾಡಿದ್ದಾರೆ. ಸದ್ಯದಲ್ಲೇ ಐಟಿಬಿಟಿ ಕಂಪನಿ ಮುಖ್ಯಸ್ಥರ ಜೊತೆ ಸಭೆ ನಡೆಸುತ್ತೇವೆ. ಸಮಸ್ಯೆ ಪರಿಹಾರ ಕುರಿತು ಅವರಿಂದ ಸಲಹೆ ಪಡೆದು, ಅಭಿಪ್ರಾಯ ಸಂಗ್ರಹ ಮಾಡುತ್ತೇವೆ, ಅವರಿಗಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತದೆ ಎಂದರು.

ಬೆಂಗಳೂರು ತೊರೆಯುವ ಬಗ್ಗೆ ಐಟಿಬಿಟಿ ಕಂಪನಿಗಳಿಂದ ಎಚ್ಚರಿಕೆ:ಬೆಂಗಳೂರು ಹೊರ ವರ್ತುಲ ರಸ್ತೆಯಲ್ಲಿ ಅನೇಕ ಐಟಿ ಸಂಸ್ಥೆಗಳು, ಬ್ಯಾಂಕಿಂಗ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು ಒಂದು ದಶಲಕ್ಷ ಮಂದಿಗೆ ಉದ್ಯೋಗ ಅವಕಾಶ ‌ನೀಡುತ್ತಿವೆ. ಸುಮಾರು ಶೇ.32 ಬೆಂಗಳೂರಿನ ಆದಾಯ ಇಲ್ಲಿಂದಲೇ ಬರುತ್ತಿದೆ. ಆದರೆ, ಈ ಕಾರಿಡಾರ್​​ನಲ್ಲಿ ಮೂಲಸೌಕರ್ಯಗಳ ಮೇಲೆ ಸರ್ಕಾರ ಯಾವುದೇ ಗಮನ ಕೊಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದೆ. ಆಗಸ್ಟ್ 30ರಂದು ಸುರಿದ ಮಳೆಗೆ ನೆರೆ ಉಂಟಾಗಿ ಸುಮಾರು 225 ಕೋಟಿ ರೂ. ನಷ್ಟವಾಗಿದೆ. ಈ ಅವ್ಯವಸ್ಥೆಯಿಂದ ಸಂಸ್ಥೆಗಳ ಉತ್ಪಾದಕತೆ ಕಡಿಮೆಯಾಗುತ್ತಿದೆ. ಜೊತೆಗೆ ಉದ್ಯೋಗಿಗಳ ಸುರಕ್ಷತೆಯೂ ಅಪಾಯದಲ್ಲಿದೆ. ಅಸಮರ್ಪಕ ಮೂಲಸೌಕರ್ಯ ಇದೀಗ ಬಿಕ್ಕಟ್ಟು ಸ್ಥಿತಿಗೆ ತಲುಪಿದೆ. ಇದರಿಂದ ಹಲವು ಕಂಪನಿಗಳು ತಮ್ಮ ಪ್ರಮುಖ ಕೆಲಸಗಳನ್ನು ಬೆಂಗಳೂರು ಹಾಗೂ ಕರ್ನಾಟಕದಿಂದ ಸ್ಥಳಾಂತರಿಸುತ್ತಿವೆ. ಇದು ನಗರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದೆ.

ಒಂದು ವೇಳೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣದಿದ್ದರೆ ಹಲವು ಸಂಸ್ಥೆಗಳು ಬೆಂಗಳೂರು ಬಿಟ್ಟು ಹೊರ ಹೋಗ ಬೇಕಾಗುತ್ತದೆ. ಆದ್ದರಿಂದ ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವಂತೆ ಸಿಎಂಗೆ ಐಟಿ ಸಂಸ್ಥೆಗಳು ಪತ್ರ ಬರೆದಿವೆ.

(ಇದನ್ನೂ ಓದಿ: ಮೂಲಸೌಕರ್ಯ ಸುಧಾರಿಸದಿದ್ದಲ್ಲಿ ಬೆಂಗಳೂರು ಬಿಡುತ್ತೇವೆ: ಸಿಎಂಗೆ ಐಟಿ ಕಂಪನಿಗಳಿಂದ ಪತ್ರ)

ABOUT THE AUTHOR

...view details