ಕರ್ನಾಟಕ

karnataka

ETV Bharat / state

ನಾಳೆ ಸಿಎಂ ಬೊಮ್ಮಾಯಿಗೆ ಹುಟ್ಟುಹಬ್ಬದ ಸಂಭ್ರಮ: ಬರ್ತಡೇ ಸೆಲೆಬ್ರೇಷನ್ ಮಾಡಿಕೊಳ್ಳಲ್ಲ ಅಂದ್ರು ಸಿಂಪಲ್ ಸಿಎಂ - ಬೊಮ್ಮಾಯಿಗೆ ಹುಟ್ಟು ಹಬ್ಬದ ಸಂಭ್ರಮ

ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 62ನೇ ವಸಂತಕ್ಕೆ ಕಾಲಿಡಲಿದ್ದಾರೆ. ಮೊದಲಿನಿಂದಲೂ ಹುಟ್ಟುಹಬ್ಬದ ಆಚರಣೆಯಿಂದ ದೂರವಿರುವ ಸಿಎಂ ಬೊಮ್ಮಾಯಿಯವರು, ನಾಳೆ ತಮ್ಮ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

CM Basavaraj Bommai decided not to celebrate birthday
ಹುಟ್ಟುಹಬ್ಬದ ಆಚರಿಸದಿರಲು ಸಿಎಂ ಬೊಮ್ಮಾಯಿ ನಿರ್ಧಾರ

By

Published : Jan 27, 2022, 9:22 PM IST

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಳೆ 62ನೇ ಹುಟ್ಟುಹಬ್ಬದ ಸಂಭ್ರಮ. ಸರಳ ಸಜ್ಜನಿಯ ರಾಜಕಾರಣಿಯಾಗಿರುವ ಬೊಮ್ಮಾಯಿ ಜನತಾ ಪರಿವಾರದಿಂದ ಬಿಜೆಪಿ ತಕ್ಕೆಗೆ ಸಿಲುಕಿ ಮುಖ್ಯಮಂತ್ರಿಗಾದಿಯನ್ನೂ ಅಲಂಕರಿಸಿದ್ದು, ಸರಳತೆಯಿಂದಲೇ ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ. ಹುಟ್ಟುಹಬ್ಬದ ಆಚರಣೆಯಿಂದ ದೂರವಿರುವ ಅವರು, ನಾಳೆ ತಮ್ಮ ಬರ್ತಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಜನತಾ ಪರಿವಾರದ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ಹಾಗೂ ಗಂಗಮ್ಮ ಅವರ ಪುತ್ರರಾಗಿ ಬಸವರಾಜ​​​​ ಬೊಮ್ಮಾಯಿ ಅವರು 1960ರ ಜನವರಿ.28 ರಂದು ಜನಿಸಿದರು. ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿಯಾಗಿರುವ ಅವರು, ಬಿ.ವಿ ಭೂಮರಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್​​​​​ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಬೊಮ್ಮಾಯಿಯವರು, 1998 ಮತ್ತು 2004 ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್​​​​​ಗೆ ಆಯ್ಕೆಯಾಗಿದ್ದರು. ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಆಗಿ ಕೆಲಸ ಮಾಡಿದ್ದಾರೆ.

2008 ರಲ್ಲಿ ಜನತಾ ಪರಿವಾರ ತೊರೆದು ಯಡಿಯೂರಪ್ಪ ಮೂಲಕ ಬಿಜೆಪಿ ಸೇರಿದರು. ನಂತರ ಪರಿಷತ್ ಅಖಾಡ ಬಿಟ್ಟು ಶಾಸಕ ಸ್ಥಾನದತ್ತ ಮುಖ ಮಾಡಿದರು. 2008 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಮೊದಲ ಬಾರಿಗೆ ಆಯ್ಕೆಗೊಂಡರು. ಅಂದು ಯಡಿಯೂರಪ್ಪ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ ನಿರ್ವಹಿಸಿದ್ದರು. ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದ ಬೊಮ್ಮಾಯಿ ಈಗ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದ ವೇಳೆಯಲ್ಲಿಯೇ ಬೊಮ್ಮಾಯಿ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಳ್ಳುತ್ತಿದ್ದು, ನಾಳೆ ವಿಧಾನಸೌಧದಲ್ಲಿ ಆರು ತಿಂಗಳ ಸಾಧನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈವರೆಗೂ ಹುಟ್ಟುಹಬ್ಬ ಮಾಡಿಕೊಳ್ಳದ ಪರಿಪಾಠ ಬೆಳೆಸಿಕೊಂಡಿರುವ ಬೊಮ್ಮಾಯಿ ಅವರಿಗೆ ಶುಕ್ರವಾರ ಜ.28 ಮುಖ್ಯಮಂತ್ರಿಯಾಗಿ ಮೊದಲ ಹುಟ್ಟುಹಬ್ಬ. ಆದರೂ ನಾಳೆ ಹುಟ್ಟುಹುಬ್ಬ ಆಚರಿಸಿಕೊಳ್ಳದಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಎಂದಿನಿಂತೆ ಕಾರ್ಯ ನಿರ್ವಹಣೆ, ಸರ್ಕಾರದ ಸಾಧನಾ ಕಾರ್ಯಕ್ರಮ, ಸಭೆಗಳಲ್ಲಿ ತೊಡಗಿಕೊಂಡು ಕಾಯಕದ ಮೂಲಕವೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details