ಕರ್ನಾಟಕ

karnataka

ETV Bharat / state

ಬಜೆಟ್‌ ಅಧಿವೇಶನದ ಬಳಿಕ ರಾಜ್ಯದ ನಾಲ್ಕು ಕಡೆ ರಥಯಾತ್ರೆ: ಸಿಎಂ ಬೊಮ್ಮಾಯಿ

ಬಿಜೆಪಿ ಕಾರ್ಯಕಾರಿಣಿ ಸಭೆ ಮುಗಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲರ ಹೇಳಿಕೆ, ಚುನಾವಣಾ ರಥಯಾತ್ರೆ ಕುರಿತು ಪ್ರತಿಕ್ರಿಯಿಸಿದರು.

Honorable Chief Minister Basavaraj Bommai
ಮಾಧ್ಯಮದೊಂದಿಗೆ ಮಾತನಾಡುತ್ತಿರುವ ಮಾನ್ಯ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

By

Published : Jan 17, 2023, 8:35 AM IST

Updated : Jan 17, 2023, 12:45 PM IST

ಸಿಎಂ ಬೊಮ್ಮಾಯಿ ಹೇಳಿಕೆ

ನವದೆಹಲಿ/ಬೆಂಗಳೂರು: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೇ ಚುನಾವಣೆ ಎದುರಿಸುತ್ತಿದ್ದೇನೆ. ನಕಾರಾತ್ಮಕ ಪ್ರಚಾರದ ಪ್ರಯತ್ನಗಳು ನಡೆದರೂ ಅವುಗಳು ಪರಿಣಾಮ ಬೀರುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ನಡೆಸಿದ ಜನ ಸಂಕಲ್ಪ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ಅಧಿವೇಶನದ ಬಳಿಕ ನಾಲ್ಕು ಕಡೆಯಿಂದ ರಥಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮುಗಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಪಕ್ಷದ ಕಾರ್ಯಕಾರಿಣಿಯಲ್ಲಿ ಹಲವು ರಾಜಕೀಯ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳ ಬಗ್ಗೆ ವರದಿ ಮಂಡಿಸಲಾಯಿತು. ಬೂತ್ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು, ಸಂಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಚುನಾವಣಾ ಭರವಸೆ ವಿಚಾರ: ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷ​ ಹೊಸ ಭರವಸೆಯನ್ನು ರಾಜ್ಯದ ಜನತೆ ಮುಂದೆ ಇಟ್ಟಿದ್ದಾರಲ್ಲವೇ ಎಂದು ಮಾಧ್ಯಮದವರು ಕೇಳಿದಾಗ ಪ್ರತಿಕ್ರಿಯಿಸಿದ ಸಿಎಂ, ನಾನು ಮೊನ್ನೆ ಬಜೆಟ್​ನಲ್ಲಿ ಬರುವಂತಹ ಕಾರ್ಯಕ್ರಮಗಳ ಬಗ್ಗೆ ಹೇಳಿದ್ದೆ. ಅದರ ಬಗ್ಗೆ ಘೋಷಣೆ ಕೂಡ ಮಾಡಿದ್ದೆ, ಅದನ್ನೇ ಅವರು ಅನುಸರಿಸುತ್ತಿದ್ದಾರೆ ಅಷ್ಟೇ. ಅದು ಬಿಟ್ಟರೆ ಹೊಸದೇನಿಲ್ಲ. ಅವರು ಹತಾಶರಾಗಿದ್ದಾರೆ. ಹೀಗಾಗಿ ಪ್ರತಿ ಒಂದು ಸಭೆಯಲ್ಲಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲವೂ ಕರ್ನಾಟಕ ಜನತೆಗೆ ಗೊತ್ತಿದೆ. ಅವರು ಅಧಿಕಾರದಲ್ಲಿ ಇದ್ದಾಗ ಜನರಿಗೆ ಕೊಟ್ಟ ಭಾಗ್ಯಗಳು ಯಶಸ್ವಿಯಾಗಿರಲಿಲ್ಲ. ಅವರ ಎಲ್ಲಾ ಭಾಗ್ಯಗಳು ಸೇರಿ ದೌರ್ಭಾಗ್ಯವಾಗಿದೆ. ಹಾಗಾಗಿ ಜನರು ಅವರನ್ನು ಸೋಲಿಸಿದ್ದಾರೆ ಎಂದು ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇವೆ. ಕಾರ್ಯಕಾರಿಣಿ ಮುಗಿದ ಬಳಿಕ ಈ ಬಗ್ಗೆ ಚರ್ಚಿಸಲಾಗುವುದೆಂದರು. ತಿಪ್ಪಾರೆಡ್ಡಿಯವರ ವಿರುದ್ಧದ ಆರೋಪದ ಬಗ್ಗೆ ಕೇಳಿದಾಗ ಅದರ ಬಗ್ಗೆ ನಾನು ನೊಡಿಲ್ಲ, ನೋಡದೇ ಮಾತನಾಡುವುದಿಲ್ಲ ಎಂದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಅವರ ಆಡಿಯೋ ಲೀಕ್​ ವಿಚಾರವಾಗಿ ಪ್ರತಿಕ್ರಿಯಿಸಿ, ಯೋಗೇಶ್ವರ್ ಮುಕ್ತವಾಗಿ ಮಾತನಾಡುವಂತವರು ಎಂದು ಹೇಳಿ ತೆರಳಿದರು.

