ಕರ್ನಾಟಕ

karnataka

ETV Bharat / state

ಬೊಮ್ಮಾಯಿ ತವರು ಪ್ರೀತಿ: ಅಧಿಕಾರದ ಕಡೆ ದಿನಗಳಲ್ಲಿ ನಿಗಮ, ಮಂಡಳಿಗೆ ಬೆಂಬಲಿಗರ ನೇಮಕ!

ತಮ್ಮ ಅಧಿಕಾರಾವಧಿ ಕೊನೆಯಾಗುತ್ತಿರುವ ಸಮಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ತವರು ಜಿಲ್ಲೆಯಿಂದಲೇ ಹಲವಾರು ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಿರುವುದು ಪಕ್ಷದೋಳಗೂ ಚರ್ಚೆಯಾಗುತ್ತಿದೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Mar 10, 2023, 12:14 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರದ ಕೊನೆಯ ದಿನಗಳಲ್ಲೂ ನಿಗಮ, ಮಂಡಳಿಗಳಿಗೆ ನೇಮಕ ಮಾಡುವುದನ್ನು ಮುಂದುವರಿಸಿದ್ದಾರೆ. ಗುರುವಾರ ಹೊರಡಿಸಿದ ಆದೇಶದಲ್ಲಿ ಹಲವಾರು ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಬೊಮ್ಮಾಯಿ ಸರ್ಕಾರದ ಅವಧಿ ಕೇವಲ ಎರಡು ತಿಂಗಳು ಮಾತ್ರ ಇದ್ದು, ಉಳಿದಿರುವ ಅತ್ಯಲ್ಪ ಅವಧಿಗೆ ತಮ್ಮ ಬೆಂಬಲಿಗರನ್ನು ನಿಗಮ ಮಂಡಳಿಗಳಿಗೆ ನಿರ್ದೇಶಕರನ್ನಾಗಿ ನೇಮಕ ಮಾಡಿ ಆದೇಶಿಸಿದ್ದಾರೆ.

ಯಾವುದೆಕ್ಕೆಲ್ಲ ನೇಮಕ?: ನಿಗಮ, ಮಂಡಳಿಗಳಿಗೆ ನೇಮಕಗೊಂಡವರೆಲ್ಲರೂ ಬಸವರಾಜ ಬೊಮ್ಮಾಯಿವರ ತವರು ಜಿಲ್ಲೆ ಹಾವೇರಿಗೆ ಸೇರಿರುವುದು ವಿಶೇಷ. ಸಿಎಂ ಅವರ ಕ್ಷೇತ್ರ ಶಿಗ್ಗಾಂವಿ ಸಹ ಹಾವೇರಿ ಜಿಲ್ಲೆಗೆ ಸೇರಿದ್ದಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನಕ್ಕೆ ಒಳಪಟ್ಟ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮ, ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಒಟ್ಟು 11 ಜನ ನಿರ್ದೇಶಕರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ಆದೇಶ ಮಾಡಲಾಲಾಗಿದೆ.

