ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿದರು. ಬಳಿಕ ಮೊದಲ ರೈಲಿನಲ್ಲಿ ಕೆಂಗೇರಿ ಟರ್ಮಿನಲ್ಗೆ ಪ್ರಯಾಣ ಮಾಡಿದರು.
ನಂತರ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದು ಖುಷಿ ಕೊಟ್ಟಿದೆ. ಬೆಂಗಳೂರು ನಗರವು ಇಡೀ ದೇಶದಲ್ಲಿ ಅರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜೊತೆಗೆ ಐಟಿ-ಬಿಟಿ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ. ಭಾರತದಲ್ಲಿ 600 ಮಿಲಿಯನ್ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಲವು ಪ್ರಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸಂಸ್ಥೆಗಳು ಇಲ್ಲಿವೆ. ಬೆಂಗಳೂರಿನ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಮೆಟ್ರೋ ರೈಲಿನ ಫೇಸ್ 1ರ ಕಾಮಗಾರಿ 2006 ರಲ್ಲಿ ಆರಂಭವಾಗಿ ಬೆಂಗಳೂರು ಮೆಟ್ರೋ ಇವತ್ತು ಒಳ್ಳೆಯ ಹೆಸರು ಪಡೆದಿದೆ. ದೇಶದ 27 ನಗರಗಳಲ್ಲಿ ಮೆಟ್ರೋ ಸಂಚಾರ ಇದೆ ಎಂದರು.
ಸ್ವಾತಂತ್ರ್ಯ ಬಂದ ನಂತರ ಶೇ.17ರಷ್ಟು ಜನ ನಗರಗಳಲ್ಲಿ ವಾಸಿಸುತ್ತಿದ್ರು. 2030 ವೇಳೆಗೆ ಭಾರತದ 600 ಮಿಲಿಯನ್ ಜನ ನಗರಗಳಲ್ಲಿ ವಾಸ ಮಾಡುತ್ತಾರೆ. ಯುಪಿಎ ಸರ್ಕಾರ ಹತ್ತು ವರ್ಷದ ನಗರ ಯೋಜನೆಗಳಿಗೆ 1.57 ಸಾವಿರ ಕೋಟಿ ವೆಚ್ಚ ಮಾಡಿದೆ. ಆದರೆ ಮೋದಿ ಸರ್ಕಾರ ಆರು ವರ್ಷದ ಅವಧಿಯಲ್ಲಿ 1.57 ಲಕ್ಷ ಕೋಟಿ ವೆಚ್ಚ ಮಾಡಿದೆ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೆಟ್ರೋ ಉತ್ತಮ ಸಮೂಹ ಸಾರಿಗೆ:
ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ನಮ್ಮ ಮೆಟ್ರೋ ಬೆಂಗಳೂರಿನ ಭವಿಷ್ಯದ ಕೊಂಡಿ, ದೇಶ ವಿದೇಶಗಳಿಂದ ಬರುವ ಗಣ್ಯರಿಗೆ ಉತ್ತಮ ಸಮೂಹ ಸಾರಿಗೆ ವ್ಯವಸ್ಥೆಯನ್ನು ನಮ್ಮ ಮೆಟ್ರೋ ಪೂರೈಸುತ್ತದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಂಬಂಧಿಸಿದಂತೆ ರಸ್ತೆ ಗುರುತು ಮಾಡಲಾಗಿದೆ. ಹೆಚ್ಚು ಟ್ರಾಫಿಕ್ ಜಾಮ್ ಇರುವ ಒಟ್ಟು 12 ರಸ್ತೆಗಳನ್ನು ಗುರುತು ಮಾಡಿದ್ದು, ಸ್ವಯಂಚಾಲಿತ ರೈಲ್ವೆ ಸಿಗ್ನಲ್ ವ್ಯವಸ್ಥೆ ಮಾಡಲಾಗುವುದು. ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಟ್ರಾಫಿಕ್ ಫ್ರೀ ಮಾಡಲು ಚಾಲನೆ ನೀಡಲಾಗಿದ್ದು, ಬೆಂಗಳೂರಿನ ಜನರ ಸಹಕಾರ ಬೇಕಿದೆ ಎಂದು ತಿಳಿಸಿದರು.