ಕರ್ನಾಟಕ

karnataka

ETV Bharat / state

ಪಶ್ಚಿಮ ಘಟ್ಟಗಳ ಕಸ್ತೂರಿ ರಂಗನ್ ವರದಿ ಜಾರಿಗೆ ಬೊಮ್ಮಾಯಿ ತೀವ್ರ ವಿರೋಧ: ವರದಿಯಲ್ಲೇನಿದೆ?

ಪಶ್ಚಿಮ‌ ಘಟ್ಟಗಳ ಪರಿಸರ ರಕ್ಷಣೆ ಸಂಬಂಧ ವರದಿ ನೀಡುವ ಉದ್ದೇಶದಿಂದ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು‌. ಈ ಸಮಿತಿ ಸಲ್ಲಿಸಿರುವ ವರದಿ ಜಾರಿ ಮಾಡಬಾರದು ಎಂದು ಶನಿವಾರ ಕೇಂದ್ರ ಸಚಿವರ ಜೊತೆ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಒತ್ತಾಯಿಸಿದ್ದಾರೆ.

Bommai fierce opposition to the Kasturi Rangan Report
ಕೇಂದ್ರದ ಮುಂದೆ ಕಸ್ತೂರಿ ರಂಗನ್ ವರದಿ ಜಾರಿಗೆ ಸಿಎಂ ಬೊಮ್ಮಾಯಿ ತೀವ್ರ ವಿರೋಧ

By

Published : Dec 6, 2021, 6:50 AM IST

ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧ ಕಸ್ತೂರಿ ರಂಗನ್ ಸಮಿತಿ ವರದಿ ಜಾರಿ ಕುರಿತಂತೆ ಕೇಂದ್ರ ಸಚಿವರ ಜೊತೆ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ವಿರೋಧಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್ ವರದಿಯಲ್ಲೇನಿದೆ ಎಂಬ ವರದಿ ಇಲ್ಲಿದೆ.

ಪಶ್ಚಿಮ‌ ಘಟ್ಟಗಳ ಪರಿಸರ ರಕ್ಷಣೆ ಸಂಬಂಧ ವರದಿ ನೀಡುವ ಉದ್ದೇಶದಿಂದ ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು‌. 2013ರಲ್ಲಿ ಸಮಿತಿ ವರದಿ ಸಲ್ಲಿಸಿತ್ತು. ಪಶ್ಚಿಮ ಘಟ್ಟ ಸಂಬಂಧ ಸಲ್ಲಿಸಿದ ಈ ವರದಿ ಹಲವು ರಾಜ್ಯ ಸರ್ಕಾರಗಳ ನಿದ್ದೆಗೆಡಿಸಿದೆ. ಇದಕ್ಕೂ ಮುನ್ನ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ಉದ್ದೇಶದಿಂದ, ಅದರ ಬಗ್ಗೆ ಪರಿಸರ ತಜ್ಞ ಮಾದವ ಗಾಡ್ಗಿಲ್‍ ಅವರ ಅಧ್ಯಕ್ಷತೆಯಲ್ಲಿ ಕೆಂದ್ರ ಸರ್ಕಾರ ಒಂದು ಸಮಿತಿ ರಚಿಸಿತ್ತು. ಅವರು 2011ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.‌ ಆದರೆ ವರದಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ 2013ರಲ್ಲಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿ ಪರಿಷ್ಕೃತ ವರದಿ ನೀಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಕಸ್ತೂರಿ ರಂಗನ್‍ಸಮಿತಿ ವರದಿಯಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯ 59,949 ಸಾವಿರ ಚ.ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವಂತೆ ಶಿಫಾರಸು ಮಾಡಲಾಗಿತ್ತು. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣ ನಿಷೇಧಿಸುವಂತೆ ಸೂಚಿಸಿತ್ತು. ಈ ವರದಿ ಜಾರಿಯಾದರೆ ಈಗಿರುವ ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ 5 ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ.ಮೀ.ಗಿಂತ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಇಎಸ್‌ಎನಿಂದ 10ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳಿಗೆ ಪರಿಸರ ಇಲಾಖೆ, ಸ್ಥಳೀಯ ಗ್ರಾಮಸಭೆ ಅನುಮತಿ ಪಡೆಯಬೇಕು. ಈ ಪ್ರದೇಶದಲ್ಲಿ ಸಿಮೆಂಟು, ಕಲ್ಲು, ರಸಾಯನಿಕ ಬಳಸಲು, ಜನವಸತಿ ನಿರ್ಮಿಸಲು ಅವಕಾಶವಿಲ್ಲ ಎಂಬ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಹಾಡಿಗೆ ನುಗ್ಗಿ ಜನರನ್ನು ಅಟ್ಟಾಡಿಸಿದ ಒಂಟಿ ಸಲಗ.. ಲೈಟ್​ ಕಂಬಕ್ಕೆ ಗುದ್ದಿ ರೋಷಾವೇಷ - ವಿಡಿಯೋ