ನೇಮಕವಾದವರು ಯಾರು?: ಹಾವೇರಿ ತಾಲೂಕಿನ ಬೆನಕನಹಳ್ಳಿಯ ರಾಜೇಂದ್ರ ಭರಮಪ್ಪ ಹಾವೇರಣ್ಣನವರ್ ಅವರನ್ನು ದೇವರಾಜ್ ಅರಸ್ ಅಭಿವೃದ್ಧಿ ನಿಗಮಕ್ಕೆ, ಹಾವೇರಿ ತಾಲೂಕಿನ ಗುಂಡೂರು ಗ್ರಾಮದ ಚಿದಾನಂದ ಬಡಿಗೇರ್ ಮತ್ತು ರಾಣೆಬೆನ್ನೂರಿನ ಓಂಕಾರ ಬಿನ್ ಪೂರ್ವಾಚಾರಿ ಅವರನ್ನು ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ, ಶಿಗ್ಗಾಂವ ತಾಲೂಕಿನ ಗೋಟಗೋಡಿ ಗ್ರಾಮದ ವಿನಾಯಕ ಎಲ್ಲಪ್ಪ ಶಿಂಧೆ ಮತ್ತು ರಾಣೆಬೆನ್ನೂರಿನ ಹೊಸನಗರದ ನಾರಾಯಣರಾವ್ ಪವಾರ್ ಮಧುಸಾ ಅವರನ್ನು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮಕ್ಕೆ, ಶಿಗ್ಗಾಂವ್ ತಾಲೂಕಿನ ಕುನ್ನೂರು ಗ್ರಾಮದ ರುದ್ರಪ್ಪ ಹಡಪದ ಅವರನ್ನು ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ, ಸವಣೂರು ನಗರದ ಪಾಂಡುರಂಗ ಶಂಕರರಾವ್ ಮಹೇಂದ್ರಕಾರ್ ಮತ್ತು ಸವಣೂರಿನ ತಿಪ್ಪಣ್ಣ ಎಲ್ಲಪ್ಪ ಸುಬ್ಬಣ್ಣನವರ್ ಅವರನ್ನು ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ, ರಾಣೆಬೆನ್ನೂರಿನ ರಾಮಚಂದ್ರಪ್ಪ ಹನುಮಂತಪ್ಪ ಐರಣಿ ಮತ್ತು ಸವಣೂರಿನ ಹೊಸೂರು ಗ್ರಾಮದ ಕೃಷ್ಣಪ್ಪ ಸುಣಗಾರ ಮತ್ತು ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಬಸವರಾಜ್ ಫಕೀರಪ್ಪ ಕನಸುರವರನ್ನು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ನಿಗಮ-ಮಂಡಳಿಗಳಿಗೆ ಹೊಸದಾಗಿ ನೇಮಕಗೊಂಡಿರುವವರ ಆದೇಶ ತಕ್ಷಣ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ. ಆದರೆ ಇವರ ಅವಧಿ ಎಷ್ಟು ದಿನಕ್ಕೆ ಅನ್ನುವುದನ್ನು ಸ್ಪಷ್ಟಪಡಿಸಲಾಗಿಲ್ಲ. ಸಾಮಾನ್ಯವಾಗಿ ಒಂದು ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರಾಗಿ ನೇಮಕಗೊಂಡವರು ಆ ಪಕ್ಷದ ಸರ್ಕಾರ ಅವಧಿ ಮುಗಿದ ತಕ್ಷಣ ನೇಮಕಾತಿ ಅವಧಿಯು ಅಂತ್ಯಗೊಳ್ಳುತ್ತದೆ. ನಿಗಮ ಮಂಡಳಿಗಳ ನೇಮಕಾತಿಗೆ ಬಿಜೆಪಿ ಪಕ್ಷದಲ್ಲಿ ರಾಜ್ಯಾದ್ಯಂತ ಕಾರ್ಯಕರ್ತರು, ಸ್ಥಳೀಯ ಮುಖಂಡರಿಂದ ಹೆಚ್ಚಿನ ಒತ್ತಡವಿದ್ದರೂ ಹಾವೇರಿ ಜಿಲ್ಲೆಗೆ ಸೀಮಿತವಾಗಿ ನೇಮಕ ಮಾಡಿರುವುದು ಪಕ್ಷದ ಒಳಗೆ ಆಂತರಿಕವಾಗಿ ಚರ್ಚೆಯನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ:ಬಿಜೆಪಿ ಚುನಾವಣಾ ಪ್ರಚಾರ ಸಮಿತಿಗೆ ಸಿಎಂ ಬೊಮ್ಮಾಯಿ ಅಧ್ಯಕ್ಷ, ರಮೇಶ್​ ಜಾರಕಿಹೊಳಿಗೂ ಸ್ಥಾನ

ABOUT THE AUTHOR

...view details