ಬೆಂಗಳೂರು: ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದಲ್ಲಿ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಬಸವಣ್ಣನ ಕಾಲದ ಅನುಭವ ಮಂಟಪವನ್ನೇ ಮರುಸೃಷ್ಟಿ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಪ್ರಗತಿ ಕುರಿತು ಸಿಎಂ ಸಭೆ ನಡೆಸಿದರು. ಅನುಭವ ಮಂಟಪದ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ನಂತರ ಮಾತನಾಡಿದ ಸಿಎಂ, ಬಸವಣ್ಣನವರ ಕಾಲದಲ್ಲಿ ಅನುಭವ ಮಂಟಪವು ಸದಾ ಚಟುವಟಿಕೆಯಿಂದ ಕೂಡಿದ್ದು, ವಿಚಾರ ಮಂಥನ ನಡೆಯುತ್ತಿತ್ತು. ಪ್ರಸ್ತುತ ನಿರ್ಮಿಸುತ್ತಿರುವ ಅನುಭವ ಮಂಟಪದಲ್ಲಿಯೂ ನಿರಂತರ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿ ಸುಸಜ್ಜಿತ ಸಭಾಂಗಣಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸೃಷ್ಟಿಸುವಂತೆ ಸೂಚನೆ ನೀಡಿದರು.
ಇದಲ್ಲದೆ ಮಕ್ಕಳಿಗೆ ಹಿಂದಿನ ಅನುಭವ ಮಂಟಪ ಹೇಗಿತ್ತು ಎಂಬ ಅರಿವು ಮೂಡಿಸುವ ರೀತಿಯಲ್ಲಿ ಇದನ್ನು ನಿರ್ಮಿಸಬೇಕು. ಜೊತೆಗೆ ಸುಸಜ್ಜಿತವಾದ ಡಿಜಿಟಲ್ ಲೈಬ್ರರಿ, ಹಾಲೋಗ್ರಾಫಿಕ್ ಪ್ರದರ್ಶನ ಮೊದಲಾದ ವ್ಯವಸ್ಥೆಗಳನ್ನು ರೂಪಿಸುವ ಮೂಲಕ ಅನುಭವ ಮಂಟಪದ ಅನುಭವ ಜನರಿಗೆ ಆಗುವಂತೆ ಮಾಡಬೇಕು. ಕನಿಷ್ಠ 200 ಜನ ಕುಳಿತುಕೊಳ್ಳುವ ಎರಡು ಸಭಾಂಗಣ ನಿರ್ಮಾಣ ಮಾಡಿ ಎಂದು ಸೂಚಿಸಿದರು.