ಬೆಂಗಳೂರು:ಚಿತ್ರದುರ್ಗದ ಮುರುಘಾರಾಜೇಂದ್ರ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರ ವಿರುದ್ಧ ಪ್ರಕರಣ ದಾಖಲಿಸಲು ಸಂತ್ರಸ್ತರಿಗೆ ಪ್ರಚೋದನೆ ನೀಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಸೌಭಾಗ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನವರಿ 31ಕ್ಕೆ ಹೈಕೋರ್ಟ್ ಮುಂದೂಡಿದೆ. ಎಸ್.ಕೆ.ಬಸವರಾಜನ್ ಮತ್ತವರ ಪತ್ನಿ ಸೌಭಾಗ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ವಿಚಾರಣೆ ಮುಂದೂಡಿತು. ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು ಹಾಜರಾಗಿರಲಿಲ್ಲ. ಹೀಗಾಗಿ ಮುಂದೂಡಲಾಗಿದೆ.
ಪ್ರಕರಣವೇನು?: ಶಿವಮೂರ್ತಿ ಮುರುಘಾ ಶರಣರು ನನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಬಾಲಕಿಯರ ತಾಯಿ 2022ರ ಅಕ್ಟೋಬರ್ 13ರಂದು ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ದಾಖಲಿಸುವ ಹಿಂದೆ ಎಸ್.ಕೆ.ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರ ಪಿತೂರಿ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ ಎನ್ನಲಾದ ಆಡಿಯೋ ಹಾಗೂ ವಿಡಿಯೋ ದಾಖಲೆಗಳ ಆಧಾರದಲ್ಲಿ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು, ಪತಿ-ಪತ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಕಾನೂನುಬಾಹಿರವಾಗಿ ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದು ನಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ. ಅಂತೆಯೇ ಇದು ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕ್ರಮ. ಆದ್ದರಿಂದ ಈ ಕುರಿತ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಬಸವರಾಜನ್ ಮತ್ತು ಸೌಭಾಗ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದಲ್ಲಿ ಚಿತ್ರದುರ್ಗ ಗ್ರಾಮೀಣ ಠಾಣೆ ಪೊಲೀಸರು ಹಾಗೂ ಮುರುಘಾ ಶರಣರಿಂದ ತಾತ್ಕಾಲಿಕ ವ್ಯವಸ್ಥೆಗಾಗಿ ನೇಮಕಗೊಂಡಿರುವ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.