ಕರ್ನಾಟಕದ ಯಾವ ಪ್ರದೇಶ ವ್ಯಾಪ್ತಿಗೆ ಒಳಪಡುತ್ತೆ?:

ಈ ವರದಿಯನ್ವಯ ಕರ್ನಾಟಕ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳ 20,668 ಚದರ ಕಿ.ಮೀ. ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ (Ecologically Sensitive Zones)ದಲ್ಲಿ ಸೇರಿದೆ.

ಡಾ.ಕಸ್ತೂರಿರಂಗನ್ ವರದಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21 ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27 ಹೆಕ್ಟೇರ್, ಕೊಪ್ಪದ 32 ಹೆಕ್ಟೇರ್, ಮೂಡಿಗೆರೆಯ 27 ಹೆಕ್ಟೇರ್, ದ.ಕನ್ನಡದ ಬೆಳ್ತಂಗಡಿಯ 17 ಹೆಕ್ಟೇರ್, ಪುತ್ತೂರಿನ 11 ಹೆಕ್ಟೇರ್, ಸುಳ್ಯದ 18 ಹೆಕ್ಟೇರ್, ಕೊಡಗಿನ ಮಡಿಕೇರಿ 23 ಹೆಕ್ಟೇರ್, ಸೋಮವಾರಪೇಟೆಯ 11 ಹೆಕ್ಟೇರ್, ವಿರಾಜಪೇಟೆಯ 21 ಹೆಕ್ಟೇರ್, ನರಸಿಂಹರಾಜಪುರದ 35 ಹೆಕ್ಟೇರ್, ಶೃಂಗೇರಿಯ 26 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿತವಾಗುತ್ತದೆ.

ಅದೇ ರೀತಿ ಹಾಸನ ಜಿಲ್ಲೆಯ ಆಲೂರಿನಲ್ಲಿ 1 ಹೆಕ್ಟೇರ್, ಸಕಲೇಶಪುರದ 34 ಹೆಕ್ಟೇರ್, ಉ.ಕನ್ನಡ ಜಿಲ್ಲೆಯ ಆಂಕೋಲಾದಲ್ಲಿ 43 ಹೆಕ್ಟೇರ್, ಭಟ್ಕಳದಲ್ಲಿ 28 ಹೆಕ್ಟೇರ್, ಹೊನ್ನಾವರದ 44 ಹೆಕ್ಟೇರ್, ಜೋಯ್ಡಾದ 110 ಹೆಕ್ಟೇರ್, ಕಾರವಾರದ 39 ಹೆಕ್ಟೇರ್, ಕುಮ್ಟಾದ 43 ಹೆಕ್ಟೇರ್, ಸಿದ್ದಾಪುರ ದ 107 ಹೆಕ್ಟೇರ್, ಶಿರಸಿಯ 125 ಹೆಕ್ಟೇರ್, ಯಲ್ಲಾಪುರದ 87 ಹೆಕ್ಟೇರ್, ಮೈಸೂರಿನ ಎಚ್.ಡಿ.ಕೋಟೆಯ 62 ಹೆಕ್ಟೇರ್, ಶಿವಮೊಗ್ಗದ ಹೊಸನಗರ 126 ಹೆಕ್ಟೇರ್, ಸಾಗರದ 134 ಹೆಕ್ಟೇರ್, ಶಿಕಾರಿಪುರದ 12 ಹೆಕ್ಟೇರ್, ಶಿವಮೊಗ್ಗದ 66 ಹೆಕ್ಟೇರ್, ತೀರ್ಥಹಳ್ಳಿಯ 146 ಹೆಕ್ಟೇರ್, ಉಡುಪಿಯ ಕಾರ್ಕಳದ 13 ಹೆಕ್ಟೇರ್, ಕುಂದಾಪುರದ 24 ಹೆಕ್ಟೇರ್ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತವೆ.