ಶಾಸಕ ಯತ್ನಾಳ್ ಹೇಳಿದ್ದೇನು?: ತಮ್ಮದೇ ಪಕ್ಷದ ಮುರುಗೇಶ್​ ನಿರಾಣಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಿಂಪ್​ ಎನ್ನುವ ಪದ ಬಳಸಿ ಬಹಿರಂಗವಾಗಿ ಮಾತನಾಡಿದ್ದರು. ಮುರುಗೇಶ್​ ನಿರಾಣಿ ಬ್ಲಾಕ್‌ಮೇಲ್​ ಮಾಡಿ ಮಂತ್ರಿಯಾಗಿದ್ದಾರೆ. "ಪಕ್ಷದಲ್ಲಿ ಪಿಂಪ್​ ಸಚಿವನಿದ್ದಾನೆ, ಆತ ಪಿಂಪ್​ ಕೆಲಸವನ್ನೇ ಮಾಡುವುದು. ಆತನ ಮಾತು ಕೇಳಿಯೇ ಯಡಿಯೂರಪ್ಪನವರು ಹೋದರು. ಇನ್ನು ಅವನ ಮಾತು ಬೊಮ್ಮಾಯಿಯೂ ಕೇಳಿದಲ್ಲಿ ನೀವೂ ಹೋಗುತ್ತೀರಿ" ಎಂದಿದ್ದರು. ಈ ಪದ ಬಳಕೆಯಿಂದ ಅಸಮಾಧಾನಗೊಂಡಿದ್ದ ಹೈಕಮಾಂಡ್​ ಇದೀಗ ಮೂರನೇ ಬಾರಿ ಕಾರಣ ಕೇಳಿ ನೋಟಿಸ್​ ಜಾರಿಗೊಳಿಸಿದೆ. ಅಲ್ಲದೇ ಇನ್ನು 15 ದಿನದಲ್ಲಿ ಉತ್ತರ ನೀಡುವಂತೆ ​ಸೂಚನೆ ನೀಡಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಕಾಂಗ್ರೆಸ್‌ ಚುನಾವಣಾ ಭರವಸೆ ವಿಚಾರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿನ್ನೆ ‘ನಾ ನಾಯಕಿ’ ಎಂಬ ಹೆಸರಿನಲ್ಲಿ ಕಾಂಗ್ರೆಸ್​ ಮಹಿಳಾ ಸಮಾವೇಶ ನಡೆಸಿದ್ದು, ಪ್ರಿಯಾಂಕ ಗಾಂಧಿ ಚಾಲನೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಅವರು ಮಹಿಳೆಯರ ಮತ ಸೆಳೆಯುವ ಕಸರತ್ತು ನಡೆಸಿದರು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24,000 ಸಾವಿರ ನೀಡುತ್ತೇವೆ. ಇದು ಕಾಂಗ್ರೆಸ್​ ಪಕ್ಷ ಮಹಿಳೆಯರಿಗೆ ನೀಡಲಿರುವ ಕೊಡುಗೆ ಎಂದು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ಬಿಜೆಪಿ ಹೈಕಮಾಂಡ್​​ನಿಂದ ನೋಟಿಸ್

Last Updated : Jan 17, 2023, 12:45 PM IST

ABOUT THE AUTHOR

...view details