ವರದಿ ಅನುಷ್ಠಾನಕ್ಕಾಗಿ ಅಧಿಸೂಚನೆ:

2014ರಲ್ಲಿ ಸಮಿತಿ ವರದಿಯಲ್ಲಿ ಶಿಫಾರಸು ಮಾಡಲಾದ ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ 2015 ಹಾಗೂ 2017ರಲ್ಲಿ ಪತ್ಯೇಕ ಅಧಿಸೂಚನೆ ಹೊರಡಿಸಿತು.

ಆದರೆ, ಕರ್ನಾಟಕ ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು. ಆದರೆ, ಹಸಿರು ನ್ಯಾಯಾಧೀಕರಣ ಪೀಠ ಕಸ್ತೂರಿ ರಂಗನ್ ವರದಿ ಜಾರಿ ಸಂಬಂಧ 2020 ರೊಳಗೆ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆದೇಶ ನೀಡಿತ್ತು. ಈ ಬಗ್ಗೆ ಪಶ್ಚಿಮ ಘಟ್ಟ ವ್ಯಾಪ್ತಿಗೆ ಬರುವ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ರಾಜ್ಯದ ಮೇಲಾಗುವ ಪರಿಣಾಮ ಏನು?:

ಕಸ್ತೂರಿ ರಂಗನ್ ಅವರ ವರದಿ ಅನುಷ್ಠಾನವಾದ್ರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಹೀಗಾಗಿ ಈ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ಬಹುತೇಕ ನಿರ್ಬಂಧ ಹೇರಲಾಗುತ್ತದೆ. ಈ ಪ್ರದೇಶಗಳ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ.

ಇದರಿಂದ ಈ ಪ್ರದೇಶದಲ್ಲಿ ಬರುವ ಅರಣ್ಯವಾಸಿಗಳು, ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಚಟುವಟಿಕೆಗೆ ಅವಕಾಶ ಇರುವುದಿಲ್ಲ. ಜೊತೆಗೆ, ಸದ್ಯ ಇರುವ ಕೈಗಾರಿಕೆಗಳನ್ನು 5 ವರ್ಷದೊಳಗೆ ಮುಚ್ಚಬೇಕಾಗುತ್ತದೆ. ಹೊಲ-ಗದ್ದೆ, ತೋಟ ಮಾಡಿಕೊಂಡು ಬದುಕು ಕಟ್ಟಿಕೊಂಡವರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.

ಕಸ್ತೂರಿ ರಂಗನ್ ಸಮಿತಿ ಅವೈಜ್ಞಾನಿಕವಾಗಿ ಪರಿಸರ ಸೂಕ್ಷ್ಮ ವಲಯದ ಸರ್ವೆ ಕಾರ್ಯ ನಡೆಸಿದೆ. ಕೃಷಿ ಚಟುವಟಿಕೆ ನಡೆಯುವ ಪ್ರದೇಶವನ್ನು ಅರಣ್ಯ ಎಂದು ಪರಿಗಣಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಕೇರಳ ಮಾಡಿದ್ದೇನು?:

ಉಪಗ್ರಹದ ಆಧಾರದಲ್ಲಿ ಸಮೀಕ್ಷೆ ಮಾಡಿದ್ದ ಸಮಿತಿ, ಅರಣ್ಯ ಪ್ರದೇಶ ಲೆಕ್ಕ ಹಾಕುವಲ್ಲಿ ಎಡವಿತ್ತು. ಕೇರಳ ಸರ್ಕಾರ ಕೇಂದ್ರಕ್ಕೆ ಇದನ್ನು ಮನವರಿಕೆ ಮಾಡುವಲ್ಲಿ ಸಫಲವಾಗಿತ್ತು. ಹೀಗಾಗಿ ಪರಿಸರ ಸೂಕ್ಷ್ಮ ಪ್ರದೇಶಗಳ ಪಟ್ಟಿಯಿಂದ ಅನೇಕ ಪ್ರದೇಶಗಳನ್ನು ಕೈ ಬಿಡಲಾಯಿತು.

ಕೇರಳ ಪಶ್ಚಿಮಘಟ್ಟಗಳ ವ್ಯಾಪ್ತಿಗೆ ಬರುತ್ತದೆ. ಕೇರಳ ರಾಜ್ಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪುನಃ ಸರ್ವೆ ಕಾರ್ಯ ಮಾಡಿತ್ತು. ಇದರಿಂದ 13,108 ಚ. ಕಿ. ಮೀ. ಅಷ್ಟು ಇದ್ದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ 9 ಸಾವಿರ ಚ. ಕಿ. ಮೀಗೆ ಇಳಿಕೆಯಾಗಿದೆ.

For All Latest Updates

TAGGED:

ABOUT THE AUTHOR

...view details